Site icon Vistara News

ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಕೇಸ್‌; ಬೆಳಗಾವಿಗೆ ಮಾನವ ಹಕ್ಕುಗಳ ಆಯೋಗದ ತಂಡ ಭೇಟಿ

National Human Rights Commission

ಬೆಳಗಾವಿ: ವಂಟಮೂರಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ (Belagavi woman assault case) ಹಿನ್ನೆಲೆಯಲ್ಲಿ ಬೆಳಗಾವಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡ ಭಾನುವಾರ ಭೇಟಿ ನೀಡಿದೆ. ಮೂವರು ಸದಸ್ಯರು ಇರುವ ತಂಡ ನಗರಕ್ಕೆ ಆಗಮಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದೆ.

ಸಮಾಜ ಕಲ್ಯಾಣ ಇಲಾಖೆಯಿಂದಲೂ ಆಯೋಗ ಮಾಹಿತಿ ಪಡೆದಿದೆ. ಬೆಳಗಾವಿ ಗ್ರಾಮೀಣ ಎಸಿಪಿ ಎಸ್‌.ವಿ. ಗಿರೀಶ್ ಅವರಿಂದ ಮಾಹಿತಿ ಪಡೆದ ಸಿಬ್ಬಂದಿ, ಸದ್ಯ ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ತಂಡವಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮಾಹಿತಿ ಕಲೆಹಾಕುತ್ತಿದ್ದಾರೆ.

ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ನಾಲ್ಕು ವಾರಗಳಲ್ಲಿ ವಿವರವಾದ ವರದಿ ಸಲ್ಲಿಸಬೇಕು ಎಂದು ಆಯೋಗ ಸೂಚಿಸಿದೆ.

ಇದನ್ನೂ ಓದಿ | Lok Sabha Election 2024: ಸಿಎಂ ಸಿದ್ದರಾಮಯ್ಯ- ಶೆಟ್ಟರ್‌ ರಹಸ್ಯ ಮಾತುಕತೆ; ಲೋಕಸಭೆಗೆ ಮಾಜಿ ಸಿಎಂ?

ಎಫ್‌ಐಆರ್‌ನ ದಾಖಲಾತಿಯ ಸ್ಥಿತಿ, ತನಿಖೆಯ ಪ್ರಗತಿ, ಬಂಧನ, ಸಂತ್ರಸ್ತರಿಗೆ ಪರಿಹಾರ ನೀಡಿದ್ದರೆ ಆ ಬಗ್ಗೆ ವಿವರ ಹಾಗೂ ರಾಜ್ಯದಲ್ಲಿ ಅಂತಹ ಘಟನೆಗಳನ್ನು ತಡೆಗಟ್ಟಲು ತೆಗೆದುಕೊಂಡ ಅಥವಾ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವರದಿ ಒಳಗೊಂಡಿರಬೇಕು ಎಂದು ಆಯೋಗ ಸೂಚಿಸಿತ್ತು. ಆಯೋಗದ ಡಿಐಜಿ ಅವರು ತ್ವರಿತವಾಗಿ ಸತ್ಯಶೋಧನಾ ತಂಡ ರಚಿಸಿ ಘಟನಾ ಸ್ಥಳದಲ್ಲಿ ವಿಚಾರಣೆ ನಡೆಸಬೇಕು ಹಾಗೂ ಎರಡು ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದೂ ಸೂಚಿಸಲಾಗಿದೆ.

ಸಿಐಡಿಗೆ ವಹಿಸಲು ಸರ್ಕಾರ ಸಿದ್ಧತೆ

ಬಿಜೆಪಿ ಪ್ರತಿಭಟನೆ, ಸತ್ಯಶೋಧನಾ ಸಮಿತಿ ಭೇಟಿ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್ ಆಗಿದ್ದು, ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದ್ದ ಈ ಪ್ರಕರಣವನ್ನು ಸಿಐಡಿಗೆ ವಹಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಸೋಮವಾರ ಈ ಸಂಬಂಧ ಸರ್ಕಾರ ಆದೇಶ ‌ಹೊರಡಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಉನ್ನತ ಮೂಲಗಳ ಮಾಹಿತಿ ಸಿಕ್ಕಿದೆ.

ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದಂತೆ ಸಂತ್ರಸ್ತೆಗೆ ಐದು ಲಕ್ಷ ಪರಿಹಾರ ಘೋಷಿಸಿದ್ದ ಸರ್ಕಾರ, ಶನಿವಾರ ಬಿಜೆಪಿ ರಾಷ್ಟ್ರೀಯ ಸತ್ಯಶೋಧನಾ ಸಮಿತಿ ಭೇಟಿ ಬೆನ್ನಲ್ಲೇ ಸಂತ್ರಸ್ತೆಗೆ 2.3 ಎಕರೆ ಜಮೀನು ಮಂಜೂರು ಮಾಡಿತ್ತು. ಈ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ‌ಪರಿಗಣಿಸುತ್ತಿದ್ದಂತೆ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಈಗಾಗಲೇ ‌ಪ್ರಕರಣ ಸಂಬಂಧ ‌ಕಾಕತಿ ಠಾಣೆಯಲ್ಲಿ 13 ಜನರ ವಿರುದ್ಧ ದೂರು ದಾಖಲು ಮಾಡಲಾಗಿದೆ. 13 ಜನರ‌ ಪೈಕಿ ಈಗಾಗಲೇ 11 ಆರೋಪಿಗಳ ಬಂಧಿಸಿರುವ ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್ನು ಪ್ರಕರಣದಲ್ಲಿ ‌ಬೇಜವಾಬ್ದಾರಿ ತೋರಿದ ಪಿಐ ವಿಜಯಕುಮಾರ್ ಸಿನ್ನೂರ ಅವರನ್ನು ಅಮಾನತು ಮಾಡಲಾಗಿದೆ.

ಸಿಐಡಿ ತನಿಖೆ ಅಗತ್ಯವಿಲ್ಲ, ಪೊಲೀಸರೇ ಸಮರ್ಥರಿದ್ದಾರೆ ಎಂದ ಸಿಎಂ

ಗದಗ: ತನಿಖೆ ನಡೆಸಲು ಯಾರಿಗೆ ಬೇಕಾದರೂ ವಹಿಸಲು ತಯಾರಾಗಿದ್ದೇನೆ. ತನಿಖೆಯಾಗಿ, ತಪ್ಪಿತಸ್ಥರಿಗೆ‌ ಶಿಕ್ಷೆಯಾಗಬೇಕು. ಆದರೆ, ನಮ್ಮ ಪೊಲೀಸ್‌ನವರೇ ಸಮರ್ಥರಿದ್ದಾರೆ. ಸಾಕ್ಷ್ಯ ಸಂಗ್ರಹಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಶಿಕ್ಷೆ‌ ಕೊಡಿಸಲಿಕ್ಕೆ ನಮ್ಮ ಪೊಲೀಸರೇ ತಯಾರಾಗಿದ್ದಾರೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಪ್ರಕರಣದಲ್ಲಿ ಸಿಐಡಿ ತನಿಖೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಬೆಳಗಾವಿ ವಂಟಮೂರಿ ಮಹಿಳೆ ಕೇಸ್ ಸಿಐಡಿಗೆ ಹಸ್ತಾಂತರಿಸುವ ವಿಚಾರಕ್ಕೆ ಗದಗದಲ್ಲಿ ಸಿಎಂ ಮಾತನಾಡಿದ್ದಾರೆ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಪ್ರಕರಣ ಗೊತ್ತಾದ ತಕ್ಷಣವೇ ಗೃಹ ಸಚಿವರು ಮಹಿಳೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಎಲ್ಲಿ ಸರ್ಕಾರ ಫೇಲ್ ಆಗಿದೆ? ನನಗೆ ಗೊತ್ತಾಗಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | DK Shivakumar: ನಿಗಮ ಮಂಡಳಿ ಪಟ್ಟಿಗೆ ಸೈನ್‌ ಮಾಡಿಸೋಕೆ ದೆಹಲಿಗೆ ಪಯಣ: ಡಿ.ಕೆ. ಶಿವಕುಮಾರ್

ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕ 9 ವರ್ಷದ ಹುಡುಗಿ ಮೇಲೆ ರೇಪ್ ಮಾಡಿ ಜೈಲು ಸೇರಿದ್ದಾನೆ. ಇದಕ್ಕೆ ಜೆ.ಪಿ. ನಡ್ಡಾ ಮತ್ತು ಬಿಜೆಪಿ ನಾಯಕರು ಏನು ಹೇಳುತ್ತಾರೆ? ಇಂತಹ ಎಂಎಲ್ಎ ಇಟ್ಟುಕೊಂಡವರು, ಹೆಣ್ಣುಮಕ್ಕಳು ಮೇಲೆ ದೌರ್ಜನ್ಯ ಮಾಡುವವರು ಬಿಜೆಪಿಯವವರು. ಅವರಿಗೆ ನಮ್ಮ ಬಗ್ಗೆ ಮಾತನಾಡಲು ಏನು ನೈತಿಕತೆಯಿದೆ? ನ್ಯಾಷನಲ್ ಕ್ರೈಂ ಬ್ಯೂರೋ ವರದಿ ನೋಡಲಿ, ಯಾರ ಕಾಲದಲ್ಲಿ ಎಷ್ಟು ಪ್ರಕರಣ ಆಗಿವೆ ಅಂತ ಗೊತ್ತಾಗುತ್ತೆ ಯಾರ ಮೇಲೆ ದೌರ್ಜನ್ಯ ಆದರೂ ಅವರ ಮೇಲೆ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ವಂಟಮೂರಿ ಘಟನೆ ಅನಾಗರಿಕ ಘಟನೆ, ಇದು ನಾಗರಿಕ ಸಮಾಜದಲ್ಲಿ ನಡೆಯಬಾರದು ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version