Site icon Vistara News

ಕಲ್ಯಾಣ ಕರ್ನಾಟಕದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ; ಹೈ-ಕ ವಿಮೋಚನಾ ದಿನಕ್ಕೆ ಅದ್ಧೂರಿ ಕಾರ್ಯಕ್ರಮ

cm kalyana

ಕಲಬುರಗಿ: ಹೈದ್ರಾಬಾದ್‌ ಕರ್ನಾಟಕ (ಕಲ್ಯಾಣ ಕರ್ನಾಟಕ) ವಿಮೋಚನಾ (Hyderabad-Karnataka Liberation Day) ದಿನಕ್ಕೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಜಿಲ್ಲೆಗಳಲ್ಲಿ ಸೆ.17 ನಿಜವಾದ ಸ್ವಾತಂತ್ರ್ಯ ದಿನವಾಗಿದ್ದು, ಹಬ್ಬದಂತೆ ಜನ ಆಚರಿಸಲಾಗಿದೆ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ನಿಜಾಮನ ಆಳ್ವಿಕೆಗೊಳಪಟ್ಟಿದ್ದ ಹೈದ್ರಾಬಾದ್‌ ಕರ್ನಾಟಕ ಪ್ರಾಂತ್ಯವು (ಈಗಿನ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಅವಿಭಜಿತ ಬೀದರ್‌, ಕಲಬುರಗಿ, ರಾಯಚೂರು) ಸ್ವತಂತ್ರವಾಗಿರಲಿಲ್ಲ. ಕೊನೆಗೆ ಭಾರತ ಸರ್ಕಾರ ನಿಜಾಮನನ್ನು ಸೋಲಿಸುವ ಮೂಲಕ ಈ ಭಾಗದ ಜನರಿಗೆ 1948ರ ಸೆ.17 ರಂದು ಸ್ವಾತಂತ್ರ್ಯವನ್ನು ತಂದುಕೊಡಲಾಯಿತು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಈ ದಿನವನ್ನು ಹೈದ್ರಾಬಾದ್‌ ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಎರಡೆರಡು ಸ್ವಾತಂತ್ರ್ಯೋತ್ಸವ ಸಂಭ್ರಮ
ಕಲ್ಯಾಣ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಿಗೆ 1948ರ ಸೆಪ್ಟೆಂಬರ್ 17ರಂದು ಸ್ವಾತಂತ್ರ್ಯ ಸಿಕ್ಕಿದೆ. ಅಂದರೆ, ಭಾರತಕ್ಕೆ ಸ್ವಾತಂತ್ರ್ಯದ ಲಭಿಸಿ 13 ತಿಂಗಳು 2 ದಿನಗಳ ಬಳಿಕ ಕಲ್ಯಾಣ ಕರ್ನಾಟಕಕ್ಕೆ ಸ್ವತಂತ್ರಗೊಂಡಂತಾಗಿದೆ. ಆ ಮೂಲಕ ಹೈದ್ರಾಬಾದ್ ನಿಜಾಮನ ಕಪಿಮುಷ್ಟಿಯಿಂದ ಇಲ್ಲಿನ ಜನ ಹೊರಬಂದರು. ಇದು ಇಲ್ಲಿನ ಜನರ ಸಂಭ್ರಮವನ್ನು ಇಮ್ಮಡಿಗೊಳಿಸಲು ಕಾರಣವಾಗಿದೆ. ಹೀಗಾಗಿ ದೇಶಕ್ಕೆ ಪ್ರತಿ ವರ್ಷ ಒಂದು ಸ್ವಾತಂತ್ರ್ಯೋತ್ಸವ ಇದ್ದರೆ ಈ ಭಾಗದ ಜನರಿಗೆ ಎರಡೆರಡು ಸ್ವಾತಂತ್ರ್ಯೋತ್ಸವ ಸಂಭ್ರಮ.

ಕಲಬುರಗಿಯಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಮೂರ್ತಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಾಲಾರ್ಪಣೆ ಮಾಡಿದರು.

ಸಿಎಂ ಬೊಮ್ಮಾಯಿ ಚಾಲನೆ
ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಧ್ವಜಾರೋಹಣ ಬಳಿಕ ಪೊಲೀಸ್, ಅಗ್ನಿಶಾಮಕ ಸೇರಿ ವಿವಿಧ ತುಕಡಿಗಳಿಂದ ಸಿಎಂ ಗೌರವ ವಂದನೆ ಸ್ವೀಕರಿಸಿದರು. ಸಚಿವರಾದ ಮುನಿರತ್ನ, ಮುರುಗೇಶ್ ನಿರಾಣಿ, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಬಸವರಾಜ ಮತ್ತಿಮೂಡ್, ರಾಜಕುಮಾರ್ ಪಾಟೀಲ್ ತೆಲ್ಕೂರ್ ಸೇರಿ ಇತರರು ಭಾಗಿಯಾಗಿದ್ದರು.

ಜಿಲ್ಲಾಧಿಕಾರಿ ಯಶವಂತ ಗುರುಕರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್, ಆರ್.ಸಿ. ಕೃಷ್ಟ ಬಾಜಪೇಯಿ, ಪೊಲೀಸ್ ಕಮಿಷನರ್ ವೈ.ಎಸ್. ರವಿಕುಮಾರ್ ಸೇರಿದಂತೆ ಅಧಿಕಾರಿಗಳು, ಸಾರ್ವಜನಿಕರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ | ರಾಜ್ಯದ ಬಿಲ್ಲವ, ಈಡಿಗ ಸಮುದಾಯಗಳಿಗೆ ಶೀಘ್ರವೇ ಬೊಮ್ಮಾಯಿ ಸಿಹಿ ಸುದ್ದಿ, ಏನದು?

Exit mobile version