Site icon Vistara News

Free Electricity | ಕಾಂಗ್ರೆಸ್‌ನ ಉಚಿತ ವಿದ್ಯುತ್‌ ಘೋಷಣೆ ಜಾರಿಗೆ ಬೇಕು ₹23 ಸಾವಿರ ಕೋಟಿ!: ಅನುಷ್ಠಾನ ಅಸಾಧ್ಯ?

yuva kranti DK Shivakumar speech

ರಮೇಶ ದೊಡ್ಡಪುರ, ಬೆಂಗಳೂರು
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜಕೀಯ ಪಕ್ಷಗಳು ಜನರನ್ನು ಸೆಳೆಯಲು ವಿವಿಧ ತಂತ್ರ ಅನುಸರಿಸುತ್ತಿವೆ. ಇದರ ಮೊದಲ ಹೆಜ್ಜೆಯಾಗಿ, ತಾನು ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ಮನೆಗಳಿಗೂ ಮಾಸಿಕ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ತಿಳಿಸಿದೆ.

ಸಾಮಾನ್ಯ ಜನರಿಗೆ ಇದರಿಂದ ಅಗಾಧ ಲಾಭವಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಇದು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಜ್ಯದಲ್ಲಿ ಗೃಹೋಪಯೋಗಿ ವಿದ್ಯುತ್‌ ಸಂಪರ್ಕಕ್ಕೆ ಇದೀಗ ಎರಡು ರೀತಿಯ ದರಪಟ್ಟಿ ಇದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಪಟ್ಟಿ ಬೇರೆ ಬೇರೆಯಿದೆ. ನಗರ ಪ್ರದೇಶದಲ್ಲಿ ಪ್ರಾರಂಭದ 50 ಯುನಿಟ್‌ ವಿದ್ಯುತ್‌ಗೆ ತಲಾ 4.15 ರೂ. ಆಗುತ್ತದೆ. 50ರಿಂದ ೧೦೦ ಯುನಿಟ್‌ವರೆಗೆ ತಲಾ ಯುನಿಟ್‌ಗೆ 5.60 ರೂ. ಆಗುತ್ತದೆ. 100 ರಿಂದ 200 ಯುನಿಟ್‌ವರೆಗೆ ತಲಾ 7.15 ರೂ. ಆಗುತ್ತದೆ. ಅಂದರೆ ಕಾಂಗ್ರೆಸ್‌ ಘೊಷಿಸಿರುವಂತೆ ಪ್ರಾರಂಭದ 200 ಯುನಿಟ್‌ ವಿದ್ಯುತ್‌ ಬಿಲ್‌ ಅನ್ನು ಸಂಪೂರ್ಣ ಉಚಿತ ಮಾಡಿದರೆ ನಗರ ಪ್ರದೇಶದಲ್ಲಿ ಇರುವ ಮನೆಗಳಿಗೆ ಪ್ರತಿ ತಿಂಗಳು ಅಂದಾಜು 1,200 ರೂ. ಉಳಿತಾಯ ಆಗುತ್ತದೆ.

ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭದ 50 ಯುನಿಟ್‌ ವಿದ್ಯುತ್‌ಗೆ ತಲಾ 3.90 ರೂ. ಆಗುತ್ತದೆ. 50ರಿಂದ ೧೦೦ ಯುನಿಟ್‌ವರೆಗೆ ತಲಾ ಯುನಿಟ್‌ಗೆ 5.15 ರೂ. ಆಗುತ್ತದೆ. 100 ರಿಂದ 200 ಯುನಿಟ್‌ವರೆಗೆ ತಲಾ 6.70 ರೂ. ಆಗುತ್ತದೆ. ಅಂದರೆ ಕಾಂಗ್ರೆಸ್‌ ಘೊಷಿಸಿರುವಂತೆ ಪ್ರಾರಂಭದ 200 ಯುನಿಟ್‌ ವಿದ್ಯುತ್‌ ಬಿಲ್‌ ಅನ್ನು ಸಂಪೂರ್ಣ ಉಚಿತ ಮಾಡಿದರೆ ಗ್ರಾಮೀಣ ಪ್ರದೇಶದಲ್ಲಿ ಇರುವ ಮನೆಗಳಿಗೆ ಪ್ರತಿ ತಿಂಗಳು ಅಂದಾಜು 1,100 ರೂ. ಉಳಿತಾಯ ಆಗುತ್ತದೆ.

