Site icon Vistara News

Road Accident : ಹುಬ್ಬಳ್ಳಿ APMC ಬಳಿ ಭೀಕರ ಅಪಘಾತ; ಬೈಕ್‌ ಸವಾರ, ಪಾದಚಾರಿ ಇಬ್ಬರೂ ಮೃತ್ಯು

accident at Hubballi

ಹುಬ್ಬಳ್ಳಿ: ಬೈಕೊಂದು ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದು (Road accident) ಸವಾರ ಮತ್ತು ಪಾದಚಾರಿ ಇಬ್ಬರೂ ಪ್ರಾಣ ಕಳೆದುಕೊಂಡ ದಾರುಣ ಘಟನೆ ಹುಬ್ಬಳ್ಳಿಯ ಎಪಿಎಂಸಿ (Hubballi News) ಬಳಿ ಶನಿವಾರ ನಡೆದಿದೆ. ವೇಗವಾಗಿ ಬಂದ ಬೈಕ್‌ ಪಾದಚಾರಿಗೆ ಡಿಕ್ಕಿ ಹೊಡೆದ (Bike hits Road crosser) ಪರಿಣಾಮವಾಗಿ ಅವಘಡ ಸಂಭವಿಸಿದೆ. ಬೈಕ್ ಸವಾರ ಮಕ್ತುಂ ಹಾಗೂ ಪಾದಚಾರಿ ಬಸವರಾಜ್‌ ಮೃತಪಟ್ಟವರು.

ಬಸವರಾಜ್‌ ಅವರು ಎಪಿಎಂಸಿ ಬಳಿ ರಸ್ತೆಯನ್ನು ದಾಟುತ್ತಿದ್ದರು. ಆಗ ಮಕ್ತುಂ ಅವರು ವೇಗವಾಗಿ ಬೈಕ್‌ ಚಲಾಯಿಸುತ್ತ ಬಂದಿದ್ದರು. ಈ ವೇಳೆ ಬೈಕ್‌ ನಿಯಂತ್ರಣಕ್ಕೆ ಬಾರದೆ ಡಿಕ್ಕಿ ಹೊಡೆಯಿತು. ಆಗ ಇಬ್ಬರೂ ಕೆಳಕ್ಕುರುಳಿ ಬಿದ್ದಿದ್ದಾರೆ. ಡಿಕ್ಕಿ ಹೊಡೆದು ಉರುಳಿದ ರಭಸಕ್ಕೆ ಮತ್ತು ಎಳೆದುಕೊಂಡು ಹೋದ ಹೊಡೆತಕ್ಕೆ ಸಿಲುಕಿ ಬೈಕ್‌ ಸವಾರ ಮಕ್ತುಂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಪಾದಚಾರಿ ಬಸವರಾಜ್‌ ಅವರಿಗೆ ತೀವ್ರ ರಕ್ತ ಗಾಯಗಳಾಗಿದ್ದು ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಒಯ್ಯಲಾಯಿತು. ಆದರೆ, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದರು. ಎಪಿಎಮ್‌ಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Tirupati Temple : ತಿರುಪತಿ ಮೆಟ್ಟಿಲ ಪಕ್ಕದಲ್ಲಿ ಬೆಚ್ಚಿ ಬೀಳಿಸುವ ದೃಶ್ಯ; ಚಿರತೆ, ಕರಡಿಗಳು ಹೊಂಚುಹಾಕ್ತಿವೆ ಹುಷಾರ್‌

ಮಾಗಡಿ ರಸ್ತೆಯಲ್ಲಿ ಮಹಿಳೆ ಮೇಲೆ ಹರಿದ ಶಾಲಾ ಬಸ್‌; ತಲೆ ಹೋಳು

ಬೆಂಗಳೂರು: ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ಖಾಸಗಿ ಶಾಲಾ ಬಸ್‌ ಹರಿದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿಯೊಂದಿಗೆ ತೆರಳುವಾಗ ಸ್ಕೂಟರ್‌ ಸ್ಕಿಡ್‌ ಆಗಿ ಮಹಿಳೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಸ್‌ ಹರಿದಿದ್ದರಿಂದ (Road Accident) ಮಹಿಳೆ ತಲೆ ಛಿದ್ರ ಛಿದ್ರವಾಗಿದೆ.

ಸುಮಂಗಲ (58) ಮೃತರು. ಇವರು ಪತಿ ಶರಣಪ್ಪ ಜತೆಗೆ ಸ್ಕೂಟರ್‌ನಲ್ಲಿ ತೆರಳುವಾಗ ರಸ್ತೆಯಲ್ಲಿದ್ದ ಕಲ್ಲು ಟಯರ್‌ಗೆ ಸಿಲುಕಿ ಸ್ಕೂಟರ್ ಸ್ಕಿಡ್ ಆಗಿದೆ. ಈ ವೇಳೆ ಇಬ್ಬರೂ ಕೆಳಗೆ ಬಿದ್ದಿದ್ದಾರೆ‌. ಇದೇ ವೇಳೆ ಹಿಂದೆಯಿಂದ ವೇಗವಾಗಿ ಬರುತ್ತಿದ್ದ ಶಾಲಾ ಬಸ್‌ ಮಹಿಳೆ ತಲೆ ಮೇಲೆ ಹರಿದಿದೆ. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಣ್ಣಮುಂದೆ ಪತ್ನಿ ಮೇಲೆ ಬಸ್‌ ಹರಿದಿದ್ದನ್ನು ಕಂಡ ಪತಿ ಅಳುತ್ತಾ ಮೃತದೇಹದ ಮೇಲೆ ಬಿದ್ದು ನರಳಾಡಿದ್ದು ಮನಕಳಕುವಂತಿತ್ತು. ಈ ಬಗ್ಗೆ ಮಾದನಾಯಕನ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಜರುಗುತ್ತಿದ್ದಂತೆ ಶಾಲಾ ಬಸ್ ಚಾಲಕ ಪರಾರಿಯಾಗಿದ್ದಾನೆ. ಕಳೆದ ಶನಿವಾರವಷ್ಟೆ ಇದೇ ರಸ್ತೆಯಲ್ಲಿ ಯುವಕನೊಬ್ಬ ಲಾರಿಗೆ ಸಿಲುಕಿ ಕೊನೆಯುಸಿರೆಳೆದಿದ್ದ.

ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ರಸ್ತೆ ಕಾಮಗಾರಿ ಕಳೆದ ಹಲವು ತಿಂಗಳಿನಿಂದ ನಿಂತುಹೋಗಿದೆ. ರಾಜ್ಯ ಹೆದ್ದಾರಿಯಾದ ಹಿನ್ನೆಲೆಯಲ್ಲಿ ವಾಹನ ಸಂಚಾರ ಹೆಚ್ಚಾಗಿಯೇ ಇರುತ್ತದೆ. ರಸ್ತೆ ಗುಂಡಿಮಯವಾಗಿರುವುದರಿಂದ ಹೆಚ್ಚಿನ ಅಪಘಾತಗಳು ನಡೆಯುತ್ತಿವೆ.

Exit mobile version