Site icon Vistara News

Human-Elephant Conflict: ಮಾನವ-ಆನೆ ಸಂಘರ್ಷ ತಡೆಗೆ ಸರ್ಕಾರ ಬದ್ಧವಾಗಿದೆ: ಸಿಎಂ ಸಿದ್ದರಾಮಯ್ಯ

Human-Elephant Conflict

ಬೆಂಗಳೂರು: ವಿಶ್ವ ಆನೆ ದಿನ (ಆ.12) ಹಿನ್ನೆಲೆಯಲ್ಲಿ ಆನೆಗಳ ರಕ್ಷಣೆ ಹಾಗೂ ಅವುಗಳ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸಲು ನಗರದ ಹೊರವಲಯದ ಜಿಕೆವಿಕೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ (Human-Elephant Conflict) ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ದೇಶದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಮಾನವಸ್ನೇಹಿ ಗಜರಾಜನ ಸಂರಕ್ಷಣೆ ಹಾಗೂ ಅವುಗಳ ಆವಾಸಸ್ಥಾನಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಮಾನವ-ಆನೆ ಸಂಘರ್ಷ ತಡೆಗೆ ಸರ್ಕಾರ ಬದ್ಧವಾಗಿದೆ. ಸಂಘರ್ಷ ಕಡಿಮೆ ಮಾಡಲು ಕ್ರಮಕೈಗೊಳ್ಳಲಾಗುವುದು. ರೈತರ ಬೆಳೆಗಳನ್ನು ಆನೆಗಳು ನಾಶ ಮಾಡುತ್ತಿವೆ, ಹೀಗಾಗಿ ನಾಡಿಗೆ ಬರುತ್ತಿರುವ ಆನೆಗಳನ್ನು ತಡೆಯುವ ಅಗತ್ಯವಿದೆ. ಈ ದಿಸೆಯಲ್ಲಿ ಉತ್ತಮವಾದ ಸಲಹೆಗಳು ಬರಲಿ ಎಂದು ಹೇಳಿದರು.

ತಜ್ಞರ ಸಲಹೆಗಳನ್ನು ಸರ್ಕಾರ ಪರಿಗಣಿಸಲಿದೆ: ಡಿಕೆಶಿ

ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಆನೆ ಮತ್ತು ಮನುಷ್ಯನ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಕಳೆದ ಒಂದು ವರ್ಷದಲ್ಲಿ 18 ಜನ ತೀರಿಕೊಂಡಿದ್ದಾರೆ. ಕನಕಪುರದ ನಮ್ಮ‌ ಮನೆ ಪಕ್ಕದಲ್ಲೇ ಸಾಲು ಸಾಲು ಆನೆಗಳು ತೆರಳುತ್ತವೆ. ಇದರಿಂದ ಆತಂಕ ಇದೆ. ಕಾಡಿನಲ್ಲಿ ನೀರು, ಮೇವಿನ ಕೊರತೆ ಇದೆ, ಹಾಗಾಗಿ ಆನೆಗಳು ನಾಡಿನತ್ತ ಮುಖ ಮಾಡುತ್ತಿವೆ. ಮಾನವ ಮತ್ತು ಆನೆ ಸಂಘರ್ಷವನ್ನು ಅಂತ್ಯಗೊಳಿಸಬೇಕಿದೆ. ಇಲ್ಲಿ ಭಾಗವಹಿಸಿರುವ ತಜ್ಞರು ನೀಡುವ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಮುಖ್ಯಮಂತ್ರಿಗಳಿಗೂ ಇದರ ಅರಿವಿದೆ ಎಂದರು.

ಆನೆ ದಾಳಿಯಿಂದ ತೊಂದರೆಗೆ ಒಳಗಾದವರು ಮನವಿ ಪತ್ರಗಳನ್ನ ಸಲ್ಲಿಸಿದ್ದಾರೆ. ಇದು ಕೇವಲ ಅರಣ್ಯ ಇಲಾಖೆಗೆ ಮಾತ್ರ ಸಂಬಂಧಿಸಿದಲ್ಲ, ಎಲ್ಲರೂ ಇದಕ್ಕೆ ಕೈಜೋಡಿಸಬೇಕು. ಈ ಮೂಲಕ ಮನಷ್ಯ ಮತ್ತು ಪ್ರಕೃತಿ ಸಂಬಂಧ ವೃದ್ಧಿಯಾಗಬೇಕು ಎಂದರು.

