Site icon Vistara News

ಬೇಡ್ತಿ ವರದಾ ನದಿ ಕುರಿತು ಹೋರಾಟದ ಎಚ್ಚರಿಕೆ ನೀಡಿದ ಸೋಮಶೇಖರ ಕೋತಂಬರಿ

ಬೇಡ್ತಿ - ವರದಾ ನದಿ ಜೋಡಣೆ

ಹುಬ್ಬಳ್ಳಿ: ಬಹು ನಿರೀಕ್ಷಿತವಾದ ದಕ್ಷಿಣ ಮತ್ತು ಉತ್ತರ ಕನ್ನಡದ ಬೇಡ್ತಿ – ವರದಾ ನದಿ ಜೋಡಣೆ ಯೋಜನೆಯನ್ನು ರಾಜ್ಯ ಸರಕಾರ ಆದಷ್ಟು ಬೇಗ ಅನುಷ್ಠಾನಕ್ಕೆ ತರಬೇಕಾಗಿದೆ. ಇಲ್ಲವಾದರೆ ಆ ಭಾಗದ ರೈತರು ಮತ್ತು ಹೋರಾಟಗಾರರ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಬೇಡ್ತಿ – ವರದಾ ನದಿ ಜೋಡಣಾ ಹೋರಾಟ ಸಮಿತಿ ರಾಜ್ಯ ಅಧ್ಯಕ್ಷ ಸೋಮಶೇಖರ ಕೋತಂಬರಿ ಎಚ್ಚರಿಸಿದ್ದಾರೆ.

ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಗೆ ಶಿರಸಿ ಭಾಗದ ಬೇಡ್ತಿ – ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯವರು ಸರಿಯಾದ ಕಾರಣವಿಲ್ಲದೆ ವಿರೋಧಿಸುತ್ತಿದ್ದಾರೆ. ಸರಕಾರಕ್ಕೆ ಯೋಜನಾ ವರದಿ ರದ್ದುಪಡಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ಶಾಲ್ಮಲಾ, ಅಘನಾಶಿನಿ, ಪಟ್ಟದಹೊಳೆಯ ಜಲಮೂಲದಿಂದ ಪ್ರತಿವರ್ಷ ಸುಮಾರು 100 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಹಾವೇರಿ, ಶಿವಮೊಗ್ಗ, ಹುಬ್ಬಳ್ಳಿ, ಗದಗ, ಕೊಪ್ಪಳ, ರಾಯಚೂರು ಪ್ರದೇಶಗಳಿಗೆ ಮುಖ್ಯವಾಗಿ ಕುಡಿಯುವ ನೀರು ಹಾಗೂ ಸಮಗ್ರ ನೀರಾವರಿಗೆ ಬೇಡ್ತಿ – ವರದಾ ಜೋಡಣೆ ಯೋಜನೆ ಅಡಿ ಈ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸುವುದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಾಗೇಂದ್ರ ತುಮರಿಕೊಪ್ಪ, ಸಿದ್ದು ಬಸವರಾಜ ಓಣಿಕೇರಿ, ಆಲದಕಟ್ಟಿ, ಮಹೇಶ ಮುಕರವಳ್ಳಿ ಸೇರಿದಂತೆ ಅನೇಕರಿದ್ದರು.

ಸ್ವರ್ಣವಲ್ಲಿ ಸ್ವಾಮೀಜಿ ನೇತೃತ್ವ

ಬೇಡ್ತಿ – ವರದಾ ನದಿ ಜೋಡಣೆ ಯೋಜನೆ ದುಷ್ಪರಿಣಾಮದ ಬಗ್ಗೆ ಜನಜಾಗೃತಿ ಮೂಡಿಸಲು ಮಂಗಳವಾರ ಮಧ್ಯಾಹ್ನ 3 ಕ್ಕೆ ಉತ್ತರ ಕನ್ನಡದ ಮಂಚಿಕೇರಿ ಸಮಾಜ ಮಂದಿರದಲ್ಲಿ ಬೃಹತ್ ಸಭೆ ನಡೆಯಲಿದೆ. ಹಸಿರು ಸ್ವಾಮೀಜಿ ಎಂದೇ ಖ್ಯಾತರಾದ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುವ ಸಮಾವೇಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪರಿಸರ ತಜ್ಞರು, ರೈತರು, ಸಂಘ ಸಂಸ್ಥೆಗಳು, ಸಹಕಾರಿ ಧುರೀಣರು, ಜನಪ್ರತಿನಿಧಿಗಳು, ಮಾತೃ ಮಂಡಳಿಗಳು, ಗ್ರಾಮ ಅರಣ್ಯ ಸಮಿತಿಗಳು ಜೀವ ವೈವಿಧ್ಯ ಸಮಿತಿಗಳು, ಸೀಮಾ ಪರಿಷತ್‌ಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: world Environment day | ಪರಿಸರ ಕಾಪಾಡುವ ಆವಿಷ್ಕಾರಗಳ ಅಗತ್ಯವಿದೆ: ಕಾಗೇರಿ ಪ್ರತಿಪಾದನೆ

Exit mobile version