Site icon Vistara News

ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ; ಸಾಮಾಜಿಕ ಜಾಲತಾಣ ಅಭಿಯಾನಕ್ಕೆ ಸಿಕ್ಕಿತು ಚಾಲನೆ

ಕಾರವಾರ: ಉತ್ತರಕನ್ನಡಿಗರ ಬಹುಬೇಡಿಕೆಯ, ಮಹತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಆರಂಭದಿಂದಲೂ ಒಂದಿಲ್ಲೊಂದು ಅಡೆತಡೆಗಳು ಎದುರಾಗುತ್ತಲೇ ಇದ್ದು, ಪ್ರಾರಂಭವಾಗುವ ಮೊದಲೇ ನನೆಗುದಿಗೆ ಬೀಳುವಂತಾಗಿತ್ತು. ಯೋಜನೆ ಪುನರಾರಂಭಕ್ಕೆ ಜಿಲ್ಲೆಯ ಜನತೆ ವಿವಿಧ ರೀತಿಯಲ್ಲಿ ಹೋರಾಟದ ಮೂಲಕ ಸರ್ಕಾರದ ಗಮನಸೆಳೆಯುವ ಪ್ರಯತ್ನ ನಡೆಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳ ಮೊರೆಹೋಗಲು ಹುಬ್ಬಳ್ಳಿ-ಅಂಕೋಲಾ ರೈಲ್ವೇ ಹೋರಾಟ ಕ್ರಿಯಾ ಸಮಿತಿ ಮುಂದಾಗಿದೆ. ಇದಕ್ಕಾಗಿ ಅಭಿಯಾನವನ್ನೂ ಆರಂಭಿಸಿದೆ.

ಹುಬ್ಬಳ್ಳಿ-ಅಂಕೋಲಾ ರೈಲ್ವೇ ಹೋರಾಟ ಕ್ರಿಯಾ ಸಮಿತಿ ವತಿಯಿಂದ‌ ಮಹತ್ವದ ರೈಲು ಯೋಜನೆ ಜಾರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣ‌ ಜಾಗೃತಿ ಅಭಿಯಾನಕ್ಕೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಹುಬ್ಬಳ್ಳಿ-ಅಂಕೋಲಾ ರೈಲು ನಮ್ಮ ಹಕ್ಕು, ನಮ್ಮ ಅಗತ್ಯತೆ ಎನ್ನುವ ಘೋಷವಾಕ್ಯದೊಂದಿಗೆ ಅಭಿಯಾನವನ್ನು ಪೋಸ್ಟರ್ ಬಿಡುಗಡೆ ಮೂಲಕ ಆರಂಭಿಸಲಾಯಿತು.

ಅಂಕೋಲಾದ ಅರ್ಬನ್ ಬ್ಯಾಂಕಿನಲ್ಲಿ ರೈಲು ಯೋಜನೆ ಅಭಿಯಾನದ‌ ಪೋಸ್ಟರ್‌ನ್ನು ಹುಬ್ಬಳ್ಳಿ-ಅಂಕೋಲಾ ರೈಲು ಹೋರಾಟ ಸಮಿತಿ ಅಧ್ಯಕ್ಷ ರಮಾನಂದ‌ ಬಿ.ನಾಯಕ, ಪುರಸಭಾಧ್ಯಕ್ಷೆ ಶಾಂತಲಾ ಅರುಣ ನಾಡಕರ್ಣಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಉದ್ಯಮಿಗಳ ಸಂಘಟನೆಯ ದೇವಿದಾಸ ಪ್ರಭು, ಅರ್ಬನ್ ಬ್ಯಾಂಕ್ ಅಧ್ಯಕ್ಷ‌ ಭಾಸ್ಕರ ನಾರ್ವೇಕರ್, ವಕೀಲರ ಸಂಘಟನೆಯ ನಾಗಾನಂದ ಬಂಟ ಬಿಡುಗಡೆ ಮಾಡಿದರು.

