Site icon Vistara News

Lady Lorry Driver : ಇದಪ್ಪಾ woman power; ಬೃಹತ್‌ ಗಾತ್ರದ ಲಾರಿಗಳನ್ನೂ ಸಲೀಸಾಗಿ ಓಡಿಸುವ ಗಟ್ಟಿಗಿತ್ತಿ

Lady Lorry Driver Hubballi2

ಪರಶುರಾಮ್‌ ತಹಶೀಲ್ದಾರ್‌, ವಿಸ್ತಾರ ನ್ಯೂಸ್‌ ಹುಬ್ಬಳ್ಳಿ

ಉದರ ನಿಮಿತ್ತಂ ಬಹುಕೃತ ವೇಷಂ ಅಂತಾರೆ. ಹೊಟ್ಟೆ ಹೊರೆಯಲು ಏನಾದರೂ ಕೆಲಸ ಮಾಡಲೇ ಬೇಕು‌. ಕೆಲವು ತುಂಬ ಶ್ರಮ ಬೇಡುವ ಕೆಲಸಗಳನ್ನು ಮಹಿಳೆಯರು ಮಾಡೋದು ಕಷ್ಟ ಅಂತಾರೆ. ಆದರೆ, ಇಂಥ ಪುರುಷರಿಗೇ ಸೀಮಿತವಾದ ಕೆಲಸಗಳನ್ನು ಮಾಡುವ ಮೂಲಕವೂ ಕೆಲವರು ಗಮನ (powerful Ladies) ಸೆಳೆಯುತ್ತಿದ್ದಾರೆ. ಹುಬ್ಬಳ್ಳಿಯ (Hubballi News) ಮಹಿಳೆಯೊಬ್ಬರು ಲಾರಿ ಚಾಲನೆ ಮಾಡುತ್ತಾ ಬದುಕು (Lady Lorry Driver) ಕಟ್ಟಿಕೊಂಡಿದ್ದಾರೆ. ಗೂಡ್ಸ್ ಲಾರಿಗಳನ್ನು ಓಡಿಸಿ ಅನಾರೋಗ್ಯ ಪೀಡಿತ ತಂದೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಹೀಗೆ ಬೃಹತ್‌ ಗಾತ್ರದ ಲಾರಿ ಓಡಿಸುತ್ತಿರುವ ಇವರ ಹೆಸರು ಶೋಭಾ ತೋಟದ. ಪುರುಷರು ಚಾಲನೆ ಮಾಡುವ ಬೃಹದ್‌ ಆಕಾರದ ವಾಹನಗಳನ್ನು ಲೀಲಾಜಾಲವಾಗಿ ಚಾಲನೆ ಮಾಡುವ ಇವರು ಹುಬ್ಬಳ್ಳಿಯ ಫೇಮಸ್‌ ಚಾಲಕಿ. ನಾಲ್ಕು ಚಕ್ರದ ವಾಹನಗಳಿಂದ ಆರಂಭವಾದ ಶೋಭಾ ಅವರ ಡ್ರೈವಿಂಗ್‌ ಜರ್ನಿ 20 ಚಕ್ರದ ವಾಹನಗಳನ್ನು ಓಡಿಸುವ ಹಂತಕ್ಕೆ ತಲುಪಿದೆ.

ಆರಂಭದಿಂದಲೂ ಚಾಲಕಿಯಾಗಬೇಕು ಎಂಬ ಕನಸು ಹೊಂದಿದ್ದ ಶೋಭಾ ಅವರು ನಾಲ್ಕು ಚಕ್ರದ ಕಾರು ಓಡಿಸುವ ಮೂಲಕ ಚಾಲನಾ ರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಆರಂಭವಾದ ಇವರ ಪಯಣ ಇದೀಗ 20 ಚಕ್ರದ ವಾಹನಗಳನ್ನು ಓಡಿಸುವ ಮಟ್ಟಿಗೆ ಬಂದು ನಿಂತಿದೆ. ಸಾರಿಗೆ ಇಲಾಖೆಯಲ್ಲಿ ತರಬೇತಿ ಪಡೆದ ಶೋಭಾ ಅವರು ಇದೀಗ ಹುಬ್ಬಳ್ಳಿಯಲ್ಲಿ ಲಾರಿ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಮಹಿಳೆಯರು ದ್ವಿಚಕ್ರ ವಾಹನ ಚಾಲನೆಯಲ್ಲಿ ಕಾಣಿಸಿಕೊಂಡರೆ, ನಗರಕ್ಕೆ ಬಂದರೆ ಕೆಲ ಮಹಿಳೆಯರು ಕಾರು ಓಡಿಸುವದನ್ನು ಕಾಣಬಹುದು. ಆದರೆ, ಶೋಭಾ ಅವರು ಭಾರೀ ಗಾತ್ರದ ವಾಹನಗಳನ್ನು ಯಾವುದೇ ಅಳುಕಿಲ್ಲದೆ, ಪುರುಷರಿಗೆ ಕಡಿಮೆ ಇಲ್ಲ ಎನ್ನುವಂತೆ ಚಾಲನೆ ಮಾಡುತ್ತಾರೆ. ಪುರುಷರಂತೆ ಭಾರೀ ಗಾತ್ರದ ವಾಹನ ಏರುವ ಶೋಭಾ ಸ್ಟೇರಿಂಗ್ ಮುಂದೆ ಕುಳಿತರೇ ಮುಗೀತು. ವಾಹನ ತಲುಪಬೇಕಾದ ಜಾಗಕ್ಕೆ ತಲುಪಿಸಿ ಅದರಲ್ಲಿ ಇರುವ ಸಾಮಗ್ರಿಗಳನ್ನು ಇಳಿಸಿ ನಂತರ ತಮ್ಮ ಜಾಗಕ್ಕೆ ಮರುಳುತ್ತಾರೆ.