ಬೊಕ್ಕಸಕ್ಕೆ ಎಷ್ಟು ಹೊರೆ?

ಸದ್ಯ ಕರ್ನಾಟಕದಲ್ಲಿ ಐದು ವಿದ್ಯುತ್‌ ಪ್ರಸರಣ ಕಂಪನಿಗಳಿವೆ. ಅವುಗಳಲ್ಲಿ ಗೃಹಬಳಕೆ, ವಾಣಿಜ್ಯ, ಕೈಗಾರಿಕೆ ಸೇರಿ ಅನೇಕ ವಿಧದ ಸಂಪರ್ಕಗಳನ್ನು ಕಂಪನಿಗಳು ನೀಡುತ್ತವೆ. ಪ್ರತಿಯೊಂದಕ್ಕೂ ಪ್ರತ್ಯೇಕ ದರವಿದೆ. ಇದೀಗ ಕಾಂಗ್ರೆಸ್‌ ಘೋಷಣೆ ಮಾಡಿರುವುದು ಗೃಹೋಪಯೋಗಿ ಸಂಪರ್ಕಕ್ಕೆ ಮಾತ್ರ. ಇದನ್ನು L2 ಸಂಪರ್ಕಗಳು ಎಂದು ಪರಿಗಣಿಸಲಾಗುತ್ತದೆ.

ಅದರಂತೆ, ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಗೆ (ಬೆಸ್ಕಾಂ) 86.08 ಲಕ್ಷ ಗ್ರಾಹಕರಿದ್ದಾರೆ. ಅದೇ ರೀತಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿಗೆ(ಚೆಸ್ಕಾಂ) 20.52 ಲಕ್ಷ, ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿಗೆ(ಮೆಸ್ಕಾಂ) 15.88 ಲಕ್ಷ, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಗೆ(ಹೆಸ್ಕಾಂ) 28.5 ಲಕ್ಷ ಹಾಗೂ ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪನಿಗೆ(ಜೆಸ್ಕಾಂ) 19.58 ಲಕ್ಷ ಗೃಹೋಪಯೋಗಿ ಸಂಪರ್ಕವಿದೆ. ಇದೆಲ್ಲವೂ ಸೇರಿ ಒಟ್ಟು ಅಂದಾಜು 1.70 ಕೋಟಿ ಸಂಪರ್ಕವಾಗುತ್ತದೆ.

ಅಂದರೆ ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ಮಾಸಿಕ 1,100 ರೂ. ಹಾಗೂ ನಗರದ ಸಂಪರ್ಕಕ್ಕೆ ಮಾಸಿಕ 1,200 ರೂ. ಅನ್ನು ಸರಾಸರಿಯಾಗಿಸಿದರೆ 1,150 ರೂ. ಆಗುತ್ತದೆ. ರಾಜ್ಯದಲ್ಲಿರುವ ಒಟ್ಟು 1.70 ಕೋಟಿ ಸಂಪರ್ಕಕ್ಕೆ ಲೆಕ್ಕ ಮಾಡಿದರೆ ಸರ್ಕಾರಕ್ಕೆ ಮಾಸಿಕ 1,955 ಕೋಟಿ ರೂ. ಆಗುತ್ತದೆ. ಅಂದರೆ ಪ್ರತಿ ವರ್ಷ ರಾಜ್ಯ ಸರ್ಕಾರಕ್ಕೆ ಅಂದಾಜು 23,400 ಕೋಟಿ ರೂ. ಹೊರೆಯಾಗುತ್ತದೆ.

