Site icon Vistara News

UNESCO World Heritage List: ಯುನೆಸ್ಕೋ ಪಾರಂಪರಿಕ ಪಟ್ಟಿ ಸೇರಿದ ಹೊಯ್ಸಳ ಬೇಲೂರು, ಹಳೆಬೀಡು ದೇಗುಲಗಳು!

Hoysala Temples entered UNESCO World Heritage List

ನವದೆಹಲಿ/ಬೆಂಗಳೂರು: ಕರ್ನಾಟಕದ ಹೆಗ್ಗುರುತು ಎನಿಸಿಕೊಂಡಿರುವ ‘ಹೊಯ್ಸಳ ದೇಗುಲಗಳ’ (Hoysala Temples) ಈಗ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿವೆ. ಹೊಯ್ಸಳರ ಕಾಲದಲ್ಲಿ ನಿರ್ಮಾಣದವಾದ ಬೇಲೂರು(Beluru), ಹಳೆಬೀಡು (Halebidu) ಮತ್ತು ಸೋಮನಾಥಪುರದ (Somanathpur) ದೇಗುಲಗಳನ್ನು ಈ ಪಟ್ಟಿಗೆ ಸೇರ್ಪಡೆಯಾಗಿರುವ ಮಾಹಿತಿಯನ್ನು ಯುನೆಸ್ಕೋ ಎಕ್ಸ್ ವೇದಿಕೆಯಲ್ಲಿ ಪ್ರಕಟಿಸಿದೆ. 2014ರಿಂದಲೂ ಈ ದೇಗುಲಗಳ ವಿಶ್ವ ಪಾರಂಪರಿಕ ಸಂಭಾವ್ಯ ಪಟ್ಟಿಯಲ್ಲಿ ಜಾಗ ಪಡೆದಿದ್ದವು(UNESCO World Heritage List).

ಸೌದಿ ಅರೇಬಿಯಾ ದಲ್ಲಿ ನಡೆದ 45ನೇ ವಿಶ್ವ ಪಾರಂಪರಿಕ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 16ರಿಂದ ಸಭೆ ಆರಂಭವಾಗಿದೆ. ರವೀಂದ್ರನಾಥ ಠಾಗೋರ್ ಅವರು ಆರಂಭಿಸಿದ ಶಾಂತಿನಿಕೇತನವನ್ನು ಭಾನುವಾರವಷ್ಟೇ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿತ್ತು. ಇದೀಗ ಕರ್ನಾಟಕದ ಹೆಮ್ಮೆಯಾಗಿರುವ ಹೊಯ್ಸಳ ದೇಗುಲಗಳು ವಿಶ್ವ ಪಾರಂಪರಿಕ ಪಟ್ಟಿಯನ್ನು ಸೇರಿವೆ.

ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿರುವುದರಿಂದ ವಿದೇಶಗಳ ಪ್ರವಾಸಿಗರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಲ್ಲದೇ, ಸ್ಥಗಳ ಅಭಿವೃದ್ಧಿಗೆ ವಿಶ್ವ ಪಾರಂಪರಿಕ ನಿಧಿಯಿಂದ ನೆರವು ದೊರೆಯುತ್ತದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಹರ್ಷ

ಎಚ್ ಕೆ ಪಾಟೀಲ್

ರಾಜ್ಯದ ಐತಿಹ್ಯ ಮತ್ತು ಕಲೆ- ಸಂಸ್ಕೃತಿಗೆ ಪ್ರತೀಕವಾಗಿರುವ 12 ಮತ್ತು 15ನೇ ಶತಮಾನಗಳಲ್ಲಿ ನಿರ್ಮಾಣಗೊಂಡಿರುವ ಹಾಸನ ಜಿಲ್ಲೆಯ ಬೆಲೂರು, ಹಳೆಬೀಡು ಮತ್ತು ಮೈಸೂರು ಜಿಲ್ಲೆಯ ಸೋಮನಾಥಪುರ ದೇಗುಲಗಳಿಗೆ ಜಾಗತಿಕ ಮನ್ನಣೆ ದೊರೆತಿದೆ. ಯೂನೆಸ್ಕೋ ಈ ಮೂರು ದೇಗುಲಗಳನ್ನು ʼವಿಶ್ವ ಪಾರಂಪರಿಕ ತಾಣʼ ಎಂದು ಘೋಷಣೆ ಮಾಡಿರುವುದಾಗಿ ಪ್ರವಾಸೋದ್ಯಮ ಮತ್ತು ಕಾನೂನು ಸಚಿವ ಎಚ್.ಕೆ. ಪಾಟೀಲ್‌ ಅವರು ತಿಳಿಸಿದ್ದಾರೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಂಪದ್ಭರಿತ ಕರ್ನಾಟಕ ರಾಜ್ಯದ ಸಂಸ್ಕೃತಿ- ಪರಂಪರೆ ಹಿರಿತನಕ್ಕೆ ಮತ್ತು ರಾಜ್ಯ ಸರ್ಕಾರದ ಸತತ ಪರಿಶ್ರಮದ ಫಲವಾಗಿ ರಾಜ್ಯದ ಈ ಮೂರು ದೇಗುಲಗಳ ಕಲೆ ಮತ್ತು ಪರಂಪರೆಯನ್ನು ಯುನೆಸ್ಕೋ ಗುರ್ತಿಸಿದೆ ಎಂದ ಅವರು, ಈ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯುನೆಸ್ಕೋ ಮನ್ನಣೆ ಸಹಕಾರಿ ಆಗಲಿದೆ ಎಂದಿದ್ದಾರೆ.

ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಬೆಳವಣಿಗೆಯಿಂದಾಗಿ ಈ ದೇಗುಲಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಸ್ಥಳೀಯ ಕಲಕುಶಲ ಮತ್ತು ಗುಡಿ ಕೈಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕುವ ಜತೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಅವಕಾಶ ಮಾಡಿಕೊಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವೂ ಸಹ ಈ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮುಂದಡಿ ಇರಿಸಲಿದೆ ಎಂದು ಪ್ರವಾಸೋದ್ಯಮ ಸಚಿವರು ಭರವಸೆ ನೀಡಿದ್ದಾರೆ.

ರಿಯಾದ್‌ನಲ್ಲಿ ಯೂನೆಸ್ಕೋ ನಿರ್ಧಾರ

ಸೋಮವಾರ ಸೌದಿ ಅರೆಬಿಯಾದ ರಾಜಧಾನಿ ರಿಯಾದ್‌ನಲ್ಲಿ ನಡೆದ ಯೂನೆಸ್ಕೋದ 45ನೇ ಸರ್ವ ಸದಸ್ಯರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, 2014ರಲ್ಲಿ ಆಯ್ಕೆ ಪಟ್ಟಿಗೆ ಈ ದೇಗುಲಗಳನ್ನು ಸೇರ್ಪಡೆಗೊಳಿಸಲಾಗಿತ್ತು. 2018ರಲ್ಲಿ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ)ಗೆ ರಾಜ್ಯ ಸರ್ಕಾರವು ಈ ದೇಗುಲಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿತ್ತು. ಈ ಬೆಳವಣಿಗೆಗಳ ನಂತರ 2022ರಲ್ಲಿ ಅಂತರಾಷ್ಟ್ರೀಯ ಪುರಾತನ ಸ್ಮಾರಕ ಮತ್ತು ಪ್ರದೇಶಗಳ ಸಮಿತಿಯು ಇಲ್ಲಿಗೆ ಭೇಟಿ ನೀಡಿ, ಈ ದೇಗುಲಗಳ ಹಿರಿಮೆ ಬಗ್ಗೆ ಯೂನೆಸ್ಕೋಗೆ ವರದಿ ನೀಡಿತ್ತು ಎಂದು ಸಚಿವರು ವಿವರಿಸಿದರು.

ಬೇಲೂರು, ಹಳೆಬೀಡು ಮತ್ತು ಸೋಮನಾಥಪುರ ದೇಗುಲಗಳ ಬಗ್ಗೆ ಸಲ್ಲಿಕೆಯಾಗಿದ್ದ ವರದಿಯನ್ನು ಆಧರಿಸಿ ಸೋಮವಾರ ನಡೆದ ಯೂನೆಸ್ಕೋ ಸಭೆಯಲ್ಲಿ ಭಾರತವೂ ಸೇರಿದಂತೆ 21 ದೇಶಗಳು ಈ ದೇಗುಲಗಳನ್ನು ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆ ಮಾಡಲು ಸರ್ವಾನುಮತದ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ನಾಲ್ಕನೇ ತಾಣ

ಬೇಲೂರು, ಹಳೆ ಬೀಡು, ಸೋಮನಾಥಪುರ ದೇಗುಲಗಳು ಯುನೆಸ್ಕೋ ಪಟ್ಟಿಗೆ ನಾಲ್ಕನೇ ತಾಣವಾಗಿ ಸೇರ್ಪಡೆಗೊಂಡಿವೆ ಎಂದು ತಿಳಿಸಿರುವ ಸಚಿವ ಎಚ್.ಕೆ. ಪಾಟೀಲ್‌, ಈಗಾಗಲೇ ರಾಜ್ಯದ ಪಶ್ಚಿಮಘಟ್ಟ ಪ್ರದೇಶ, ಹಂಪೆ, ಪಟ್ಟದಕಲ್ಲು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ ಎಂದಿದ್ದಾರೆ.

