ಮೈಸೂರು: ಹೃದಯಾಘಾತ ಈಗ ದಿನದಿಂದ ದಿನಕ್ಕೆ ತನ್ನ ಕರಾಳ ಬಾಹುಗಳನ್ನು ಚಾಚುತ್ತಿದ್ದು, ಹಲವರ ಪ್ರಾಣಗಳನ್ನು ಕಸಿಯುತ್ತಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರವಿಂದ್ ಎಂಬ ಹೆಡ್ ಕಾನ್‌ಸ್ಟೇಬಲ್ ಒಬ್ಬರ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.
48 ವರ್ಷದ ಅರವಿಂದ್ ಅವರು ಹುಣಸೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ಕೂಡಲೇ ಚಿಕಿತ್ಸೆಗಾಗಿ ಹುಣಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಅರವಿಂದ್ ಅವರು ಕೆ.ಆರ್.ನಗರ, ಸಾಲಿಗ್ರಾಮ, ಹುಣಸೂರು ಪಟ್ಟಣ ಸೇರಿದಂತೆ ಇತರೆ ಕಡೆ ಸೇವೆ ಸಲ್ಲಿಸಿದ್ದರು. ಉತ್ತಮ ಜನಾನುರಾಗಿ ಪೊಲೀಸ್ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದರು.
ಪೊಲೀಸರು ಸೇರಿದಂತೆ ಸಮಾಜದ ಹಲವು ವರ್ಗಗಳು ಕಾರ್ಯದ ಒತ್ತಡಕ್ಕೆ ಒಳಗಾಗುತ್ತಿದ್ದು, ಇದುವೇ ಸಾವಿಗೆ ಕಾರಣವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಎರಡು ದಿನಗಳಲ್ಲಿ ಇಬ್ಬರು ಪತ್ರಕರ್ತರು ಕೂಡಾ ಕೂಡಾ ಹೃದಯಾಘಾತದಿಂದ ಮೃತಪಟ್ಟಿದ್ದರು.
ಇದನ್ನೂ ಓದಿ : Heart Attack: ಹೃದಯಾಘಾತದಿಂದ ಎಎಸ್‌ಐ ಮೃತ್ಯು; 24 ಗಂಟೆ ಕೆಲಸ ಮಾಡಿದ್ದೇ ಸಾವಿಗೆ ಕಾರಣವಾಯ್ತಾ?