ಕಾರವಾರ: ಅದೊಂದು ಕಾಡ ಹಂದಿ (wild boar). ಸಾಮಾನ್ಯವಾಗಿ ಕಾಡ ಹಂದಿ ಎಂದರೆ ಜನರಿಗೆ ತೊಂದರೆ ಕೊಡುವುದೇ ಹೆಚ್ಚು. ನೆಟ್ಟು ಬೆಳೆಸಿದ ಗಡ್ಡೆ, ಗೆಣಸುಗಳನ್ನು ಹಾಳು ಮಾಡುವುದು, ಕಂಡ ಕಂಡವರ ಮೇಲೆ ದಾಳಿ ಮಾಡುವುದು ಸಾಮಾನ್ಯ. ಕೆಲವೊಂದು ಹಂದಿಗಳು ಮನುಷ್ಯರನ್ನು ಕಂಡರೆ ಓಡುತ್ತವೆ. ಆದರೆ, ಇಲ್ಲೊಂದು ಕಾಡ ಹಂದಿ ಮನುಷ್ಯರ ಜತೆ ಆತ್ಮೀಯ ಒಡನಾಟ ಹೊಂದಿ (good relationship with villagers), ಪ್ರೀತಿಯ ಬದುಕು ಕಟ್ಟಿಕೊಂಡಿತ್ತು. ಯಾರಿಗೂ ತೊಂದರೆ ಮಾಡದ ಈ ಹಂದಿಯ ಬಗ್ಗೆ ಜನರಿಗೂ ದೈವಿಕ ಭಾವನೆ ಇತ್ತು. ಆದರೆ, ಈಗ ಆ ಜನರ ಪ್ರೀತಿಯ ಹಂದಿಯನ್ನು (Hunting Pig) ಯಾರೋ ದುರುಳರು ಬಾಂಬಿಟ್ಟು ಕೊಲೆ (hunting wild boar) ಮಾಡಿದ್ದಾರೆ.
ಈ ಅಮಾನವೀಯ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ (Uttara Kannada News) ಕಾರವಾದ ಚೆಂಡಿಯಾ ಗ್ರಾಮದಲ್ಲಿ. ಶುಕ್ರವಾರ ತಡರಾತ್ರಿ ಈ ಅಮಾನುಷ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಯಾವತ್ತೂ ಮನೆ ಬಳಿ ಬಂದು ಎಲ್ಲರೊಂದಿಗೆ ಸಲುಗೆಯಿಂದ ವರ್ತಿಸುತ್ತಾ ಪ್ರೀತಿ ಬಯಸುತ್ತಿದ್ದ ಕಾಡ ಹಂದಿ ಇದಾಗಿತ್ತು. ಪ್ರತಿ ದಿನವೆಂಬಂತೆ ಊರಿಗೆ ಬರುತ್ತಿದ್ದ ಅದು ಊರವರು ನೀಡುತ್ತಿದ್ದ ಆಹಾರ ಸೇವಿಸಿ ಮತ್ತೆ ಕಾಡಿಗೆ ಮರಳುತ್ತಿತ್ತು. ಮಹಿಳೆಯರು, ಮಕ್ಕಳು ಕೂಡಾ ಅದನ್ನು ಮೈದಡವಿ ಪ್ರೀತಿಸುವಷ್ಟು ಆತ್ಮೀಯತೆ ಬೆಳೆದಿತ್ತು. ಯಾರಿಗೂ ತೊಂದರೆ ಮಾಡದೆ ಬಂದು ಹೋಗುತ್ತಿದ್ದ ಈ ಕಾಡು ಹಂದಿಯ ಬಗ್ಗೆ ಜನರಿಗೆ ಪ್ರೀತಿಯಷ್ಟೇ ಅಲ್ಲ ಒಂದು ರೀತಿಯ ದೈವಿಕ ಭಾವನೆಯೂ ಇತ್ತು.