ನಿರಂತರ ಹೋರಾಟ
ಹೋರಾಟ ಸಮಿತಿ ಅಧ್ಯಕ್ಷ ರಮಾನಂದ‌ ಬಿ. ನಾಯಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ ಜತೆಗೆ ಇಡೀ ರಾಜ್ಯದ ಆರ್ಥಿಕ ವಿಕಾಸಕ್ಕೆ ಪೂರಕವಾಗಿರುವ ಈ ಯೋಜನೆಗೆ ಪದೇ ಪದೆ ಅಡ್ಡಿ ಒಡ್ಡಲಾಗುತ್ತಿದ್ದು, ಇದು ನಿಲ್ಲಬೇಕು. ಸರ್ಕಾರ ಈ ಯೋಜನೆ ಬಗ್ಗೆ ಗಟ್ಟಿ ನಿಲುವು ತಳೆಯಬೇಕಿದೆ. ಎಲ್ಲ ಜನಪ್ರತಿನಿಧಿಗಳ ಸಹಕಾರ ಪಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಯೋಜನೆಯ ಬಗ್ಗೆ ಅಭಿಪ್ರಾಯ ಸಂಗ್ರಹಣೆಗೆ ಬರಲಿರುವ ತಜ್ಞರ ಸಮಿತಿಗೆ ಎಲ್ಲರೂ ಯೋಜನಾಪರ ಅಭಿಪ್ರಾಯ ಸಲ್ಲಿಸಬೇಕು ಎಂದರು.

ಸಮಿತಿಯ ಕಾರ್ಯದರ್ಶಿ ವಿಠ್ಠಲದಾಸ ಕಾಮತ್ ಮಾತನಾಡಿ, ಈ ಯೋಜನೆಯ ಪರ ಜಾಗೃತಿಗಾಗಿ ಸಾಮಾಜಿಕ ಜಾಲತಾಣ ಅಭಿಯಾನ ಆರಂಭಿಸಲಾಗಿದ್ದು ಎಲ್ಲರೂ ಟ್ವಿಟರ್, ಫೇಸ್ ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯೋಜನಾಪರ ಪೋಸ್ಟ್ ದಾಖಲಿಸುವಂತೆ ಕರೆಕೊಟ್ಟರು.

ದಶಕಗಳ ಕನಸಿನ ಯೋಜನೆ
ಅಂಕೋಲಾ-ಹುಬ್ಬಳ್ಳಿ ನಡುವಿನ ರೈಲ್ವೇ ಯೋಜನೆಯು ಹಲವು ದಶಕದ್ದಾಗಿದ್ದು, ಇದು ಈ ಭಾಗದ ಜನರ ಕನಸಿನ ಯೋಜನೆಯಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ಯೋಜನೆಗೆ 1999ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಾಲನೆ ನೀಡಿದ್ದರು. ಆದರೆ, ಯೋಜನೆ ಜಾರಿಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಕೆಲ ಪರಿಸರವಾದಿಗಳು ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ಯೋಜನೆ ಇನ್ನೂ ಜಾರಿಯಾಗಿರಲಿಲ್ಲ. ಉದ್ದೇಶಿತ ರೈಲುಮಾರ್ಗ ಯೋಜನೆಯನ್ನು ವಿರೋಧಿಸುತ್ತಿರುವ ಪ್ರಾಜೆಕ್ಟ್ ವೃಕ್ಷ ಎನ್‌ಜಿಒ ಪರಿಸರ ಸೂಕ್ಷ್ಮವಲಯ ಯೋಜನಾ ಪ್ರದೇಶದಿಂದ ಕೇವಲ 10 ಕಿ.ಮೀ ದೂರವಿದೆ. ಇದು ವನ್ಯಜೀವಿಗಳು ಹಾಗೂ ಪರಿಸರದ ನಾಶವಾಗಲು ಕಾರಣವಾಗಲಿದೆ ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ಒದಗಿಸಿತ್ತು. ಇದರಿಂದ ಯೋಜನೆಗೆ ಹಿನ್ನಡೆಯಾಗಿತ್ತು.

