Site icon Vistara News

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Neha Murder Case

ಹುಬ್ಬಳ್ಳಿ: ಪ್ರೀತಿಸಲು‌ ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಯಾಜ್‌ ಎಂಬಾತ ಕಾರ್ಪೋರೇಟರ್‌ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೆ (Neha Murder Case) ಸಂಬಂಧಿಸಿದಂತೆ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು. ಪ್ರತಿಭಟನಾಕಾರರಿಂದ ದುಃಖ, ಆಕ್ರೋಶ ಎಲ್ಲವೂ ಒಟ್ಟೊಟ್ಟಿಗೆ ಬಂದಿತ್ತು. ನೇಹಾಳನ್ನು ಕೊಂದ ಆರೋಪಿ ಫಯಾಜ್‌ ವಿರುದ್ಧ ಶೂಟೌಟ್ ಆರ್ಡರ್‌ ಮಾಡಿ, ಎನ್‌ಕೌಂಟರ್ ಮಾಡಿ ಬಿಸಾಕಿ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ರಸ್ತೆ ತಡೆದು ಆಕ್ರೋಶ

ನೇಹಾ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು. ಬೆಳಗಾವಿಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಸಂಕೇಶ್ವರ-ಸವದತ್ತಿ ಹೆದ್ದಾರಿ ತಡೆದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜೆಡಿಎಸ್ ನಾಯಕ ಸೌರಬ್ ಛೋಪ್ರಾ ವಿರೂಪಾಕ್ಷ ಮಾಮನಿ ಸೇರಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಆರೋಪಿ ಫಯಾಜ್‌ನನ್ನು ಗಲ್ಲಿಗೇರಿಸಲು ಒತ್ತಾಯಿಸಿದಲ್ಲದೇ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎದುರು ದಲಿತ ವಿಮೋಚನಾ ಸಮಿತಿ ಬೃಹತ್ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅವರಿಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೊಲೆಗಡುಕನಿಗೆ ಕಠಿಣ ಶಿಕ್ಷೆ ನೀಡಬೇಕು, ಎನ್‌ಕೌಂಟರ್ ಮಾಡಿ ಎಂದು ಘೋಷಣೆ ಕೂಗಿದರು. ಹುಬ್ಬಳ್ಳಿ- ಧಾರವಾಡ‌ ರಸ್ತೆ ಸಂಚಾರ ಬಂದ್ ಮಾ‌ಡಿ‌ ಕಿಡಿಕಾರಿದರು. ಇತ್ತ ಹತ್ಯೆ ಖಂಡಿಸಿ ರಾಯಚೂರು ‌ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಎಬಿವಿಪಿ ಪ್ರತಿಭಟನೆ ನಡೆಸಿತು. ಕಾಲೇಜು ಕ್ಯಾಂಪಸ್ ಬಳಿ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಿದಲ್ಲದೆ, ಪ್ರಕರಣವನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿದರು.

ಬಳ್ಳಾರಿಯ ರೈಲ್ವೇ ನಿಲ್ದಾಣದ ಪಕ್ಕ ಇರುವ ಗಾಂಧಿ ಪ್ರತಿಮೆ ಬಳಿ ವಿವಿಧ ಸಂಘಟನೆಯ ನೂರಾರು ಸದಸ್ಯರಿಂದ ಪ್ರತಿಭಟಿಸಿದರು. ಆರೋಪಿ ಫಯಾಜ್‌ನನ್ನು ಗಲ್ಲಿಗೆ ಏರಿಸುವಂತೆ ಒತ್ತಾಯಿಸಿದರು. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೂಡಲೇ ಕೊಲೆ ಆರೋಪಿ ಫಯಾಜ್‌ನನ್ನು ಎನ್‌ಕೌಂಟರ್ ಮಾಡಬೇಕು ಎಂದು ವೀರಶೈವ ಸಮಾಜದ ಮುಖಂಡ ಮಹೇಶ್ವರ ಸ್ವಾಮಿ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: Neha Murder Case: ಐಸಿಸ್‌ ಮಾದರಿಯಲ್ಲಿ ನೇಹಾಗೆ ಚಾಕು ಇರಿತ; ಲವ್‌ ಜಿಹಾದ್‌ ಫಲಿಸದ್ದಕ್ಕೆ ಕೃತ್ಯ: ಪ್ರಮೋದ್‌ ಮುತಾಲಿಕ್

ಯಾವ ದಾಕ್ಷಿಣ್ಯ ಇಟ್ಟುಕೊಳ್ಳದೇ ಮುಕ್ತ ವಿಚಾರಣೆ ಆಗಲಿ

ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರದಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು. ಈ ಕೊಲೆ ನಿಜಕ್ಕೂ ದುರಂತದ ಘಟನೆ ನಾನು ಸಿಸಿಟಿವಿಯನ್ನು ನೋಡಿದ್ದೇನೆ. ಚಾಕು ಇರಿದಾಗ ಈ ಹುಡುಗಿಯ ನೋವು ಹೇಗಿರಬಹುದು? ಅದನ್ನ ನೋಡಿದ ತಂದೆ ಮತ್ತು ತಾಯಿಗೆ ಹೇಗೆ ಸಂಕಟ ಆಗಿರಬಹುದು. ಯಾವ ದಾಕ್ಷಿಣ್ಯ ಇಟ್ಟುಕೊಳ್ಳದೇ ಪೊಲೀಸರು ಮುಕ್ತವಾಗಿ ವಿಚಾರಣೆ ನಡೆಸಬೇಕು. ಒಂದೊಂದು ಜೀವವೂ ಕೂಡ ಅಮೂಲ್ಯ, ಈ ರೀತಿಯ ದುರುಳರಿಗೆ ಕಠಿಣ ಶಿಕ್ಷೆಯಾಗಬೇಕು. ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.