ಇಂಧನ ಇಲಾಖೆಯಿಂದ ಈಗಾಗಲೆ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ಇದಕ್ಕೆ ವಾರ್ಷಿಕ 12 ಸಾವಿರ ಕೋಟಿ ರೂ. ಸರ್ಕಾರ ನೀಡುತ್ತಿದೆ. ಎಸ್‌ಸಿಎಸ್‌ಟಿ ಸಮುದಾಯದ ಮನೆಗಳಿಗೆ 75 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದ್ದು, ಅದಕ್ಕೆ ವಾರ್ಷಿಕ 4 ಸಾವಿರ ಕೋಟಿ ರೂ. ನೀಡಲಾಗುತ್ತಿದೆ. ಇದೆಲ್ಲವನ್ನೂ ಸೇರಿಸಿದರೆ ಸರ್ಕಾರಕ್ಕೆ ವಾರ್ಷಿಕ ಅಂದಾಜು 40 ಸಾವಿರ ಕೋಟಿ ರೂ. ತಗಲುತ್ತದೆ. ಎಲ್ಲ ಮನೆಗಳಿಗೂ ಉಚಿತ 200 ಯುನಿಟ್‌ ನೀಡುವುದನ್ನು ಎಸ್‌ಸಿಎಸ್‌ಟಿ ಕುಟುಂಬಗಳಿಗೂ ವಿಸ್ತರಣೆ ಮಾಡಬೇಕಾಗುತ್ತದೆ, ಅದರ ಹೊರೆಯೂ ಸೇರಿದರೆ 45-50 ಸಾವಿರ ಕೋಟಿ ರೂ. ಕೇವಲ ವಿದ್ಯುತ್‌ ಸಬ್ಸಿಡಿಗಾಗಿ ಸರ್ಕಾರ ನೀಡಬೇಕಾಗುತ್ತದೆ.

