ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ (Hubli Ganesha Festival) ಆಚರಣೆ ವಿಚಾರ ಈಗ ಮತ್ತಷ್ಟು ಕಾವೇರಿದ್ದು, ವಿವಿಧ ಹಿಂದು ಸಂಘಟನೆಗಳಿಂದ ಸಹಿಸಂಗ್ರಹ ಪ್ರತಿಭಟನೆ ಆರಂಭವಾಗಿದೆ. ಅಲ್ಲದೆ, ಆಚರಣೆಗೆ ಅನುಮತಿ ನೀಡದೆ ಇದ್ದರೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ರಾಣಿ ಚೆನ್ನಮ್ಮ ಮೈದಾನ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಬಜರಂಗದಳ, ಹಿಂದು ಜಾಗರಣಾ ವೇದಿಕೆ, ಶ್ರೀರಾಮ ಸೇನಾ ಸೇರಿ ವಿವಿಧ ಗಣೇಶೋತ್ಸವ ಮಂಡಳಿಗಳ ಮುಖಂಡರು ಭಾಗಿಯಾಗಿದ್ದರು. ದುರ್ಗದ ಬೈಲಿಂದ ದಾಜಿಬಾನ್ ಪೇಟೆ ಮೂಲಕ ಮಹಾನಗರ ಪಾಲಿಕೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗಿಯಾದ ಪ್ರಮೋದ್ ಮುತಾಲಿಕ್, ಗಣೆಶೋತ್ಸವ ಆಚರಣೆಗೆ ಸರ್ಕಾರ ಹಾಗೂ ಪಾಲಿಕೆ ಮೀನಮೇಷ ಎಣಿಸುತ್ತಿದೆ. ಈದ್ಗಾ ಮೈದಾನ ಯಾರಪ್ಪನ ಸ್ವತ್ತಲ್ಲ, ಅದು ಸಾರ್ವಜನಿಕರ ಸ್ವತ್ತು. ಅಲ್ಲಿ ಮುಸ್ಲಿಂ ಪ್ರಾರ್ಥನೆಗೆ ಅವಕಾಶ ನೀಡುವುದಾದರೆ ಗಣೆಶೋತ್ಸವಕ್ಕೆ ಯಾಕೆ ಅವಕಾಶ ಇಲ್ಲ ಎಂದು ಪ್ರಶ್ನೆ ಮಾಡಿದರು.
ಅನುಮತಿ ಕೊಟ್ಟರೂ ಸರಿ, ಕೊಡದಿದ್ದರೂ ಸರಿ ಗಣೆಶೋತ್ಸವ ಆಚರಣೆ ಮಾಡಿಯೇ ಮಾಡುತ್ತೇವೆ. ಪಾಲಿಕೆಗೆ ಇದು ಕೊನೆಯ ಗಡುವಾಗಿದ್ದು, ಉತ್ತರ ನೀಡದಿದ್ದರೆ ಸಾವಿರಾರು ಕಾರ್ಯಕರ್ತರ ನೇತೃತ್ವದಲ್ಲಿ ಈದ್ಗಾ ಮೈದಾನದಲ್ಲಿ ಗಣೇಶನನ್ನ ಕೂರಿಸುತ್ತೇವೆ. ತಾಕತ್ತು ಇದ್ದರೆ ಏನು ಬೇಕಾದರೂ ಮಾಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
26ಕ್ಕೆ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ಎಚ್ಚರಿಕೆ
ಗಣೇಶೋತ್ಸವ ವಿಚಾರ ಇಷ್ಟೆಲ್ಲ ವಿವಾದ ಪಡೆದುಕೊಂಡಿದ್ದರೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಒಂದೇ ಒಂದು ಮಾತನ್ನು ಆಡುತ್ತಿಲ್ಲ. ಇದು ಸರಿಯಲ್ಲ, ಒಂದು ವೇಳೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡದೇ ಇದ್ದರೆ, ಆಗಸ್ಟ್ 26ರಂದು ಜಗದೀಶ್ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ; ಅನುಮತಿಗೆ 3 ದಿನಗಳ ಡೆಡ್ ಲೈನ್