ಇದನ್ನೂ ಓದಿ : Raja Marga Column : ಗೆದ್ದವರ ಕಥೆಗಿಂತಲೂ ಸೋತವರ ಕಥೆಗಳೇ ಹೆಚ್ಚು ಕುತೂಹಲಕಾರಿ!

ಟಿಪ್ಪರ್, ಲಾರಿ, ಬಸ್ ಸೇರಿ ಭಾರಿ ಗಾತ್ರದ ವಾಹನಗಳನ್ನು ಶೋಭಾ ಸುಲಭವಾಗಿ ಹ್ಯಾಂಡಲ್ ಮಾಡುತ್ತಾರೆ. ಶೋಭಾ ಅವರಿಗೆ ಸಣ್ಣ ವಯಸ್ಸಿನಿಂದಲೂ ಚಾಲಕಿಯಾಗಬೇಕು ಎನ್ನುವ ಕನಸಿದ್ದರೂ ಅವರ ಪಯಣ ಎಲ್ಲರಂತೆ ಇರಲಿಲ್ಲ. ಆರಂಭದಲ್ಲಿ ಸಾಕಷ್ಟು ಅಡ್ಡಿ ಆತಂಕಗಳಿದ್ದವು.

Lady Lorry Driver : ಶೋಭಾ ಚಾಲನೆ ಕಲಿತಿದ್ದು ಹೇಗೆ?

ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದವರಾದ ಶೋಭಾ, ಗ್ರಾಮದಿಂದ ನಗರಕ್ಕೆ ಬಂದು ಕಾರು ಓಡಿಸುವುದನ್ನು ಕಲಿತಿದ್ದಾರೆ. ನಂತರ ಪರಿಚಯದ ಚಾಲಕರ ಸಹಾಯದಿಂದ ದೊಡ್ಡ ದೊಡ್ಡ ವಾಹನಗಳನ್ನು ಓಡಿಸು‌ವುದನ್ನು ಕಲಿತಿದ್ದಾರೆ. ತಮ್ಮ ಚಾಲನಾ ನೈಪುಣ್ಯದಿಂದ ಇದೀಗ ಗೂಡ್ಸ್ ಲಾರಿ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶೋಭಾ ಅವರು ತಮ್ಮದೇ ಸಂಪಾದನೆಯಲ್ಲಿ ತಂದೆಯನ್ನು ಸಲಹುತ್ತಿದ್ದಾರೆ. ಕುಟುಂಬ ನಿರ್ವಹಣೆಗಾಗಿ ಶೋಭಾ ಮದುವೆ ಕೂಡ ಆಗಿಲ್ಲ. ತಂದೆ ಅನಾರೋಗ್ಯ ಪೀಡಿತರು. ಹೀಗಾಗಿ ಗಂಡು ಮಗನಂತೆ ದುಡಿದು ಮಗನಂತೆ ಮನೆ ಸಲಹುತ್ತಿದ್ದಾರೆ. ಎಸ್ಎಸ್‌ಎಲ್‌ಸಿ ಓದಿರುವ ಶೋಭಾಗೆ ಸಾರಿಗೆ ಇಲಾಖೆಯಲ್ಲಿ ಚಾಲಕಿಯಾಗಬೇಕು ಎನ್ನುವ ಆಸೆ ಇದೆ‌. ಅದಕ್ಕಾಗಿ ನಿರ್ವಾಹಕಿ ಮತ್ತು ಚಾಲಕಿ ಲೈಸೆನ್ಸ್ ಪಡೆದಿದ್ದು, ತಮ್ಮ ಕನಸನ್ನು ನನಸು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಶೋಭಾ ಅವರು ಹೇಗೆ ವಾಹನ ಚಲಾಯಿಸುತ್ತಾರೆ ನೋಡಿ

Exit mobile version