Site icon Vistara News

Pralhad Joshi: ಬಿಜೆಪಿ ಪ್ರಣಾಳಿಕೆ: ವಿಕಸಿತ ಭಾರತ ನಿರ್ಮಾಣವೇ ಮೋದಿ ಗ್ಯಾರಂಟಿ ಎಂದ ಪ್ರಲ್ಹಾದ್‌ ಜೋಶಿ

Pralhad Joshi

ಹುಬ್ಬಳ್ಳಿ: ಭಾರತವನ್ನು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಳಿಸುವ ಮೋದಿ ಗ್ಯಾರಂಟಿಯುಳ್ಳ ಬಿಜೆಪಿ ಪ್ರಣಾಳಿಕೆ ಮಾದರಿ, ಮಾರ್ಗದರ್ಶಿ ಆಗಿದೆ. ಅಂಬೇಡ್ಕರ್ ಆಶಯದಂತೆ ಸರ್ವ ಸಮಾನತೆ, ವಿಕಸಿತ ಭಾರತ ನಿರ್ಮಾಣವೇ ಮೋದಿ ಗ್ಯಾರಂಟಿಯಾಗಿದೆ. ವಿಕಸಿತ ಭಾರತ ಸರ್ವರ ಅಭಿವೃದ್ಧಿಯ ದ್ಯೋತಕವಾಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು.

ನಗರದಲ್ಲಿ ನಡೆದ ಡಾ. ಅಂಬೇಡ್ಕರ್ 133ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ರೈತರ ಏಳಿಗೆ, ಮಹಿಳೆಯರ ಸಶಕ್ತೀಕರಣ, ಕೂಲಿ, ಕಾರ್ಮಿಕರ ಸಶಕ್ತೀಕರಣ ಸೇರಿದಂತೆ ಸಂಪೂರ್ಣ ಬಡತನ ನಿರ್ಮೂಲನೆಯ ಮೋದಿ ಸಂಕಲ್ಪದ ನಮ್ಮ ಪ್ರಣಾಳಿಕೆ ಮಾದರಿಯಾಗಿದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ | Modi In Karnataka: ಈ ಮೋದಿ ಇರೋವರೆಗೂ ಹಿಂದು ಧರ್ಮವನ್ನು ನಾಶ ಮಾಡಲು ಬಿಡಲ್ಲ: ಕಾಂಗ್ರೆಸ್‌ ವಿರುದ್ಧ ಪ್ರಧಾನಿ ವಾಗ್ದಾಳಿ

ಜಗತ್ತಿನಲ್ಲಿ 5ನೇ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿರುವ ಭಾರತವನ್ನು ಮುಂದಿನ 5 ವರ್ಷಗಳಲ್ಲಿ 3ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಅಭಿವೃದ್ಧಿ ಪಡಿಸುವುದೇ ಮೋದಿ ಪರಿವಾರದ ಗುರಿ ಎಂದು ಅವರು, ಜಗತ್ತಿನಲ್ಲಿ ಸೂರ್ಯ-ಚಂದ್ರ ಇರೋವರೆಗೂ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮರಣೀಯ ಎಂದು ಹೇಳಿದರು.

ದ್ವೇಷದ ಲವಲೇಶವೂ ಇಲ್ಲದ ಪುಣ್ಯಾತ್ಮ

ಸರ್ವವರ್ಗಗಳ ಸುಧಾರಣೆಗೆ ಅತ್ಯಂತ ಸ್ಪಷ್ಟ ನಿಲುವುಗಳನ್ನು ತಳೆದ ಸಂವಿಧಾನ ರಚನೆಕಾರ ಅಂಬೇಡ್ಕರ್ ಒಬ್ಬ ಮಹಾನ್ ಪುಣ್ಯಾತ್ಮ. ಅಸ್ಪೃಶ್ಯತೆಯ ಕರಾಳ ಅನುಭವವಾದರೂ ಸಂವಿಧಾನ ರಚನೆ ವೇಳೆ ಅಂಬೇಡ್ಕರ್ ಅದ್ಯಾವ ದ್ವೇಷ ಭಾವನೆ ಹೊಂದದೆ, ದ್ವೇಷದ ಲವಲೇಶವೂ ಇಲ್ಲದಂತೆ ಎಲ್ಲರಿಗೂ ನ್ಯಾಯ ಒದಗಿಸಿಕೊಟ್ಟು ಕೆಲಸ ಮಾಡಿದ ಒಬ್ಬ ಮಹಾನ್ ಪುಣ್ಯಾತ್ಮ ಎಂದು ಸಚಿವ ಜೋಶಿ ಸ್ಮರಿಸಿದರು.

ಇದನ್ನೂ ಓದಿ | Modi in Karnataka: ದೇಶಾದ್ಯಂತ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಕರ್ನಾಟಕದಿಂದ ನೂರಾರು ಕೋಟಿ ರೂ. ಕಪ್ಪು ಹಣ ರವಾನೆ: ಮೋದಿ ಆರೋಪ

ಅಂಬೇಡ್ಕರ್ ಸಲಹೆ ಸ್ವೀಕರಿಸದೇ ಇರೋದು ದುರ್ದೈವ

ಆಗಿನ ಕಾಲದಲ್ಲೇ ಹಿಂದು ಸಮಾಜದ ಪುನಾರಚನೆ ಬಗ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಸಲಹೆ ಕೊಟ್ಟರು. ಆದರೆ, ಅದನ್ನು ಸ್ವೀಕರಿಸದೇ ಇರುವುದು ನಮ್ಮ ದೌರ್ಭಾಗ್ಯ ಎಂದು ಪ್ರಲ್ಹಾದ್ ಜೋಶಿ ವಿಷಾದ ವ್ಯಕ್ತಪಡಿಸಿದರು.

