Site icon Vistara News

ಹಾಸನ: ಪತ್ನಿ ತುಂಡುಡುಗೆ ಧರಿಸುತ್ತಾಳೆ ಎಂದು ಕತ್ತು ಸೀಳಿ ಕೊಂದ ಪತಿ, ಪ್ರೇಮವಿವಾಹ ದುರಂತ ಅಂತ್ಯ

Couple

Husband Anger Over Wife's Obsession Of Modern Dress; Brutally Kills Her In Hassan

ಹಾಸನ: ಅರೇಂಜ್‌ ಮ್ಯಾರೇಜ್‌ ಆದವರೇ ಇರಲಿ, ಪ್ರೀತಿಸಿ ಮದುವೆಯಾದವರೇ ಇರಲಿ ಪರಸ್ಪರ ಅನುಸರಿಸಿಕೊಂಡು ಹೋಗುವುದು, ಒಬ್ಬರ ನಿರ್ಧಾರಗಳನ್ನು ಮತ್ತೊಬ್ಬರು ಗೌರವಿಸುವುದು, ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಅತ್ಯವಶ್ಯಕ. ಆದರೆ, ಪತ್ನಿಯು ಯಾವಾಗಲೂ ತುಂಡುಡುಗೆ ಧರಿಸುತ್ತಾಳೆ (Modern Dress) ಎಂದು ಹಾಸನದಲ್ಲಿ (Hassan) ವ್ಯಕ್ತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದರೊಂದಿಗೆ ಒಂದೇ ವರ್ಷದಲ್ಲಿ ಇವರಿಬ್ಬರ ಪ್ರೇಮವಿವಾಹವು (Love Marriage) ಒಂದೇ ವರ್ಷದಲ್ಲಿ ಅಂತ್ಯ ಕಂಡಿದೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ರಾಂಪುರ ಗ್ರಾಮದ ಬಳಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಂದಿದ್ದಾನೆ. ಧಾರವಾಡ ಮೂಲದ ಜ್ಯೋತಿ (22) ಹತ್ಯೆಗೀಡಾದವರು. ಪತಿ ಜೀವನ್‌ ಎಂಬಾತ ಪತ್ನಿಯ ಕತ್ತು ಸೀಳಿ ಕೊಂದು ಪರಾರಿಯಾಗಿದ್ದಾನೆ. ಪತ್ನಿಯನ್ನು ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋದ ಜೀವನ್‌, ಆಕೆಯ ಕತ್ತು ಕುಯ್ದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಜೋಡಿ

ಹಾಸನದ ಜೀವನ್‌ ಹಾಗೂ ಧಾರವಾಡದ ಜ್ಯೋತಿ ಅವರು ಪ್ರೀತಿಸಿ ಮದುವೆಯಾಗಿದ್ದರು. ಒಂದು ವರ್ಷದ ಹಿಂದಷ್ಟೇ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಜ್ಯೋತಿ ಅವರು ಮಾಡರ್ನ್‌ ಉಡುಪುಗಳನ್ನು ಧರಿಸುವುದು ಜೀವನ್‌ಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆಯೂ ಜಗಳಗಳು ನಡೆಯುತ್ತಿದ್ದವು. ಪತಿಯ ಆಕ್ಷೇಪದ ನಡುವೆಯೂ ಜ್ಯೋತಿ ಅವರು ತುಂಡುಡುಗೆ ಧರಿಸುತ್ತಿದ್ದರು. ಜೀವನ್‌ ಆಕ್ಷೇಪಕ್ಕೆ ಜ್ಯೋತಿ ಸೊಪ್ಪು ಹಾಕುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Murder Case: ಕೌಟುಂಬಿಕ ಕಲಹದಿಂದ ಪತ್ನಿಯನ್ನು ಕೊಂದ ಪತಿ

ಶನಿವಾರ ಕೂಡ (ಡಿಸೆಂಬರ್‌ 31) ಜ್ಯೋತಿ ಅವರು ತುಂಡುಡುಗೆ ಧರಿಸಿ ಹೊರಗೆ ಹೋಗುತ್ತಿದ್ದರು. ಇದರಿಂದ ಕುಪಿತಗೊಂಡ ಜೀವನ್‌, ಈ ರೀತಿ ಬಟ್ಟೆ ಧರಿಸಿ ಹೊರಗೆ ಹೋಗಬೇಡ ಎಂದು ಗದರಿದ್ದಾರೆ. ಆದರೂ, ಜ್ಯೋತಿಯು ಅದೇ ಬಟ್ಟೆಯಲ್ಲಿ ತೆರಳಲು ಮುಂದಾಗಿದ್ದಾರೆ. ಆಗ ಕೋಪದಲ್ಲಿದ್ದ ಜೀವನ್‌, “ಸರಿ ನಾನೇ ನಿನ್ನನ್ನು ಬಿಟ್ಟು ಬರುತ್ತೇನೆ” ಎಂದು ಕರೆದುಕೊಂಡು ಹೋಗಿದ್ದಾನೆ. ರಾಂಪುರ ಬಳಿಯ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಅರಸೀಕೆರೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version