ಹುಬ್ಬಳ್ಳಿ: ಇಂಡಿಯಾ ಮೈತ್ರಿಕೂಟ (INDIA Bloc) ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಯನ್ನು (Mekedatu Project) ತಡೆಯುವುದಾಗಿ ಡಿಎಂಕೆ ಪ್ರಣಾಳಿಕೆಯಲ್ಲೇ (DMK Manifesto) ಹೇಳಿದೆ. ಹಾಗಿದ್ದರೆ ಕಾಂಗ್ರೆಸ್ ಇಂಡಿಯಾ ಒಕ್ಕೂಟದಿಂದ ಡಿಎಂಕೆಯನ್ನು ಕೈ ಬಿಡುತ್ತದೆಯೇ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ (Pralhad Joshi) ಪ್ರಶ್ನಿಸಿದ್ದಾರೆ. ಶುಕ್ರವಾರ ಶಿಗ್ಗಾವಿಯಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷ ಕಾಂಗ್ರೆಸ್ ತನ್ನ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅಗ್ರಹಿಸಿದರು.
ಮೇಕೆದಾಟು ತಡೆಯುವ ಡಿಎಂಕೆ ಪ್ರಣಾಳಿಕೆ ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆಯೂ ಆಗುತ್ತದೆ. ಹಾಗಾಗಿ ಕಾಂಗ್ರೆಸ್ ತನ್ನ ನಿಲುವನ್ನು ತಿಳಿಸಬೇಕೆಂದು ಪ್ರಹ್ಲಾದ ಜೋಶಿ ಒತ್ತಾಯಿಸಿದರು.
ಮೇಕೆದಾಟು ಸಂಬಂಧ ನಮ್ಮ ನೀರು ನಮ್ಮ ಹಕ್ಕು ಎನ್ನುತ್ತ ಕಾಂಗ್ರೆಸ್ ಪಕ್ಷ ಈ ಹಿಂದೆ ದಿಲ್ಲಿ ಪಾದಯಾತ್ರೆ ನಡೆಸಿತ್ತು. ಕೋವಿಡ್ ಸಂದರ್ಭದಲ್ಲಿ ಕೋರ್ಟ್ ಸೂಚನೆ ಇದ್ದರೂ ನಿಯಮ ಧಿಕ್ಕರಿಸಿ ಪ್ರತಿಭಟನೆ ನಡೆಸಿತ್ತು. ಈಗ ಅದರ ಅಂಗ ಪಕ್ಷ ಡಿಎಂಕೆ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಗೆ ತಡೆ ಎಂದು ಪ್ರಣಾಳಿಕೆಯಲ್ಲೇ ಹೇಳಿದೆ. ಕಾಂಗ್ರೆಸ್ ಈಗ ಯಾವ ನಿಲುವು ತಗೆದುಕೊಳ್ಳುತ್ತದೆ? ಎಂದು ಜೋಶಿ ಪ್ರಶ್ನಿಸಿದರು.
ಕಾಂಗ್ರೆಸ್ ಅವಕಾಶವಾದಿ ರಾಜಕಾರಣ ಮಾಡುತ್ತಿದೆ
ಕಾಂಗ್ರೆಸ್ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಮಹದಾಯಿ ವಿಚಾರದಲ್ಲಿ ಸಹ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಹನಿ ನೀರು ಕೊಡುವುದಿಲ್ಲ ಎಂದು ಗೋವಾಕ್ಕೆ ಹೋಗಿ ಹೇಳಿದ್ದರು. ಈಗ ಮೇಕೆದಾಟು ವಿಚಾರದಲ್ಲೂ ಅದೇ ರೀತಿ ನಾಟಕವಾಡುತ್ತಿದೆ ಎಂದು ಜೋಶಿ ಆರೋಪಿಸಿದರು.
