ಹುಬ್ಬಳ್ಳಿ: ಚೋಟಾ ಮುಂಬೈ ಎಂದೇ ಪ್ರಸಿದ್ಧಿಯಾಗಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ (Hubli Airport), ಅತ್ಯುತ್ತಮ ಗ್ರಾಹಕ ಸೇವೆಗಾಗಿ ದೇಶದ ಒಟ್ಟು 58 ವಿಮಾನ ನಿಲ್ದಾಣಗಳಲ್ಲಿ ಟಾಪ್ 5 ಸ್ಥಾನ ದಕ್ಕಿದೆ. 1974ರಲ್ಲಿ ನಿರ್ಮಾಣ ಕಂಡಿರುವ ಈ ವಿಮಾನ ನಿಲ್ದಾಣ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಇರುವಾಗಲೇ ಈಗ ಗ್ರಾಹಕರ ಸಂತೃಪ್ತಿ ಸಮೀಕ್ಷೆಯಲ್ಲಿ ದೇಶದಲ್ಲೇ ಟಾಪ್ 5ನೇ ಸ್ಥಾನ ಸಿಕ್ಕಿರುವುದು ಹುಬ್ಬಳ್ಳಿಯ ಹಿರಿಮೆಗೆ ಮತ್ತೊಂದು ಮುಕುಟ ಸಿಕ್ಕಂತಾಗಿದೆ.
ಕಳೆದೆರೆಡು ದಶಕಗಳಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಇಚ್ಛಾಶಕ್ತಿಯಿಂದಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣಕಕ್ಕೆ ಅತ್ಯಾಧುನಿಕ ಸೌಲಭ್ಯಗಳು ದೊರೆತಿವೆ. ಇದೀಗ ದೇಶದ ಒಟ್ಟು 58 ವಿಮಾನ ನಿಲ್ದಾಣಗಳಲ್ಲಿ ಟಾಪ್ 5 ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು, ಗ್ರಾಹಕರ ಸೇವೆಯಲ್ಲಿ ಅತ್ಯುನ್ನತ ದರ್ಜೆಗೇರುವ ಮೂಲಕ ಅಭಿವೃದ್ಧಿಯಲ್ಲಿ ರಾಷ್ಟ್ರದ ಗಮನವನ್ನೇ ಸೆಳೆದಿದೆ.
ಮೊನ್ನೆ ಮೊನ್ನೆಯಷ್ಟೇ ಸುಮಾರು 320 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ಎರಡನೇ ಟರ್ಮಿನಲ್ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಎರಡೇ ವರ್ಷದಲ್ಲಿ ಇದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ರೂಪುಗೊಳ್ಳುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದನ್ನು ಸ್ಮರಿಸಬಹುದು.
ಈ ಮಧ್ಯೆ ಗ್ರಾಹಕರಿಗೆ ನೀಡುತ್ತಿರುವ ಸೇವೆ ಹಾಗೂ ಸೌಲಭ್ಯಗಳನ್ನು ಪರಿಗಣಿಸಿ ನಡೆಸಲಾದ ಸಮೀಕ್ಷೆಯಲ್ಲಿ 5ನೇ ಸ್ಥಾನ ಪಡೆದಿರುವುದು ಹುಬ್ಬಳ್ಳಿ-ಧಾರವಾಡಗರಿಗೆ ಹೆಮ್ಮೆಯ ಸಂಗತಿಯಾಗಿದೆ.
ಮಧ್ಯಮ ಗಾತ್ರದ ವಿಮಾನ ನಿಲ್ದಾಣಗಳ ವಿಭಾಗದಲ್ಲಿ ಟಾಪ್ 5 ಗೌರವಕ್ಕೆ ಪಾತ್ರವಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡದಾದ ಹಾಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡುವ ವಿಮಾನ ನಿಲ್ದಾಣ ಇದಾಗಿದೆ.
ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ದೇಶದ 58 ಭಾರತೀಯ ವಿಮಾನ ನಿಲ್ದಾಣಗಳನ್ನು ಗ್ರಾಹಕ ಸಂತೃಪ್ತಿ ಸಮೀಕ್ಷೆಗೆ ಒಳಪಡಿಸಿದ್ದು, ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುವಲ್ಲಿ ಒಟ್ಟು 5 ಅಂಕಕ್ಕೆ 4.95ರಷ್ಟು ಅಂಕ ಪಡೆಯುವ ಮೂಲಕ 5ನೇ ಸ್ಥಾನ ಪಡೆದುಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಿಂದ ದೇಶದ ಹಲವು ನಗರಗಳಿಗೆ ವಿಮಾನಯಾನ ಸೇವೆ ಆರಂಭವಾಗಿದ್ದು, ದೆಹಲಿ, ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ ಮುಂತಾದ ನಗರಗಳಿಗೆ ವಿಮಾನ ಸೌಲಭ್ಯ ಲಭ್ಯವಿದೆ. ಇಂಡಿಗೋ, ಸ್ಪೇಸ್ ಜೆಟ್, ಏರ್ಇಂಡಿಯಾ, ಅಲಯನ್ಸ್ ಏರ್ ಮುಂತಾದ ಕಂಪನಿಗಳು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಿವೆ.
ಕೆಲ ವರ್ಷಗಳಿಂದ ಇಲ್ಲಿ ಕಾಗೋರ್ ಸೇವೆಯನ್ನೂ ಆರಂಭಿಸಲಾಗಿದೆ.
ಹುಬ್ಬಳ್ಳಿ ಇದೀಗ ದೇಶದ ಎಲ್ಲ ಪ್ರಮುಖ ನಗರಗಳಿಗೆ ವಿಮಾನಯನ ಮೂಲಕ ಸಂಪರ್ಕ ಸಾಧಿಸುತ್ತಿದೆ. ನಿತ್ಯ ಸುಮಾರು 15 ವಿಮಾನಗಳು ವಾಣಿಜ್ಯ ನಗರಿಗೆ ಬಂದಿಳಿದು ಹಾರಾಟ ನಡೆಸಿವೆ. ಸಾವಿರಾರು ಪ್ರಯಾಣಿಕರು ಸುಖಕರ ಪ್ರಯಾಣ ಮಾಡುತ್ತಿದ್ದಾರೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ರೂಪೇಶಕುಮಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Lok Sabha Election 2024 : ಬಿಜೆಪಿಯ 2ನೇ ಪಟ್ಟಿ 22ರಂದು ಘೋಷಣೆ; ಈಶ್ವರಪ್ಪ ಬಗ್ಗೆ ಮಾತಿಲ್ಲ ಎಂದ BSY
ಸಚಿವ ಜೋಶಿ ಅಭಿನಂದನೆ
ದೇಶದ 58 ವಿಮಾನ ನಿಲ್ದಾಣಗಳ ಪೈಕಿ ಹುಬ್ಬಳ್ಳಿ 5ನೇ ಸ್ಥಾನ ಪಡೆದಿರುವುದು ಸಂತಸದ ಸಂಗತಿ. ಈ ಮನ್ನಣೆ ಪಡೆಯಲು ಕಾರಣಕರ್ತರಾದ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.