ಮುದ್ದು ಮಗಳಿಗೆ ಕಣ್ಣೀರ ವಿದಾಯ

ಬಸವ ನಗರದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಅಂತಿಮ ಯಾತ್ರೆ ಮೂಲಕ ಮಂಟೂರು ರಸ್ತೆಯಲ್ಲಿರುವ ಸ್ಮಶಾನಕ್ಕೆ ಪಾರ್ಥಿವ ಶರೀರ ತರಲಾಯಿತು. ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನದ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಎಂಸಿಎ ಪ್ರಥಮ ವರ್ಷದಲ್ಲಿ ಓದುತ್ತಿದ್ದ ನೇಹಾ ತನ್ನ ಸಹಪಾಠಿ ಫಯಾಜ್‌ನಿಂದಲೇ ಹತ್ಯೆಗಿಡಾಗಿದ್ದಳು. ವೀರಶೈವ ಜಂಗಮ ವಿಧಿವಿಧಾನಗಳಂತೆ ನೇಹಾ ಹಿರೇಮಠ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ.

ಬಿಕ್ಕಿ ಬಿಕ್ಕಿ ಅತ್ತ ದಿಂಗಾಲೇಶ್ವರ ಸ್ವಾಮೀಜಿ

ಇಂತಹ ಹೇಯ ಕೃತ್ಯವನ್ನು ಖಂಡಿಸುತ್ತೇನೆ, ಯಾವುದೇ ಕಾರಣಕ್ಕೂ ಈ ರೀತಿ ಘಟನೆ ನಡೆಯಬಾರದು. ನೇಹಾ ಅಪ್ಪಟ ನನ್ನ ಭಕ್ತಲಾಗಿದ್ದಳು, ಐಎಎಸ್ ಆಗಬೇಕು ನೀನು ಎಂದು ಹೇಳಿದ್ದೆ. ಆದರೆ ಇಂತಹ ಘಟನೆಯಿಂದ ಏನು ಹೇಳಬೇಕು ಎನ್ನುವುದೇ ನನಗೆ ತಿಳಿಯುತ್ತಿಲ್ಲ. ತಕ್ಷಣವೇ ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮೃತ ನೇಹಾಳನ್ನು ನೆನೆದು ದಿಂಗಾಲೇಶ್ವರ ಸ್ವಾಮೀಜಿ ಬಿಕ್ಕಿ ಬಿಕ್ಕಿ ಅತ್ತರು. ಇದೇ ವೇಳೆ ಮೂರು ಸಾವಿರ ಮಠದ ಶ್ರೀ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ ನೇಹಾಳ ಅಂತಿಮ ದರ್ಶನ ಪಡೆದರು.

ಮನೆ ಖಾಲಿ ಮಾಡಿದ ಆರೋಪಿ ಕುಟುಂಬಸ್ಥರು

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನವಳ್ಳಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಇತ್ತ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿಯ ಮುನವಳ್ಳಿಯ ಸಾಯಿನಗರದಲ್ಲಿರುವ ಆರೋಪಿ ಫಯಾಜ್‌ ಮನೆಗೆ ಬಿಗಿ ಭದ್ರತೆ ವಹಿಸಲಾಗಿತ್ತು. ಪೊಲೀಸರ ಸೂಚನೆ ಮೇರೆಗೆ ಮನೆ ಖಾಲಿ ಮಾಡಿ ಫಯಾಜ್‌ ಕುಟುಂಬಸ್ಥರು ಸಂಬಂಧಿಕರ ಮನೆಗೆ ತೆರಳಿದರು. ಆರೋಪಿಯ ಮನೆಯ ಬಳಿ ಓರ್ವ ಎಎಸ್ಐ, ಪೇದೆ ನೇಮಕ ಮಾಡಲಾಗಿತ್ತು.

ಇದನ್ನೂ ಓದಿ:Neha Murder Case: ನೇಹಾ ಕೇಸ್‌ನಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ; ಡಿಜಿಗೆ ಸಿಎಂ ಸೂಚನೆ

ಕಾಲೇಜು ಕ್ಯಾಂಪೆಸ್‌ನಲ್ಲೇ ಅಟ್ಯಾಕ್‌ ಮಾಡಿ ಕೊಂದಿದ್ದ

ಪ್ರೀತಿಸಲು‌ ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಯಾಜ್‌, ಕಾರ್ಪೋರೇಟರ್‌ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದು ಎಸ್ಕೇಪ್‌ ಆಗಲು ಯತ್ನಿಸಿದ್ದ. ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲೇ ಈ ಹತ್ಯೆ ನಡೆದಿತ್ತು. ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಬರ್ಬರವಾಗಿ ಕೊಲೆಯಾಗಿದ್ದಳು.

ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಳು. ಈ ವೇಳೆ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಳು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಆತ ಏ.18ರ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ, ಆದರೆ ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ.

ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿ ಫಯಾಜ್‌ ಏಕಾಏಕಿ ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದ. ಆತನಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದ ನೇಹಾಳನ್ನು ಹಿಡಿದುಕೊಂಡ ಪಾಗಲ್‌ ಪ್ರೇಮಿ, ಮನಬಂದಂತೆ ಚಾಕುವಿನಿಂದ ಇರಿದಿದ್ದ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದರಿಂದ ನೇಹಾಳಿಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಅಲ್ಲಿದ್ದವರು ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದರು. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಇತ್ತ ಹತ್ಯೆ ಮಾಡಿ ಎಸ್ಕೇಪ್‌ ಆಗುತ್ತಿದ್ದ ಫಯಾಜ್‌ನನ್ನು ವಿದ್ಯಾರ್ಥಿಗಳೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version