ಮೈಸೂರು: ತವರು ಮನೆ ಸೇರಿದ್ದ ಹೆಂಡತಿಯನ್ನು, ಪತಿ ಅಲ್ಲಿಗೇ ಹೋಗಿ ಹತ್ಯೆ ಮಾಡಿದ್ದಾನೆ (husband kills wife). ಮಗಳನ್ನು ಬಿಡಿಸಲು ಬಂದ ಆಕೆಯ ಅಮ್ಮ ಅಂದರೆ ತನ್ನ ಅತ್ತೆಯನ್ನೂ ಕೊಂದು ಹಾಕಲು ಯತ್ನಿಸಿದ್ದಾನೆ. ಕೊಲೆಗಾರನ ಹೆಸರು ಮಾದೇಶ್ (30). ಈತನಿಂದ ಹತ್ಯೆಗೀಡಾದ ಪತ್ನಿ ಹರ್ಷಿತಾ (21). ಈಕೆ ಪತಿಗೆ ಹೆದರಿಕೊಂಡೇ ತವರುಮನೆಗೆ ಹೋಗಿ ಕೂತಿದ್ದಳು. ವಾಪಸ್ ಬರುತ್ತಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದು ಅವಳಿದ್ದಲ್ಲಿಗೇ ಹೋಗಿ, ಚಾಕುವಿನಿಂದ ಚುಚ್ಚಿ ಕೊಂದಿದ್ದಾನೆ (Murder Case).
ಮಾದೇಶ ಗುಂಡ್ಲುಪೇಟೆ ತಾಲೂಕಿನ ಬೇರಂಬಳ್ಳಿ ಗ್ರಾಮದ ನಿವಾಸಿ. ಹರ್ಷಿತಾ ಕುಂಬಾರಕೊಪ್ಪಲಿನವಳು. ಇವರಿಬ್ಬರಿಗೂ ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು. ಪ್ರಾರಂಭದಲ್ಲಿ ಅನ್ಯೋನ್ಯವಾಗಿಯೇ ಇದ್ದರು. ಆದರೆ ಬರುಬರುತ್ತ ಸದಾ ಜಗಳ ಶುರುವಾಗಿತ್ತು. ಚಿಕ್ಕಪುಟ್ಟ ಕಾರಣಕ್ಕೆ ಮಾದೇಶ್ ಕಿರಿಕ್ ಮಾಡುತ್ತಿದ್ದ. ಕೊಲೆ ಮಾಡುವುದಾಗಿ ಹೆದರಿಸುತ್ತಿದ್ದ. ಆಕೆಯೊಂದಿಗೆ ಮಲಗುವಾಗಲೂ ಮಚ್ಚು ಇಟ್ಟುಕೊಂಡೇ ಮಲಗುತ್ತಿದ್ದ.
ಇದನ್ನೂ ಓದಿ: Murder Case : ಆರು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ ತಾಯಿ; ಅವಳಿಗೇನು ಹುಚ್ಚಾ?
ಪತಿಯ ಕೋಪ, ಜತೆಗೆ ಇಟ್ಟುಕೊಳ್ಳುವ ಮಚ್ಚು-ಇವೆಲ್ಲ ನೋಡಿ ಭಯಗೊಂಡ ಹರ್ಷಿತಾ ತವರು ಮನೆಗೆ ಹೋಗಿ ಅಲ್ಲಿ ಅಮ್ಮನೊಂದಿಗೆ ವಾಸವಾಗಿದ್ದಳು. ಎರಡು ಮೂರು ಬಾರಿ ವಾಪಸ್ ಕರೆದಿದ್ದ. ಆಕೆ ಬಾರದೆ ಹೋದಾಗ ತಾನೇ ಖುದ್ದಾಗಿ ಕರೆದು ತರಲು ಅತ್ತೆ ಮನೆಗೆ ಹೋಗಿದ್ದ. ಆದರೆ ಹರ್ಷಿತಾ ಬರಲು ಒಪ್ಪಲಿಲ್ಲ. ಇದರಿಂದ ಸಿಟ್ಟಾಗಿ ಆಕೆಗೆ ಚಾಕುವಿನಿಂದ ಚುಚ್ಚಿದ್ದಾನೆ. ತಡೆಯಲು ಬಂದ ಅತ್ತೆ ಮೇಲೆಯೂ ಹಲ್ಲೆ ಮಾಡಿದ್ದಾನೆ. ಇವರ ಕೈಯಿಗೆ ಗಾಯವಾಗಿದೆ. ಮೇಟಗಳ್ಳಿ ಪೊಲೀಸರು ಕೊಲೆ ಆರೋಪಿ ಮಾದೇಶ್ನನ್ನು ಬಂಧಿಸಿದ್ದಾರೆ.