ಕರ್ನಾಟಕವು ವಿದ್ಯುತ್‌ ಉತ್ಪಾದನೆಯಲ್ಲಿ ಸಾಧನೆ ಮಾಡಿದೆ. ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್‌ ಉತ್ಪಾದನೆ ಆಗುತ್ತಿದೆ. ಆದರೂ ಇನ್ನೂ ಕೃಷಿ ಪಂಪ್‌ಸೆಟ್‌ಗಳಿಗೆ ದಿನದಲ್ಲಿ ಆರು ಗಂಟೆ ಥ್ರೀ ಫೇಸ್‌ ವಿದ್ಯುತ್‌ ನೀಡಿಲ್ಲ. ಈಗಲೆ ಸರ್ಕಾರ ನೀಡಬೇಕಿರುವ ಸಬ್ಸಿಡಿ ಹಣವನ್ನು ನೀಡದೆ ಎಸ್ಕಾಂ ಕಂಪನಿಗಳು ನಷ್ಟದದಲ್ಲಿವೆ. ಇಷ್ಟೆಲ್ಲ ಸಮಸ್ಯೆಯ ನಡುವೆ ಹೆಚ್ಚುವರಿಯಾಗಿ 23 ಸಾವಿರ ಕೋಟಿ ರೂ. ಹೊರೆಯನ್ನು ತಡೆದುಕೊಳ್ಳುವುದು ಆರ್ಥಿಕವಾಗಿ ಅಸಾಧ್ಯ ಎಂಬ ಮಾತು ತಜ್ಞರ ವಲಯದಲ್ಲಿ ಕೇಳಿಬರುತ್ತಿದೆ. ಸ್ವತಃ ಇಂಧನ ಸಚಿವರಾಗಿದ್ದವರು ಡಿ.ಕೆ. ಶಿವಕುಮಾರ್‌, ಹತ್ತಕ್ಕೂ ಹೆಚ್ಚು ಬಜೆಟ್‌ ಮಂಡಿಸಿದವರು ಸಿದ್ದರಾಮಯ್ಯ. ಇಷ್ಟೆಲ್ಲ ಅನುಭವ ಇದ್ದಾಗ್ಯೂ ಇಂತಹ ಘೋಷಣೆ ಹೇಗೆ ಮಾಡಿದರು? ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜಸ್ಥಾನದಲ್ಲಿ 50 ಯುನಿಟ್‌ ಉಚಿತ ಎಂದು ಘೋಷಣೆ ಮಾಡಲಾಗಿದೆ. ಆದರೂ 200 ಯುನಿಟ್‌ ಘೋಷಣೆ ಮಾಡಿದ್ದು ಹೇಗೆ ಎಂಬ ಅಚ್ಚರಿ ವ್ಯಕ್ತವಾಗುತ್ತಿದೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಡಿ.ಕೆ.ಶಿವಕುಮಾರ್ ಹತಾಶರಾಗಿ ಈ ರೀತಿ ಘೋಷಣೆ ಮಾಡಿದ್ದಾರೆ. ಈ ಹೇಳಿಕೆಗಳನ್ನು ಗಮನಿಸಿದರೆ, ಮುಂದೆ ಅನುಷ್ಠಾನ ಮಾಡುವ ಉದ್ದೇಶ ಅವರಿಗಿಲ್ಲ. ಹೇಗಾದರೂ ಮಾಡಿ, ಸುಳ್ಳು ಭರವಸೆ ನೀಡಿ ಚುನಾವಣೆ ಗೆಲ್ಲಬೇಕೆನ್ನುವುದು ಸ್ಪಷ್ಟವಾಗಿದೆ. ಇಷ್ಟು ವರ್ಷ ಆಡಳಿತ ಮಾಡಿದ ಜವಾಬ್ದಾರಿಯುತ ಪಕ್ಷ ಕಾಂಗ್ರೆಸ್ ಹೀಗೆ ಹೇಳುವುದು ಸಲ್ಲದು. ಅರವಿಂದ ಕೇಜ್ರಿವಾಲ್ ಹೇಳಿದರೆ ನಡೆಯುತ್ತದೆ. ಅವರಿನ್ನೂ ಹೊಸಬರು. ಕಾಂಗ್ರೆಸ್ ಕಾಲದಲ್ಲಿ 6 ತಾಸು ವಿದ್ಯುತ್ ಸರಿಯಾಗಿ ನೀಡಲಾಗಲಿಲ್ಲ. ಇನ್ನು ಉಚಿತ ವಿದ್ಯುತ್ ಹೇಗೆ ನೀಡಲಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಸಿಎಂ ಬೊಮ್ಮಾಯಿ ಮಾತಿಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ನಾನು ಪವರ್ ಮಿನಿಸ್ಟರ್ ಆಗಿದ್ದವನು. ನಾನು ದಾಖಲೆ ಸಹ ಕೊಡುತ್ತೇನೆ. ರಾಜ್ಯದಲ್ಲಿ ವಿದ್ಯುತ್ ಕೊರತೆಯಿಂದ ಪವರ್ ಕಟ್ ಆಗುತ್ತಿತ್ತು. ನಾನು ಪವರ್ ಮಿನಿಸ್ಟರ್ ಆಗಿ ಇಳಿದ ಮೇಲೆ, ಈವರೆಗೂ ಹೆಚ್ಚುವರಿಯಾಗಿ ವಿದ್ಯುತ್‌ ಮಾರಾಟ‌ ಮಾಡುತ್ತಾ ಇದ್ದಾರೆ. ನನಗೆ ಎಷ್ಟು, ಯಾವ ರೀತಿಯ ಹಣ ಸಂಗ್ರಹ ಸರ್ಕಾರಕ್ಕೆ ಮಾಡಬೇಕು ಎನ್ನುವುದು ಗೊತ್ತು. ಜನರಿಗೂ ಇದು ಗೊತ್ತಿದೆ.

ಜನರಿಗೆ ಸಹಾಯ ಮಾಡಲು ಪ್ರಜಾಧ್ವನಿ ಯಾತ್ರೆ ಘೋಷಣೆ ಮಾಡಿದ್ದೇವೆ. ಅವರು ನುಡಿದಂತೆ ನಡೆದಿಲ್ಲ. ಉದ್ಯೋಗ ಕೊಡುತ್ತೇವೆ, ರೈತರ ಆದಾಯ ಹೆಚ್ಚು ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಯಾವುದನ್ನೂ ಮಾಡಿಲ್ಲ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Congress Guarantee | ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಉಚಿತ ವಿದ್ಯುತ್‌: ಪ್ರಜಾಧ್ವನಿ ಯಾತ್ರೆಯಲ್ಲಿ ಮೊದಲನೆ ಘೋಷಣೆ

Exit mobile version