ಕೇಂದ್ರದ 5 ಕೆಜಿ ಅಕ್ಕಿಗೆ ತಮ್ಮ ಫೋಟೋ ಹಾಕಿ ಮೆರೆಯುವ ಭೂಪರು ಕಾಂಗ್ರೆಸಿಗರು: ಜೋಶಿ

ಹುಬ್ಬಳ್ಳಿ: ಕೇಂದ್ರ ಸರ್ಕಾರ ಕೊಡುವ 5 ಕೆಜಿ ಅಕ್ಕಿಯನ್ನೇ ಕೊಟ್ಟು ತಮ್ಮ ಫೋಟೋ ಹಾಕಿಸಿಕೊಂಡು ಮೆರೆಯುವಂಥ ಭೂಪರು ಕಾಂಗ್ರೆಸಿಗರು. 10 ಕೆಜಿ ಅಕ್ಕಿ ಉಚಿತ ಕೊಡುತ್ತೇವೆ ಎಂದು ಹೇಳಿ ಒಂದು ಕಾಳು ಅಕ್ಕಿಯನ್ನೂ ಕೊಡಲಾಗಲಿಲ್ಲ. ಬಿಜೆಪಿ ಕೊಟ್ಟ 5 ಕೆಜಿ ಅಕ್ಕಿಯನ್ನೇ ನೀಡಿ ತಮ್ಮದೆಂದು ಬಿಂಬಿಸಿಕೊಳ್ಳುತ್ತಾ ಮೆರೆಯುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಟೀಕಿಸಿದರು.

ಗಳಗಿ-ಹುಲಕೊಪ್ಪ ಜಿಪಂ ವ್ಯಾಪ್ತಿಯ ದುಮ್ಮವಾಡದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಇವರ ಈ ಡೋಂಗಿ ಸಾಧನೆ ಅಷ್ಟಕ್ಕೇ ಮುಗಿಯಲಿಲ್ಲ. ರಾಮನ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ದೇಶದ ಉದ್ದಗಲಕ್ಕೂ ನಾವು ಅಕ್ಷತೆ ಹಂಚುತ್ತಿದ್ದರೆ, ಅವರು ತಾವು ಕೊಟ್ಟ ಅಕ್ಕಿಯಲ್ಲಿ ಅಕ್ಷತೆ ಆಗುತ್ತಿದೆ ಎಂದು ಅಪ ಪ್ರಚಾರ ಮಾಡುತ್ತಾ ತಿರುಗಾಡಿದರು ಎಂದರು.

ದೇಶದಲ್ಲಿ ಬಿಜೆಪಿ ಆಡಳಿತ ಪ್ರಬಲಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಶತಾಯ ಗತಾಯ ಅಧಿಕಾರಕ್ಕೆ ಬರಲು ಗ್ಯಾರಂಟಿ ಘೋಷಣೆ ಮಾಡುತ್ತ ಜನರನ್ನು ಮರುಳು ಮಾಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಾಗುತ್ತಿದೆ. ಕಾಂಗ್ರೆಸ್ 65 ವರ್ಷದ ಆಡಳಿತದಲ್ಲಿ ಕೊಡದ ಗ್ಯಾರಂಟಿಗಳನ್ನು ಈಗೇಕೆ? ಎಂದು ಪ್ರಶ್ನಿಸಿದ ಅವರು, ಆರು ದಶಕಗಳ ಕಾಲ ಬಡತನ ನಿರ್ಮೂಲನೆ ಮಾಡದ ಕಾಂಗ್ರೆಸ್ ಇನ್ನು ಮುಂದೆ ಮಾಡುತ್ತದೆ ಎಂಬುದನ್ನು ನಂಬಲು ಜನರು ಮೂರ್ಖರಲ್ಲ ಎಂದು ಹೇಳಿದರು.

ಯುಪಿಎ 10 ವರ್ಷದ ಆಡಳಿತದಲ್ಲಿ ಎಲ್ಲ ವಿಧದ ಹಗರಣಗಳನ್ನು ಮಾಡಿ ದೇಶವನ್ನು ದುರ್ಬಲಗೊಳಿಸಿದ್ದರು. 2014ರ ನಂತರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಭಾರತ ಈಗ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ | Modi in Karnataka: ಮೋದಿ ಗೆಲ್ಲಿಸಲು ಈ ಇಳಿವಯಸ್ಸಿನಲ್ಲೂ ರಾಜ್ಯದೆಲ್ಲೆಡೆ ಪ್ರಚಾರ ಮಾಡುವೆ; ಪ್ರಧಾನಿಯನ್ನು ಹಾಡಿಹೊಗಳಿದ ದೇವೇಗೌಡರು

ಮುಂದಿನ ದಿನಗಳಲ್ಲಿ ಭಾರತ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಇದುವರೆಗೂ ಕಂಡಿರುವ ಭಾರತದ ಏಳಿಗೆ ಬರೀ ಟ್ರೈಲರ್ ಅಷ್ಟೇ. ಮೋದಿ ಅವರು ಭವ್ಯ ಭಾರತವನ್ನು ನನಸು ಮಾಡಲು ಈ ಬಾರಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಎಂದು ಕರೆ ನೀಡಿದರು.

Exit mobile version