ಮೈಸೂರು: ಧರ್ಮ ಧರ್ಮಗಳ ನಡುವೆ ತಿಕ್ಕಾಟ ನಡೆಯುತ್ತಿರುವ ಈ ಹೊತ್ತಿನಲ್ಲಿ ವಾರಸುದಾರರಿಲ್ಲದ ಹಿಂದು ವೃದ್ಧೆಯ ಶವಕ್ಕೆ ಮುಸ್ಲಿಮ್ ಯುವಕರು ಹೆಗಲು ಕೊಟ್ಟಿದ್ದಾರೆ. ಈ ಮೂಲಕ ಜಾತಿ-ಧರ್ಮಕ್ಕಿಂತ, ಮಾನವೀಯತೆ, ಮನುಷ್ಯತ್ವವೇ ದೊಡ್ಡ ಧರ್ಮ (Humanity) ಎಂದು ತೋರಿಸಿಕೊಟ್ಟಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನ ಮಂಡಿ ಮೊಹಲ್ಲಾದ ಸುನ್ನಿ ಚೌಕದ ಬಳಿ ಶಿವಮ್ಮ ಎಂಬುವವರು ಶನಿವಾರ ಮೃತಪಟ್ಟಿದ್ದರು. ವೃದ್ಧೆ ಶಿವಮ್ಮಳ ಮೃತದೇಹಕ್ಕೆ ವಾರಸುದಾರರು ಯಾರು ಇಲ್ಲವೆಂಬುದು ತಿಳಿಯುತ್ತಿದ್ದಂತೆ ಅದೇ ಏರಿಯಾದ ಮುಸ್ಲಿಂ ಯುವಕರು ವೃದ್ಧೆಯ ಶವಕ್ಕೆ ಹೆಗಲು ಕೊಟ್ಟಿದ್ದಾರೆ.
ರಾಜ್ಯದಲ್ಲಿ ಟಿಪ್ಪುಸುಲ್ತಾನ್ ಪರ-ವಿರೋಧ, ಹಿಂದು-ಮುಸ್ಲಿಮ್ ಗಲಾಟೆ ನಡೆಯುತ್ತಿರುವ ಇಂತಹ ಹೊತ್ತಿನಲ್ಲಿ ಮುಸ್ಲಿಮ್ ಯುವಕರು ಮಾನವೀಯತೆ ಮೆರೆದಿದ್ದಾರೆ. ಪುರೋಹಿತರ ಮಾರ್ಗದರ್ಶನದಲ್ಲಿ ಸುಮಾರು 60ಕ್ಕೂ ಹೆಚ್ಚು ಮುಸ್ಲಿಂಮರೇ ಅಂತಿಮ ವಿಧಿವಿಧಾನ ಸಲ್ಲಿಸಿದ್ದಾರೆ.
ಶವವನ್ನು ಹೊತ್ತು ಹಿಂದು ಸಂಪ್ರದಾಯದಂತೆ ಮೆರವಣಿಗೆ ಮೂಲಕ ಸಾಗಿಸಿ ಮಂಡಿ ಮೊಹಲ್ಲಾದ ಜೋಡಿ ತೆಂಗಿನಮರ ರಸ್ತೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ಶಿವಮ್ಮ ಎಲ್ಲರಿಗೂ ಪರಿಚಿತರಾಗಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಶನಿವಾರ ಮೃತಪಟ್ಟಿದ್ದರು.
ಇದನ್ನೂ ಓದಿ | Medicine price | ಡಯಾಬಿಟಿಸ್ ನಿಯಂತ್ರಣಕ್ಕೆ ಬಳಸುವ ಔಷಧಗಳ ದರ ಶೀಘ್ರ ಇಳಿಕೆ