Site icon Vistara News

Hubli Airport: ಹುಬ್ಬಳ್ಳಿ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ಕಾಮಗಾರಿ 2 ವರ್ಷದಲ್ಲಿ ಪೂರ್ಣ: ಪ್ರಲ್ಹಾದ್‌ ಜೋಶಿ

Pralhad Joshi

ಹುಬ್ಬಳ್ಳಿ: ವಿಶ್ವದರ್ಜೆ ಮಟ್ಟದಲ್ಲಿ ನಿರ್ಮಿಸಲು ಚಾಲನೆ ನೀಡಿರುವ ವಾಣಿಜ್ಯ ನಗರಿ ಹುಬ್ಬಳ್ಳಿ ವಿಮಾನ ನಿಲ್ದಾಣ (Hubli Airport) ಕಾಮಗಾರಿ ಇನ್ನೆರೆಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ವರ್ಚ್ಯುವಲ್ ಆಗಿ ಶಂಕುಸ್ಥಾಪನೆ ನೆರವೇರಿಸಿದ ವೇಳೆ ಸಚಿವರು ಮಾತನಾಡಿದರು.

340 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಅನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅತ್ಯಂತ ವೇಗವಾಗಿ ಕಾಮಗಾರಿ ನಿರ್ವಹಿಸಲಾಗುತ್ತದೆ. ಎರಡು ವರ್ಷದ ನಂತರ ಇಲ್ಲಿ 4ರಿಂದ 10 ವಿಮಾನಗಳ ಪಾರ್ಕಿಂಗ್ ವ್ಯವಸ್ಥೆ ಸಾಧ್ಯವಾಗಲಿದೆ. ನಿತ್ಯ 2400 ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ | Water Crisis: ಹೊಂದಾಣಿಕೆಗಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಸರ್ಕಾರ; ಆರ್‌. ಅಶೋಕ್‌ ವಾಗ್ದಾಳಿ

ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತದಾದ್ಯಂತ 15 ವಿಮಾನ ನಿಲ್ದಾಣಗಳ ಹೊಸ ಟರ್ಮಿನಲ್ ಕಟ್ಟಡಗಳ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಚಾಲನೆ ನೀಡಿದ್ದಾರೆ. ಇದರಲ್ಲಿ ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಕಾಮಗಾರಿಯೂ ಒಂದು 350 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಮೂಲಸೌಕರ್ಯದೊಂದಿಗೆ ಹುಬ್ಬಳ್ಳಿ ಹೊಸ ಟರ್ಮಿನಲ್ ಕಂಗೊಳಿಸಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಅಭಿವೃದ್ಧಿ ಹೊಂದುತ್ತಿರುವ ಅವಳಿ ನಗರಗಳಿಗೆ ಈ ಹೊಸ ಕಾಮಗಾರಿ ಹೆಮ್ಮೆಯ ಗರಿಯಾಗಲಿದ್ದು, ವಿಕಸಿತ ಭಾರತಕ್ಕೆ ತನ್ನದೇ ಆದ ಕೊಡುಗೆ ನೀಡಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದು ಹೇಳಿದರು.

ಇದನ್ನೂ ಓದಿ | Lok Sabha Election 2024: ಬಿಜೆಪಿ ಸಿಇಸಿ ಸಭೆ ಮುಂದೂಡಿಕೆ; ನಾಳೆ ಮೋದಿ ಭಾಗಿ? ವಿಜಯೇಂದ್ರ ಡೆಲ್ಲಿಯಲ್ಲೇ ಉಳಿದಿದ್ದು ಏಕೆ?

ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ್‌, ಮಹೇಶ್ ಟೆಂಗಿನಕಾಯಿ, ಎಮ್. ಆರ್. ಪಾಟೀಲ್, ಪ್ರಸಾದ್‌ ಅಬ್ಬಯ್ಯ, ಹು-ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಭಾರದ್ವಾಡ ಹಾಗೂ ವಿಮಾನ ನಿಲ್ದಾಣದ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Exit mobile version