ಇಂಥ ಕಾಡಹಂದಿ ಶನಿವಾರ ಬಾರದೆ ಇದ್ದಾಗ ಜನರಿಗೆ ಸಂಶಯ ಕಾಡಿತ್ತು. ಯಾಕೆ ಬರಲಿಲ್ಲ. ಬಳಿಕ ಹುಡುಕಿದಾಗ ಸಿಕ್ಕಿದ್ದು ಅದರ ಶವ. ಕಾಡಿನ ಬದಿಯಲ್ಲಿ ಶವವಾಗಿ ಮಲಗಿತ್ತು ಕಾಡುಹಂದಿ.
ಈ ಕಾಡು ಹಂದಿಯನ್ನು ಗಮನಿಸಿದಾಗ ಅದರ ಬಾಯಿಯ ಭಾಗ ಸಂಪೂರ್ಣ ಛಿದ್ರವಾಗಿತ್ತು. ಎದುರುಗಡೆ ಕೋಳಿ ಮಾಂಸ ಬಿದ್ದಿತ್ತು. ಯಾರೋ ಬೇಟೆಗಾರರು ಕೋಳಿ ಮಾಂಸದಲ್ಲಿ ನಾಡ ಬಾಂಬ್ ಇಟ್ಟಿದ್ದು, ಅದಕ್ಕೆ ಬಾಯಿ ಹಾಕಿದ ಹಂದಿ ಬಾಂಬ್ ಸ್ಫೋಟದಿಂದ ಮೃತಪಟ್ಟಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಯಾರೋ ಬೇಟೆಗಾರರು ಬಾಂಬ್ ಇಟ್ಟು ಹಂದಿ ಹತ್ಯೆಗೈದಿದ್ದಾಗಿ ಗ್ರಾಮಸ್ಥರು ಆರೋಪ ಮಾಡುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಾಡ ಹಂದಿಯ ಸಾವಿನಿಂದ ಊರಿನಲ್ಲಿ ಒಂದು ರೀತಿಯ ಸೂತಕದ ಕಳೆ ನೆಲೆಗೊಂಡಿದೆ. ಯಾರಿಗೂ ತೊಂದರೆ ಕೊಡದ ಹಂದಿಯನ್ನು ಕೊಂದು ಏನು ಸಿಗುತ್ತದೆ ಇವರಿಗೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಈ ಹಂದಿ ಯಾರ ತೋಟಕ್ಕಾದರೂ ನುಗ್ಗಿ ತೊಂದರೆ ಕೊಡುತ್ತಿತ್ತಾ? ಅದಕ್ಕಾಗಿ ಬಾಂಬಿಟ್ಟರಾ? ಜನರ ಒಡನಾಟವನ್ನು ಸಹಿಸದವರು ಕೊಲೆ ಮಾಡಿದರಾ ಅಥವಾ ಮಾಂಸ ಮಾಡಬಹುದು ಎಂದು ಕೊಂದರಾ? ಕೊಂದವರು ಯಾರು ಎನ್ನುವುದು ಪತ್ತೆಯಾದರೆ ಈ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಏನೇ ಇದ್ದರೂ ಜನರ ಮನಸ್ಸಿನಲ್ಲಿ ಪ್ರೀತಿಯ ಒಡನಾಡಿಯಾಗಿದ್ದ ಹಂದಿ ಮಾತ್ರ ಇನ್ನಿಲ್ಲ ಎನ್ನುವುದಷ್ಟೇ ಸತ್ಯ.
ಕಾಡಹಂದಿಯ ಒಡನಾಟದ ವಿಡಿಯೊ ಇಲ್ಲಿದೆ
ಇದನ್ನೂ ಓದಿ: Baby Elephant death : ತಾಯಿಯಿಂದ ದೂರಾಗಿ ರಸ್ತೆಯಲ್ಲಿ ಅಲೆದಾಡುತ್ತಿದ್ದ ಮರಿಯಾನೆ ಸಾವು