ಅರಣ್ಯವನ್ನು ರಕ್ಷಿಸುವಲ್ಲಿ ಆದಿವಾಸಿಗಳ ಕೊಡುಗೆ ಅಪಾರ: ಈಶ್ವರ ಖಂಡ್ರೆ

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಅರಣ್ಯವನ್ನು ರಕ್ಷಿಸುವಲ್ಲಿ ಆದಿವಾಸಿಗಳ ಕೊಡುಗೆ ಅಪಾರ. ಕಳ್ಳಬೇಟೆ ನಿಗ್ರಹಕ್ಕೆ ಕ್ರಮಗಳಿಂದಾಗಿ ವನ್ಯಮೃಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2023ರ ಆನೆ ಗಣತಿಯ ಪ್ರಕಾರ ರಾಜ್ಯದಲ್ಲಿ 6395 ಆನೆಗಳಿವೆ. ಗಜ ಸಂಖ್ಯೆಯಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. 563 ಹುಲಿ ಹೊಂದಿರುವ ಕರ್ನಾಟಕ ವ್ಯಾಘ್ರಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ ಎಂದರು.

ಅರಣ್ಯ ಪ್ರದೇಶ ಹೆಚ್ಚಳವಾದ ಹಿನ್ನೆಲೆಯಲ್ಲಿ ಆನೆಗಳು ನಾಡಿಗೆ ಬರುತ್ತಿದೆ. ಬೆಳೆ ಹಾನಿ, ಜೀವಹಾನಿ ಸಂಭವಿಸುತ್ತಿದೆ. ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿದ್ದಾರೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 25 ಜನರು ಆನೆಯ ದಾಳಿಯಿಂದ ಮೃತಪಟ್ಟಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಮಾನವ-ವನ್ಯಜೀವಿ ಸಂಘರ್ಷದಲ್ಲಿ ಮಾನವ-ಆನೆ ಸಂಘರ್ಷವೇ ದೊಡ್ಡ ಸವಾಲು. ಹೆಚ್ಚುತ್ತಿರುವ ಮಾನವ ಜನಸಂಖ್ಯೆ, ಕಾಡಿನಂಚಿನವರೆಗೆ ವಿಸ್ತರಿಸುತ್ತಿರುವ ಕೃಷಿ ಚಟುವಟಿಕೆಗಳು ಮತ್ತು ವಸತಿ ಬಡಾವಣೆ ನಿರ್ಮಾಣ ಮಾನವ-ಆನೆ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.

ನಮ್ಮ ಪೂರ್ವಿಕರು ಕಾಡಿನೊಂದಿಗೆ ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ಮಾಡುವುದನ್ನು ಕಲಿತಿದ್ದರು. ಇಂದಿಗೂ ಕಾಡಿನಲ್ಲೇ ವಾಸಿಸುವ ಆದಿವಾಸಿಗಳು, ವನ್ಯಜೀವಿ ದಾಳಿಯಿಂದ ಮೃತಪಡುವುದು ಅಪರೂಪದಲ್ಲೇ ಅಪರೂಪ. ಆದರೆ ನಗರ ವಾಸಿಗಳಾದ ನಾವು ಈಗ ಆಧುನಿಕ ಯುಗದಲ್ಲಿ ಆ ಸಹಬಾಳ್ವೆಯ ಸಂವೇದನೆ ಕಳೆದುಕೊಳ್ಳುತ್ತಿದ್ದೇವೆ. ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವುದು ನಮ್ಮ ಆದ್ಯತೆ ಎಂದರು.

