ಬೆಳಗಾವಿ: ಡೆಪ್ಯುಟಿ ಸ್ಪೀಕರ್, ಸವದತ್ತಿ ಶಾಸಕ ಆನಂದ ಮಾಮನಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಹಲವಾರು ವದಂತಿಗಳು ಹರಡುತ್ತಿದ್ದು, ಈ ಬಗ್ಗೆ ಸ್ವತಃ ಅವರೇ ವಿಡಿಯೊ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ʻʻನಂಗೇನೂ ಆಗಿಲ್ಲ. ಚಿಂತಾಜನಕ ಪರಿಸ್ಥಿತಿ ಬಂದಿಲ್ಲ. ಸ್ವಲ್ಪ ಆರೋಗ್ಯ ಏರುಪೇರು ಆಗಿದೆ ಅಷ್ಟೆʼ ಎಂದು ವಿಡಿಯೊದಲ್ಲಿ ಅವರು ಹೇಳಿದ್ದಾರೆ.
ಆನಂದ ಮಾಮನಿ ಅವರು ಹದಿನೈದು ದಿನಗಳ ಹಿಂದೆ ಚೆನ್ನೈಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಿವರ್‌ನ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ, ಬುಧವಾರ ಅವರ ಆರೋಗ್ಯದ ಬಗ್ಗೆ ಕಳವಳಕಾರಿ ಮಾಹಿತಿಗಳು ಹರಿದಾಡಲು ಆರಂಭಿಸಿದ್ದವು. ಇದಕ್ಕೆ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.
ʻʻಮನುಷ್ಯನಿಗೆ ಜೀವನದಲ್ಲಿ ಸ್ವಾಭಾವಿಕವಾಗಿ ಆರೋಗ್ಯದಲ್ಲಿ ಏರಿಳಿತ ಸಹಜ. ಕೆಲವು ವರ್ಷಗಳಿಂದ ನನಗೆ ಮಧುಮೇಹ ಕಾಯಿಲೆ ಇದೆ. ಅದರ ಜೊತೆಗೆ ಬೇರೆ ಬೇರೆ ಕಾರಣ ಹೇಳಿ ಸುಳ್ಳು ವದಂತಿ ಕೆಲ ಮಾಧ್ಯಮಗಳಲ್ಲಿ ಬರ್ತಿದೆ. ಮನೆ ದೇವರಾದ ಜಾಲಿಕಟ್ಟಿ ಬಸವಣ್ಣ, ತಂದೆ-ತಾಯಿ, ರಾಜ್ಯದ ಜನರ ಆಶೀರ್ವಾದ ನನ್ನ ಮೇಲೆ ಇದೆ. ಕಾರ್ಯಕರ್ತರು ಸುಳ್ಳು ವದಂತಿಗೆ ಕಿವಿಗೊಡಬೇಡಿʼʼ ಎಂದು ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಿಂದಲೇ ಬಿಡುಗಡೆ ಮಾಡಿರುವ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿದ್ದಾರೆ. ನಾವೆಲ್ಲರೂ ನಿಮ್ಮ ಬೆನ್ನಿಗಿದ್ದೇವೆ ಎಂದಿದ್ದಾರೆ. ಬಿಎಸ್‌ವೈ ಸೇರಿದಂತೆ ಅನೇಕ ಶಾಸಕರು ನನಗೆ ಸಲಹೆ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ನಾನು ಧೈರ್ಯವಾಗಿ ಬಂದು ತಮ್ಮೆಲ್ಲರ ಸೇವೆಗೆ ಮತ್ತೆ ಅಣಿಯಾಗುತ್ತೇನೆ. ಯಾವುದೇ ಕಾರಣಕ್ಕೂ ಧೈರ್ಯಗೆಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ʻʻನಾನು ಚೆನ್ನೈನಲ್ಲಿರುವ ಕಾರಣಕ್ಕೆ ಚಿಂತಾಜನಕ, ಶಿಫ್ಟ್ ಮಾಡ್ತಾರೆ ಅನ್ನೋದೆಲ್ಲ ಸುಳ್ಳು. ಚೆನ್ನೈ ಆಸ್ಪತ್ರೆಗೆ ದೊಡ್ಡ ವೈದ್ಯರು ಬಂದ ಬಳಿಕ ತಪಾಸಣೆ ಮಾಡಿಸಿ ಔಷಧಿ ತೆಗೆದುಕೊಂಡು ಬರುವೆ. ಆದಷ್ಟು ಬೇಗ ರಾಜಧಾನಿಗೆ ಬಂದು ತಮ್ಮ ಸಂಪರ್ಕಕ್ಕೆ ಸಿಗುತ್ತೇನೆʼʼ ಎಂದಿದ್ದಾರೆ ಮಾಮನಿ. ಮಾಮನಿ ಅವರ ತಪಾಸಣೆಗೆ ಲಂಡನ್‌ನಿಂದ ಲಿವರ್ ತಜ್ಞರೊಬ್ಬರು ಬರಲಿದ್ದಾರೆ ಎಂಬ ಮಾಹಿತಿ ಇದೆ.