Site icon Vistara News

Animals death : ಅರ್ಜುನ ಸಾವಿನ ಬೆನ್ನಿಗೇ ಒಂದು ಆನೆ ಮರಿ, ಎರಡು ಹುಲಿಗಳ ನಿಗೂಢ ಮೃತ್ಯು

Elephant infant death in hubballi

ಹುಬ್ಬಳ್ಳಿ/ಚಾಮರಾಜನಗರ: ಹಾಸನ ಜಿಲ್ಲೆಯ ಯಸಳೂರು ಕಾಡಿನಲ್ಲಿ ಪುಂಡಾನೆಯನ್ನು ಹಿಡಿಯುವ ಕಾರ್ಯಾಚರಣೆಯ ವೇಳೆ ಆನೆ ಅರ್ಜುನನ (Elephant Arjuna) ಸಾವಿಗೀಡಾದ ನಂತರ ಪ್ರಾಣಿಗಳ ಸಾವಿನ ಬಗ್ಗೆ ದೊಡ್ಡದೊಂದು ಆಕ್ರೋಶ ಕೇಳಿಬಂದಿದೆ. ಇದರ ನಡುವೆಯೇ ಈಗ ಒಂದು ಆನೆ ಮರಿ (Elephant Infant) ಮತ್ತು ಎರಡು ಹುಲಿಗಳು ನಿಗೂಢವಾಗಿ ಪ್ರಾಣ ಕಳೆದುಕೊಂಡಿರುವುದು ಚರ್ಚೆಗೆ (Animals death) ಕಾರಣವಾಗಿದೆ.

ಆನೆ ಮರಿ ನಿಗೂಢ ಸಾವು

ಧಾರವಾಡ ಜಿಲ್ಲೆಯ ಕಲಘಟಗಿ ಬಳಿ ಕಾಡಾನೆ ಮರಿಯೊಂದು ನಿಗೂಢವಾಗಿ ಪ್ರಾಣ ಕಳೆದುಕೊಂಡಿದೆ. ಕಂದ್ಲಿ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಆನೆಮರಿ ಶವ ಪತ್ತೆಯಾಗಿದೆ.

ಕಳೆದ ನಾಲ್ಕು ದಿನಗಳಿಂದ ತಾಲೂಕಿನ ಸೂಳಿಕಟ್ಟಿ, ಮಸಳಿಕಟ್ಟಿ, ಸಂಗಮೇಶ್ವರ ಗ್ರಾಮಗಳ ಸುತ್ತಮುತ್ತ ಆನೆಗಳ ಹಿಂಡು ಕಾಣಿಸಿಕೊಂಡಿತ್ತು. ಕಾಡಿನಿಂದ ನಾಡಿನತ್ತ ಬಂದಿದ್ದ ಮೂರು ಕಾಡಾನೆಗಳ ಗುಂಪಿನಲ್ಲಿ ಒಂದು ಆನೆ ಮರಿಯೂ ಇತ್ತು. ಅದು ಈಗ ಪ್ರಾಣ ಕಳೆದುಕೊಂಡಿದೆ ಎನ್ನಲಾಗಿದೆ.

ಸುಮಾರು ಒಂದೂವರೆ ವರ್ಷದ ಆನೆ ಮರಿ ಗುಂಪಿನಿಂದ ಬೇರ್ಪಟ್ಟಿರುವ ಸಾಧ್ಯತೆ ಇದೆ. ಬಳಿಕ ಆಹಾರ ಸಮಸ್ಯೆಯಿಂದ ಸಾವನ್ನಪ್ಪಿರಬಹುದು ಎಂದು ಶಂಕೆ‌ ವ್ಯಕ್ತವಾಗಿದೆ. ಸ್ಥಳೀಯರಿಗೆ ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅದನ್ನು ತಿಳಿಸಲಾಯಿತು.

ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೈದ್ಯರು ಆನೆ ಮರಿಯ ಮರಣೋತ್ತರ ಪರೀಕ್ಷೆ ನಡೆಸಿದರು. ಕಲಘಟಗಿ ಬಳಿಯ ಕಂದ್ಲಿ ಗ್ರಾಮದ ಕಾಡಿನಲ್ಲೇ ಮರಿ ಆನೆಯ ಅಂತ್ಯ ಸಂಸ್ಕಾರ ನಡೆಸಲಾಯಿತು.

ಇದನ್ನೂ ಓದಿ : Elephant Arjuna : ಅರ್ಜುನನ ಬದುಕೇ ಒಂದು ಹೋರಾಟ; ದುರಂತ ನಾಯಕನಿಗೆ ಕಣ್ಣೀರ ವಿದಾಯ

ಚಾಮರಾಜನಗರ ಬಳಿ ಎರಡು ಹುಲಿ ಸಾವು

ಚಾಮರಾಜನಗರದ ಕೊತ್ತಲವಾಡಿ ಬಳಿ ಎರಡು ಹುಲಿಗಳ ಕಳೇಬರ ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಕೊತ್ತಲವಾಡಿ ಕರಿಕಲ್ಲು ಕ್ವಾರಿ ಬಳಿ ಹುಲಿಗಳು ಸತ್ತು ಬಿದ್ದಿರುವುದು ಕಂಡುಬಂದಿದೆ.
ಹುಲಿಗಳ ಸಾವಿನ ಹಿಂದಿನ ಸ್ಪಷ್ಟವಾಗಿಲ್ಲ. ಎರಡೂ ಹುಲಿಗಳ ಕಳೇಬರ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ಸ್ಥಳಕ್ಕೆ ಬಿ‌ಆರ್‌ಟಿ ಹುಲಿರಕ್ಷಿತಾರಣ್ಯದ ಅಧಿಕಾರಿಗಳ ದೌಡಾಯಿಸಿದ್ದಾರೆ.

Exit mobile version