ಜನರ ಮತ್ತು ವನ್ಯಜೀವಿಗಳ ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ಖಾತ್ರಿಪಡಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ. ತಂತ್ರಜ್ಞಾನದ ಅಳವಡಿಕೆ ಮತ್ತು ಸಮುದಾಯ-ಚಾಲಿತ ಉಪಕ್ರಮಗಳೊಂದಿಗೆ ಈ ಸವಾಲನ್ನು ಎದುರಿಸುವಲ್ಲಿ ಇಲಾಖೆ ಮುಂಚೂಣಿಯಲ್ಲಿದೆ. 2023-24 ಸಾಲಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ 100 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದ್ದರು. ಜಗತ್ತು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲು ಎದುರಿಸುತ್ತಿದೆ. ನಾವು ಹಸಿರು ಹೊದಿಕೆ ಹೆಚ್ಚಳ ಮಾಡುವ ಮೂಲಕ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಹೀಗಾಗಿ ನಮ್ಮ ಸರ್ಕಾರ 2023-24ರ ಸಾಲಿನಲ್ಲಿ 5 ಕೋಟಿ ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಿತು. ನಾವು 5 ಕೋಟಿ 48 ಲಕ್ಷ ಸಸಿ ನೆಟ್ಟು ಗುರಿ ಮೀರಿದ ಸಾಧನೆ ಮಾಡಿದ್ದೇವೆ. ಜೊತೆಗೆ ಈ ರೀತಿ ನೆಡಲಾದ ಸಸಿಗಳ ಪೈಕಿ ಎಷ್ಟು ಬದುಕುಳಿದಿದೆ ಎಂದು ತಿಳಿಯಲು ಜಿಯೋ ಟ್ಯಾಗ್ ಮಾಡಿಸಿ ಆಡಿಟ್ ಕೂಡ ಮಾಡುತ್ತಿದ್ದೇವೆ ಎಂದರು.

ಕರ್ನಾಟಕ ಸರ್ಕಾರ ಕಳೆದ ವರ್ಷ 3395.73 ಹೆಕ್ಟೇರ್ ಪ್ರದೇಶವನ್ನು ಅರಣ್ಯ ಎಂದು ಘೋಷಿಸಿದೆ. ಜೊತೆಗೆ 2500 ಎಕರೆಗೂ ಹೆಚ್ಚು ಅರಣ್ಯ ಒತ್ತುವರಿಯನ್ನು ತೆರವು ಮಾಡಿಸಿದೆ. ಅರಣ್ಯ ಅಪರಾಧಗಳನ್ನು ತಡೆಯಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಲು ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆಯನ್ನು ತರಲು ನಾವು ಕಾರ್ಯೋನ್ಮುಖರಾಗಿದ್ದೇವೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಮುಂದಾಗಿದ್ದೇವೆ. ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ದೂರ ಸಂವೇದಿ ತಂತ್ರಜ್ಞಾನ ಉಪಗ್ರಹಗಳ ನೆರವಿನಿಂದ ಮಾಹಿತಿ ಲಭಿಸುತ್ತದೆ. ಇದೇ ತಂತ್ರಜ್ಞಾನವನ್ನು ಅರಣ್ಯ ಒತ್ತುವರಿ ತಡೆಗೂ ಅಳವಡಿಸಲು ಈಗ ನಾವು ಮುಂದಾಗಿದ್ದೇವೆ. ನೀಲಗಿರಿ ತಪ್ಪಲಿನಲ್ಲಿ ಸಂರಕ್ಷಿತ ಕಾನನದೊಳಗೆ ಆನೆಗಳ ಸುರಕ್ಷಿತ ಸಂಚಾರ ಉತ್ತೇಜಿಸಲು ನಾವು ಒಟ್ಟಾಗಿ ಅಂತಾರಾಜ್ಯ ಸಮನ್ವಯ ಸಮಿತಿಯನ್ನು (ಐಸಿಸಿ) ರಚಿಸಿದ್ದೇವೆ. ಆ ಸಂಬಂಧ ಚಾರ್ಟರ್‌ಗೆ ಸಹಿ ಹಾಕಿದ್ದೇವೆ. ಬಂಡೀಪುರದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಸಿದ್ಧಪಡಿಸಿದ “ಬಂಡೀಪುರ ಚಾರ್ಟರ್” ಒಡಂಬಡಿಕೆ ಈ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದರು.

