Site icon Vistara News

Hubbli to Kashi special train : ಬೇಸಿಗೆಯಲ್ಲಿ ಹುಬ್ಬಳ್ಳಿಯಿಂದ ವಾರಣಾಸಿಗೆ ಸ್ಪೆಷಲ್‌ ರೈಲು, ಕಾಶಿ ಯಾತ್ರಿಕರಿಗೆ ಅನುಕೂಲ

Kashi train

#image_title

ಹುಬ್ಬಳ್ಳಿ: ಬೇಸಿಗೆ ರಜೆಯ ಸಮಯದಲ್ಲಿ ದೇಶದ ಪ್ರಖ್ಯಾತ ತೀರ್ಥಕ್ಷೇತ್ರವಾದ ವಾರಾಣಸಿಗೆ ಹೋಗಲು ಬಯಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಮತ್ತು ವಾರಾಣಸಿ (Hubbli to Kashi special train) ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು (07347 ಮತ್ತು 07348) ಓಡಿಸಲು ನೈಋತ್ಯ ರೈಲ್ವೆ ವಲಯವು ನಿರ್ಧರಿಸಿದೆ.

ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಕೇಂದ್ರ ರೈಲ್ವೆ ಸಚಿವರನ್ನು ವಿನಂತಿಸಿದ್ದರ ಮೇರೆಗೆ ಈ ವಿಶೇಷ ರೈಲು ಸಂಚಾರ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.

ಯಾವಾಗ ಯಾವಾಗ ಓಡುತ್ತದೆ ಸ್ಪೆಷಲ್‌ ರೈಲು?

ರೈಲು ಸಂಖ್ಯೆ 07347: ಮಾರ್ಚ್ 27, 2023ರಂದು(ಸೋಮವಾರ) ಎಸ್‌.ಎಸ್‌.ಎಸ್ ಹುಬ್ಬಳ್ಳಿ ನಿಲ್ದಾಣದಿಂದ ರಾತ್ರಿ 8:30ಕ್ಕೆ ಹೊರಟು, ಬುಧವಾರ ಬೆಳಗ್ಗೆ 9:10ಕ್ಕೆ ಉತ್ತರ ಪ್ರದೇಶದ ವಾರಾಣಸಿ ನಿಲ್ದಾಣವನ್ನು ತಲುಪಲಿದೆ. ಇದೇ ರೈಲು (07348) ಮಾರ್ಚ್ 29 (ಬುಧವಾರ), 2023ರಂದು ವಾರಾಣಸಿಯಿಂದ ರಾತ್ರಿ 8:40ಕ್ಕೆ ಹೊರಟು, ಶುಕ್ರವಾರ ಬೆಳಿಗ್ಗೆ 11:45ಕ್ಕೆ ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಈ ವಿಶೇಷ ರೈಲು ಎರಡೂ ಮಾರ್ಗದಲ್ಲಿ, ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ, ವಿಜಯಪುರ, ಇಂಡಿ ರೋಡ, ಸೋಲಾಪುರ, ದೌಂಡ್, ಅಹ್ಮದನಗರ, ಕೋಪರಗಾಂವ್, ಮನ್ಮಾಡ್, ಭೂಸಾವಲ್, ಖಂಡ್ವಾ, ಇಟಾರಸಿ, ಪಿಪಾರಿಯಾ, ಜಬಲ್ಪುರ, ಕಟನಿ, ಮೈಹಾರ್, ಸತನಾ, ಮಾಣಿಕ್‌ಪುರ, ಪ್ರಯಾಗರಾಜ್ ಚೌಕಿ ಜಂಕ್ಷನ್ ಮತ್ತು ವಾರಣಾಸಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಎಷ್ಟೆಲ್ಲ ಬೋಗಿಗಳು ಇರುತ್ತವೆ?

ವಿಶೇಷ ಎಕ್ಸ್‌ಪ್ರೆಸ್ ರೈಲು ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ. ಎಸಿ ಟು-ಟೈರ್ (1), ಎಸಿ ತ್ರೀ-ಟೈರ್ (1), ಸ್ಲೀಪರ್ ಕ್ಲಾಸ್ (7), ಸಾಮಾನ್ಯ ಎರಡನೇ ದರ್ಜೆ ಬೋಗಿಗಳು (10), ಮತ್ತು ದಿವ್ಯಾಂಗ ಸ್ನೇಹಿ ಕಂಪಾರ್ಟ್ ಮೆಂಟಗಳಿಂದ ಕೂಡಿದ ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳು ಹೊಂದಿರುತ್ತದೆ.

ಈ ರೈಲು ಸಂಚಾರದಿಂದ ಈ ಭಾಗದ ಕಾಶಿ ವಿಶ್ವನಾಥನ ಭಕ್ತರಿಗೆ ಅನುಕೂಲವಾಗಲಿದೆ, ಪ್ರಯಾಣಿಕರು ಹರ್ಷಿತರಾಗಲಿದ್ದಾರೆ ಎಂದು ಜೋಶಿಯವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಶೇಷ ರೈಲು ಸಂಚಾರ ಆರಂಭಕ್ಕೆ ಸಹಕರಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳನ್ನು ಜೋಶಿಯವರು ಹೇಳಿದ್ದಾರೆ.

ಇದನ್ನೂ ಓದಿ : Modi In Bengaluru | ಕರ್ನಾಟಕ ಭಾರತ್‌ ಗೌರವ್‌ ಕಾಶಿ ಯಾತ್ರೆಗೆ ಹೋಗುವುದು ಹೇಗೆ?

Exit mobile version