ಆದರೆ ರೈಲ್ವೇ ಸೇವಾ ಸಮಿತಿ ಈ ಸಂಬಂಧ ಅರಣ್ಯ ಇಲಾಖೆಯಿಂದ ಆರ್‌ಟಿಐ ಅಡಿಯಲ್ಲಿ ಮಾಹಿತಿಯನ್ನು ಪಡೆದುಕೊಂಡು, ಯೋಜನೆ ಸ್ಥಳದಿಂದ ಹುಲಿ ಸಂರಕ್ಷಿತ ವಲಯ 14 ಕಿ.ಮೀ ದೂರವಿದೆ ಎಂಬುದನ್ನು ವರದಿ ಸಮೇತ ಕೋರ್ಟ್‌ಗೆ ಮನವರಿಕೆ ಮಾಡಲಾಗಿತ್ತು. ಹೀಗಾಗಿ ಈ ಸಂಬಂಧ ಅಧ್ಯಯನ ಮಾಡಿ ವರದಿ ಸಲ್ಲಿಸಲು ಕೋರ್ಟ್ ತಿಳಿಸಿದ್ದು, ಶೀಘ್ರದಲ್ಲೇ ಸಮಿತಿಯೊಂದು ಪರಿಶೀಲನೆಗೆ ಜಿಲ್ಲೆಗೆ ಆಗಮಿಸುವ ನಿರೀಕ್ಷೆಯನ್ನು ರೈಲ್ವೇ ಸೇವಾ ಸಮಿತಿ ವ್ಯಕ್ತಪಡಿಸಿದೆ.

ಕರಾವಳಿ-ಉತ್ತರ ಕರ್ನಾಟಕದ ಸಂಪರ್ಕ ಕೊಂಡಿ
ಹುಬ್ಬಳ್ಳಿ ಮತ್ತು ಅಂಕೋಲಾ ನಡುವೆ ರೈಲ್ವೆ ಯೋಜನೆ ಪೂರ್ಣಗೊಂಡರೆ ಕರಾವಳಿ ಮತ್ತು ಘಟ್ಟದ ಮೇಲಿನ ಸಂಪರ್ಕ ಕಲ್ಪಿಸಲಿದ್ದು, ಬಂದರುಗಳಲ್ಲಿ ಹೊರ ದೇಶ, ಹೊರ ರಾಜ್ಯಗಳಿಂದ ಬರುವ ವಸ್ತುಗಳನ್ನು ಘಟ್ಟದ ಮೇಲಿನ ಪ್ರದೇಶಕ್ಕೆ ತೆಗೆದುಕೊಂಡು ಹೋಗುವ, ಘಟ್ಟದ ಮೇಲಿನ ವಸ್ತುಗಳನ್ನು ಕರಾವಳಿಗೆ ತಂದು ಸಮುದ್ರ ಮಾರ್ಗವಾಗಿ ಬೇರೆ ದೇಶಗಳಿಗೆ ಕಳುಹಿಸಲು ಸಹಕಾರಿಯಾಗುವುದರಿಂದ ವ್ಯಾಪಾರ, ವ್ಯವಹಾರ ಉದ್ದೇಶದಿಂದ ಯೋಜನೆ ಬಹಳ ಮುಖ್ಯವಾಗಿದೆ.

ಸಂಚಾಲಕ ಉಮೇಶ ನಾಯ್ಕ, ಪ್ರಮುಖರಾದ ಅರುಣ ನಾಡಕರ್ಣಿ, ಕೆ.ಎಚ್.ಗೌಡ, ಪದ್ಮನಾಭ ಪ್ರಭು, ವಿನೋದ ನಾಯಕ ಭಾಸಗೋಡ, ರವೀಂದ್ರ ಕೇಣಿ, ಸಂಜಯ ನಾಯ್ಕ, ಪುರುಷೋತ್ತಮ ನಾಯ್ಕ, ಬ್ಯಾಂಕ್ ಜನರಲ್ ಮ್ಯಾನೇಜರ್ ರವೀಂದ್ರ ವೈದ್ಯ, ಸಂಗಾತಿ ರಂಗ ಭೂಮಿಯ ಕೆ. ರಮೇಶ, ಪರ್ತಕರ್ತರ ಸಂಘದ ಅರುಣ ಶೆಟ್ಟಿ, ರಾಘು ಕಾಕರಮಠ, ನಾಗರಾಜ ಜಾಂಬಳೇಕರ್, ನಿರ್ದೇಶಕ ಉಮೇಶ ನಾಯ್ಕ, ಪುರಸಭೆ ಸದಸ್ಯ ಮಂಜುನಾಥ ನಾಯ್ಕ ಮತ್ತಿತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Exit mobile version