ಮಾನವ-ಆನೆ ಸಂಘರ್ಷದಿಂದ ಮೃತಪಟ್ಟವರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ತಕ್ಷಣವೇ ಆರ್ಥಿಕ ಪರಿಹಾರ ಮತ್ತು ನೆರವು ನೀಡುತ್ತಿದ್ದೇವೆ. ಬೆಳೆ ಪರಿಹಾರವನ್ನು ತ್ವರಿತವಾಗಿ ವಿತರಿಸುತ್ತಿದ್ದೇವೆ. ಜೊತೆಗೆ ಕರ್ನಾಟಕ ಸರ್ಕಾರವು ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ರಕ್ಷಿಸಲು ಮತ್ತು ಜನರ ಜೀವ ಉಳಿಸಲು ಸೌರ ವಿದ್ಯುತ್ ಬೇಲಿ ಅಳವಡಿಸಿಕೊಳ್ಳಲು ಸಬ್ಸಿಡಿ ನೀಡುತ್ತಿದೆ. ಮಾನವ-ವನ್ಯಜೀವಿ ಸಂಘರ್ಷವನ್ನು ನಿಭಾಯಿಸಲು ನಾವು ಪ್ರತ್ಯೇಕ ಬಜೆಟ್ ಅನ್ನು ನಿಗದಿಪಡಿಸಿದ್ದೇವೆ. ರೈಲ್ವೆ ಬ್ಯಾರಿಕೇಡ್‌ಗಳು, ಸೌರ ತಂತಿ ಬೇಲಿ ಅಳವಡಿಕೆ, ಆನೆ-ನಿಗ್ರಹ ಕಂದಕಗಳ ನಿರ್ಮಾಣಕ್ಕಾಗಿ ವಾರ್ಷಿಕವಾಗಿ 150 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದೇವೆ. ಗುತ್ತಿಗೆ ನೌಕರರು ಸೇರಿದಂತೆ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ನಾವು “ಕಷ್ಟಕರ ಸನ್ನಿವೇಶದ ಕಾರ್ಯ ನಿರ್ವಹಣಾ ಭತ್ಯೆ” ಯನ್ನು ನೀಡುತ್ತಿದ್ದೇವೆ. ಆನೆಗಳ ಸಂಚಾರದ ಬಗ್ಗೆ ಮಾಹಿತಿ ತಿಳಿಯಲು ರೇಡಿಯೋ ಕಾಲರ್ ಅಳವಡಿಸುವ ಕಾರ್ಯವನ್ನೂ ರಾಜ್ಯ ಸರ್ಕಾರ ಮಾಡುತ್ತಿದೆ.

ಜಿಎಸ್ಎಂ ಆಧಾರಿತ ಕ್ಯಾಮೆರಾ ಟ್ರ್ಯಾಪ್‌ಗಳು ಮತ್ತು ಗರುಡ ಇ- ನಿಗಾ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ವನ್ಯಜೀವಿಗಳು ಮತ್ತು ಜನರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದೇವೆ. ಮೇ 2023 ರಲ್ಲಿ ದಕ್ಷಿಣ ಭಾರತದಾದ್ಯಂತ ನಡೆಸಿದ ಸಂಯೋಜಿತ ಆನೆಗಳ ಜನಸಂಖ್ಯೆಯ ಅಂದಾಜು ವಿಜ್ಞಾನ ಆಧಾರಿತ ನಿರ್ವಹಣೆಗೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಈ ರೂಢಿಗಳಿಂದ ಸಂಗ್ರಹಿಸಿದ ದತ್ತಾಂಶವು ಅಮೂಲ್ಯವಾಗಿದೆ ಎಂದರು.

ಇದನ್ನೂ ಓದಿ | Tungabhadra Dam: ರಾಜ್ಯದ ಎಲ್ಲ ಡ್ಯಾಮ್‌ಗಳ ಪರಿಶೀಲನೆಗೆ ಸಮಿತಿ ರಚನೆ: ಡಿ.ಕೆ. ಶಿವಕುಮಾರ್ ಸುಳಿವು

ಕಾರ್ಯಕ್ರಮದಲ್ಲಿ ಕೇರಳ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ , ತಮಿಳುನಾಡು ಅರಣ್ಯ ಸಚಿವ ಅರಣ್ಯ ಸಚಿವ ಎಂ.ಮತಿವೇಂಥನ್, ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಮಂಜುನಾಥ್ ಪ್ರಸಾದ್ ಸೇರಿದಂತೆ ಹಲವರು ಭಾಗಿಯಾಗಿದ್ದರು.


Exit mobile version