ಇದನ್ನೂ ಓದಿ : Mekedatu Project : I.N.D.I.A ಕೂಟ ಗೆದ್ರೆ ಮೇಕೆದಾಟು ಬಂದ್; ಡಿಎಂಕೆ ಪ್ರಣಾಳಿಕೆ ಯಿಂದ ಕಾಂಗ್ರೆಸ್‌ಗೆ ಮುಖಭಂಗ
ಸಿಎಂ, ಡಿಸಿಎಂ ಢೋಂಗಿತನ, ನೆಲ, ಜಲ ಸಂಸ್ಕೃತಿ ಮೇಲೆ ಕಾಳಜಿ ಇಲ್ಲ
ನಮ್ಮ ನೀರು ನಮ್ಮ ಹಕ್ಕು ನಮ್ಮ ತೆರಿಗೆ ನಮ್ಮ ಹಕ್ಕು ಎಂದೆಲ್ಲಾ ಹೋರಾಟ ಮಾಡಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಈಗೇನು ಹೇಳುತ್ತಾರೆ? ಡಿಎಂಕೆ ನಡೆ ಖಂಡಿಸುತ್ತಾರೆಯೇ? ಇವರಿಗೆ ನಿಜವಾಗಿ ರಾಜ್ಯದ ನೆಲ, ಜಲ, ಸಂಸ್ಕೃತಿ ಮೇಲೆ ಕಾಳಜಿ ಇಲ್ಲ. ಸುಮ್ಮನೆ ಡೋಂಗಿತನ ಪ್ರದರ್ಶಿಸುತ್ತಾರೆ ಎಂದು ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಅಂದು ದಿಲ್ಲಿ ಪಾದಯಾತ್ರೆ ಪ್ರತಿಭಟನೆ ಮಾಡಿದ್ರಿ. ಇಂದೂ ಹೋಗಿ ಪ್ರತಿಭಟನೆ ಮಾಡಿ. ಇಲ್ಲವೇ, ಡಿಎಂಕೆ ಯನ್ನು ಇಂಡಿಯಾ ಒಕ್ಕೂಟದಿಂದ ಕೈ ಬಿಡಿ ನೋಡೋಣ. ಇದಕ್ಕೇನು ಹೇಳುತ್ತಾರೆ ಸಿಎಂ-ಡಿಸಿಎಂ? ಮತ್ತು ರಾಹುಲ್ ಗಾಂಧಿ ಅವರು ಎಂದು ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.
ಮೇಕೆದಾಟು ಯೋಜನೆ ಏನು? ಯಾಕೆ ಇದು ಅಗತ್ಯ?
ಬೆಂಗಳೂರಿನಿಂದ 90 ಕಿ.ಮೀ. ದೂರದಲ್ಲಿರುವ ಮೇಕೆದಾಟುವಿನಲ್ಲಿ ಜಲಾಶಯ ನಿರ್ಮಿಸಿ ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ಸಂರಕ್ಷಿಸಿ ಕುಡಿಯುವ ನೀರಿಗೆ ಬಳಸುವ ಯೋಜನೆ ಇದಾಗಿದೆ. 9,000 ಕೋಟಿಯ ಈ ಯೋಜನೆಯಿಂದ ಬೆಂಗಳೂರು ಹಾಗೂ ರಾಜ್ಯದ ಕೆಲವೊಂದು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಬಹುದು. ಜತೆಗೆ ತಮಿಳುನಾಡಿಗೂ ಇಲ್ಲಿಂದ ಅಗತ್ಯವಿರುವ ನೀರು ಬಿಡುಗಡೆ ಮಾಡಬಹುದು ಎನ್ನುವುದು ಕರ್ನಾಟಕ ಸರ್ಕಾರದ ಲೆಕ್ಕಾಚಾರ. ಆದರೆ, ಇದು ತಮಿಳುನಾಡಿಗೆ ಹರಿದು ಹೋಗುತ್ತಿರುವ ನೀರನ್ನು ತಡೆ ಹಿಡಿಯುವ ಯೋಜನೆ ಎಂಬ ಕಾರಣಕ್ಕಾಗಿ ತಮಿಳುನಾಡು ವಿರೋಧಿಸುತ್ತಿದೆ. ಸುಪ್ರೀಂಕೋರ್ಟ್‌ನಲ್ಲಿ ಈ ಯೋಜನೆಗೆ ಅನುಮತಿ ಕೊಡುವ ವಿಚಾರದಲ್ಲಿ ವಿವಾದ ಜಾರಿಯಲ್ಲಿದೆ. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಡಿಎಂಕೆ ಪ್ರಣಾಳಿಕೆ ಇದಕ್ಕೆ ತಣ್ಣೀರು ಎರಚಿದೆ.