ಇನ್ನು ಜಾಗತಿಕ ಪ್ರವಾಸಿತಾಣ

ಕರುನಾಡಿನ ಅಂದಿನ ಕಲೆ- ಸಂಸ್ಕೃತಿಯ ಸಿರಿವಂತಿಕೆ ಮತ್ತು ಸರ್ಕಾರದ ಸತತ ಪರಿಶ್ರಮದ ಪರಿಣಾಮ 12 ಮತ್ತು 15ನೇ ಶತಮಾನದಲ್ಲಿ ಹೊಯ್ಸಳರ ವಿಷ್ಣುವರ್ಧನರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ಮೂರು ದೇಗುಲಗಳನ್ನು ʼಮೃಧು ಕಲ್ಲಿʼನಲ್ಲಿ ನಿರ್ಮಾಣವಾಗಿದೆ. ಇದರ ಕೆತ್ತನೆ ಅಂದಿನ ಕಲೆ- ಸಂಸ್ಕೃತಿ ಮತ್ತು ಪರಂಪರೆಗೆ ಹಿಡಿದ ಕನ್ನಡಿಯಂತಿದೆ. ಇದೀಗ ಈ ಕಲೆ- ಪರಂಪರೆ ಜಾಗತಿಕ ಮಟ್ಟಕ್ಕೆ ತಲುಪಲಿದ್ದು, ಇದರಿಂದ ಈ ಮೂರೂ ದೇಗುಲಗಳು ಜಾಗತಿಕ ಪ್ರವಾಸಿ ತಾಣವಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್‌ ಅವರು ಹರ್ಷ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ: UNESCO World Heritage List: ರವೀಂದ್ರನಾಥ ಠಾಗೋರ್‌ರ ‘ಶಾಂತಿನಿಕೇತನ’ ಈಗ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ!

ಈ ಮೂರು ದೇಗುಲಗಳಿಗೆ ಯೂನೆಸ್ಕೋ ಸ್ಥಾನಮಾನ ದೊರತಿರುವ ಪರಿಣಾಮ ಜಾಗತಿಕ ಮಟ್ಟದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಯೋಜನಾಬದ್ಧ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿದೆ ಎಂದ ಸಚಿವರು, ಈ ಬೆಳವಣಿಗೆಯಿಂದ ಸ್ಥಳೀಯರಿಗೂ ಹೆಚ್ಚಿನ ಅನುಕೂಲ ಆಗಲಿದೆ ಎಂದು ಪ್ರತಿಪಾದಿಸಿದರು.

“ಕನ್ನಡ ನಾಡಿನ ಕಲೆ- ಸಂಸ್ಕೃತಿ, ಪರಂಪರೆಯನ್ನು ನಾಡಿನಾದ್ಯಂತ ಬಿಂಬಿಸುವಲ್ಲಿ ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲಗಳ ಪಾತ್ರ ಪ್ರಮುಖವಾದುದು, ಈ ದೇಗುಲಗಳಿಗೆ ಈ ಹಿಂದೆಯೇ ಜಾಗತಿಕ ಮಟ್ಟದ ಹಿರಿಮೆ ಸಿಗಬೇಕಿತ್ತು. ತಡವಾಗಿಯಾದರೂ ಈಗ ಯೂನೆಸ್ಕೋ ಈ ದೇಗುಲಗಳ ಹಿರಿಮೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಸಿರುವುದು ಶ್ಲಾಘನೀಯ, ಇದಕ್ಕೆ ಕಾರಣರಾದ ಪ್ರವಾಸೋದ್ಯಮ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಕಪಿಲ್‌ ಮೋಹನ್‌ ನೇತೃತ್ವದ ಅಧಿಕಾರಿಗಳು ಮತ್ತು ಯೂನೆಸ್ಕೋಗೆ ವಂದನೆಗಳು ಮತ್ತು ರಾಜ್ಯದ ಜನತೆಗೆ ಅಭಿನಂದನೆ ಎಂದು ಸಚಿವರು ತಿಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version