ಬೈಂದೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಚುನಾವಣೆ (Karnataka Election 2023) ಪ್ರಚಾರದ ಮಧ್ಯೆಯೇ ಸಾಲು ಸಾಲು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಶನಿವಾರವಷ್ಟೇ ಅವರು ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಮಾಡಿದ್ದರು. ವಿಶೇಷ ಪೂಜೆಯನ್ನೂ ಮಾಡಿದ್ದರು. ಭಾನುವಾರ ಶೃಂಗೇರಿಯ ಶಾರದಾ ಪೀಠದಲ್ಲಿ ಚಂಡಿಕಾ ಯಾಗ ಮುಗಿಸಿ ಬೈಂದೂರಿಗೆ ತೆರಳಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಪರ ಪ್ರಚಾರ ಮಾಡುವ ಜತೆಗೆ ಹಿಂದುತ್ವ ಮಂತ್ರ ಪಠಿಸಿದ್ದಾರೆ.
ಬೈಂದೂರು ತಾಲೂಕು ಅರೆಶಿರೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಪಕ್ಷಕ್ಕೆ ಬಂದವರಿಗೆ ಕೋಟಿ ನಮಸ್ಕಾರಗಳು. ಕೇಸರಿ ಧ್ವಜ ಹಿಡಿದು ಬಂದವರಿಗೂ ನಮಸ್ತೆ. ಹಿಂದುತ್ವ ಯಾರ ಆಸ್ತಿಯೂ ಅಲ್ಲ. ನಾನು ಕೂಡ ಹಿಂದು, ನಾವೆಲ್ಲರೂ ಹಿಂದು. ನನ್ನ ಹೆಸರು ಕೂಡ ಶಿವಕುಮಾರ್. ಈಗಾಗಲೇ ಹಲವು ದೇವಸ್ಥಾನಗಳನ್ನು ಸುತ್ತಿ ಬಂದಿದ್ದೇನೆ. ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುತ್ತೇನೆ” ಎಂದರು.
“ಬೈಂದೂರಿನ ಶಕ್ತಿಶಾಲಿ ಯುವ ಸಮೂಹವನ್ನು ನೋಡಿ ಖುಷಿಯಾಗಿದೆ. ನಮ್ಮ ಅಭ್ಯರ್ಥಿಯು 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ಶಕ್ತಿ ಕೊಟ್ಟಿದ್ದೀರಿ. ಬಿಜೆಪಿಯು ಭ್ರಷ್ಟಾಚಾರ ಮಾಡಿದೆ, ದುರಾಡಳಿತ ನೀಡಿದೆ. ಸ್ವಂತ ಪಕ್ಷದ ನಾಯಕರಿಗೇ ಅನ್ಯಾಯ ಮಾಡಿದೆ. ಜಗದೀಶ್ ಶೆಟ್ಟರ್ ಅವರು ನಮ್ಮ ಪಕ್ಷ ಸೇರಿದ್ದಾರೆ. ಅವರಿಗೆ ಪ್ರಜ್ಞೆ, ಪ್ರಬುದ್ಧತೆ ಇದೆ. ಕ್ಷೇತ್ರದಲ್ಲಿ ಸರಳ, ಸಜ್ಜನ, ಯಾವುದೇ ಕಪ್ಪು ಚುಕ್ಕೆ ಇಲ್ಲದ ಗೋಪಾಲ ಪೂಜಾರಿ ನಮ್ಮ ಅಭ್ಯರ್ಥಿಯಾಗಿದ್ದಾರೆ. ಅವರನ್ನು ಗೆಲ್ಲಿಸಿ” ಎಂದು ಮನವಿ ಮಾಡಿದರು.
“ಬಿಜೆಪಿಯಲ್ಲಿ ದೊಡ್ಡ ಬದಲಾವಣೆಯಾಗುತ್ತಿದೆ. ಆದರೆ, ಜನರಲ್ಲಿ ಅವರು ಯಾವುದೇ ಬದಲಾವಣೆ ತಂದಿಲ್ಲ. ಡಬಲ್ ಎಂಜಿನ್ ಸರ್ಕಾರದಿಂದ ಜನರ ಆದಾಯ ಡಬಲ್ ಆಗಿಲ್ಲ. ಬೆಲೆಯೇರಿಕೆ ಜಾಸ್ತಿಯಾಗಿದೆ. ಅಚ್ಛೇ ದಿನಗಳು ಬರಲೇ ಇಲ್ಲ. ಪರಿಶುದ್ಧ ಆಡಳಿತ ಮರೀಚಿಕೆಯಾಗಿದೆ. ಪರಿಶುದ್ಧರಾದ ಬಿಜೆಪಿಯ ಮೂವರು ಕೋರ್ಟ್ ಮೂಲಕ ತಮ್ಮ ಬಗ್ಗೆ ಸುದ್ದಿ ಪ್ರಸಾರ ಮಾಡದಂತೆ ಸ್ಟೇ ತಂದಿದ್ದಾರೆ. ನೀವು ಅಷ್ಟು ಪರಿಶುದ್ಧರಾಗಿದ್ದರೆ ಸ್ಟೇ ಏಕೆ ತಂದಿದ್ದೀರಿ” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Karnataka Election 2023: ಡಿಕೆಶಿ ಭದ್ರಕೋಟೆ ಕನಕಪುರದಲ್ಲಿ ಆರ್.ಅಶೋಕ್ ಭಾಷಣಕ್ಕೆ ವಿರೋಧ