ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ನೂತನ ಮೇಯರ್ ಆಗಿ ಈರೇಶ್ ಅಂಚಟಗೇರಿ ಮತ್ತು ಉಪಮೇಯರ್ ಆಗಿ ಉಮಾ ಮುಕ್ಕುಂದ ಆಯ್ಕೆಯಾಗಿದ್ದಾರೆ.
ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಶನಿವಾರ ಮಧ್ಯಾಹ್ನ ಚುನಾವಣೆ ನಿಗದಿಪಡಿಸಲಾಗಿತ್ತು. ಚುನಾವಣಾಧಿಕಾರಿ ಆದಿತ್ಯ ಆಮ್ಲಾನ್ ಬಿಸ್ವಾಸ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಕೈ ಎತ್ತುವ ಮೂಲಕ ಮೇಯರ್ ಆಯ್ಕೆ ಮಾಡಲಾಯಿತು.
ಬಿಜೆಪಿಯ ಮೇಯರ್ ಅಭ್ಯರ್ಥಿ ಈರೇಶ ಅಂಚಟಗೇರಿ 50 ಮತ ಪಡೆದಿದ್ದು, ಇವರ ವಿರುದ್ಧ 35 ಮತ ಬಿತ್ತು. ಮೂವರು ತಟಸ್ಥರಾಗಿದ್ದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಮಯೂರ್ ಮೋರೆ ವಿರುದ್ಧ ಈರೇಶ್ ಗೆಲುವು ಸಾಧಿಸಿದ್ದಾರೆ. ಇನ್ನು ಉಪ ಮೇಯರ್ ಉಮಾ ಮುಕುಂದ್ ಪರ 51 ಮತ, ವಿರುದ್ಧ 35 ಮತ ಬಿದ್ದವು. ಮೂವರು ತಟಸ್ಥರಾಗಿದ್ದರು.
ʼʼಬಿಜೆಪಿ ನಾಯಕರು ನನ್ನ ಮೇಲೆ ಭರವಸೆ ಇಟ್ಟು ಜವಾಬ್ದಾರಿ ನೀಡಿದ್ದಾರೆ. ಮೇಯರ್ ಆಗಿ ಆಯ್ಕೆಯಾಗಲು ಬೆಂಬಲಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್, ಅರವಿಂದ್ ಬೆಲ್ಲದ್‌ಗೆ ಧನ್ಯವಾದ ಸಲ್ಲಿಸುತ್ತೇನೆ. ಕಳೆದ ಮೂರೂವರೆ ವರ್ಷದಿಂದ ಅಧಿಕಾರಿಗಳು ಆಡಳಿತ ಮಾಡುತ್ತಿದ್ದರು. ನಾವು ಪಾಲಿಕೆ ಆಡಳಿತವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ, ಸಾರ್ವಜನಿಕರ ಕುಂದು- ಕೊರತೆಗಳನ್ನು ಪರಿಹರಿಸಲಾಗುತ್ತದೆʼʼ ಎಂದು ಮೇಯರ್ ಈರೇಶ ತಿಳಿಸಿದರು.
ಇದನ್ನೂ ಓದಿ | ಜೋಷಿ, ಶೆಟ್ಟರ್ ಎಂಟ್ರಿ: ಹುಬ್ಬಳ್ಳಿ-ಧಾರವಾಡ ಮೇಯರ್, ಉಪಮೇಯರ್ ಹುದ್ದೆ ಬಿಜೆಪಿ ತೆಕ್ಕೆಗೆ?