ಶಿವಮೊಗ್ಗ: ಟಿಪ್ಪು ಸುಲ್ತಾನ್‌ನನ್ನು (Tipu Sultan) ಕೊಂದವರು ಯಾರು ಎಂಬ ವಿಚಾರವಾಗಿ ಈಗ ರಾಜಕೀಯ ನಾಯಕರಲ್ಲಿ ಭಾರಿ ಚರ್ಚೆ ಶುರುವಾಗಿದೆ. ಮೂರೂ ರಾಜಕೀಯ ಪಕ್ಷಗಳು ವಾದ-ಪ್ರತಿವಾದದಲ್ಲಿ ತೊಡಗಿಕೊಂಡಿದ್ದು, ಈಗ ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಬಿಜೆಪಿ ನಡುವೆ ನಾನು ಉರಿಗೌಡನೂ ಅಲ್ಲ, ನಂಜೇಗೌಡನೂ ಅಲ್ಲ. ನಾನು ಆಯನೂರು ಮಂಜುನಾಥ್ ಅಷ್ಟೇ. ನಾನು ಸಾಮಾನ್ಯ ಜನರ ಪ್ರತಿನಿಧಿಯಾಗಿ ಬೆಳೆದಿದ್ದೇನೆ. ಈ ಊರಿನ ಶ್ರಮಿಕರ ಪ್ರತಿನಿಧಿಯಾಗಿ ನಾನು ಇರಬಲ್ಲೆ ಎಂದು ಹೇಳಿದ್ದಾರೆ.
ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ಯಾರನ್ನಾದರೂ ಉರಿಗೌಡ, ನಂಜೇಗೌಡ ಎಂದು ಸೃಷ್ಟಿ ಮಾಡಬಹುದು. ಯಾರ ಬಾಯಲ್ಲಿ ನಂಜು ಬರತ್ತೋ ಅವರಿಗೆ ನಂಜೇಗೌಡ ಅನ್ನಿ. ಯಾರು ನನ್ನ ಮಾತು ಕೇಳಿ ಉರಿದು ಬೀಳ್ತಾರೋ ಅವರಿಗೆ ಉರಿಗೌಡ ಅನ್ನಿ. ನಾನಂತೂ ಆಯನೂರು ಮಂಜುನಾಥ ಅಷ್ಟೇ ಎಂದು ಹೇಳಿದರು.
ಇದನ್ನೂ ಓದಿ: Nitin Gadkari : ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಮತ್ತೆ ಜೀವ ಬೆದರಿಕೆ ಕರೆ; ಏನಾಗುತ್ತಿದೆ ಹಿಂಡಲಗಾ ಜೈಲಿನಲ್ಲಿ?
ಉರಿಗೌಡ-ನಂಜೇಗೌಡ ವಿಚಾರವಾಗಿ ಹೇಳುವುದಾದರೆ, ನಮ್ಮೂರಿನಲ್ಲಿ ಅವರಿಬ್ಬರೂ ಇಲ್ಲ. ಅವರಿಲ್ಲದ ಬಗ್ಗೆ ಭಾರಿ ದೊಡ್ಡ ಚರ್ಚೆ ನಡೆಯುತ್ತಿದೆ. ನಮ್ಮೂರಲ್ಲಿ ಅವರು ಇರೋದು ಬೇಡ. ಶಿವಮೊಗ್ಗ ಶಾಂತವಾಗಿ ಇರಲಿ. ಬೇರೆ ಕಡೆ ಇರುವ ಉರಿಗೌಡ, ನಂಜೇಗೌಡ ಬಗ್ಗೆ ನಾನು ಮಾತನಾಡುತ್ತಿಲ್ಲ. ಆ ಉರಿ, ನಂಜು ನಮ್ಮೂರಿಗೆ ಬಾರದೇ ಇರಲಿ ಎಂಬುದಷ್ಟೇ ನನ್ನ ಹಾರೈಕೆ ಎಂದು ಆಯನೂರು ಮಂಜುನಾಥ್ ಹೇಳಿದರು.
ನಾನು ಟಿಕೆಟ್‌ಗಾಗಿ ಹಠ ಮಾಡಿದ್ದೇನೆ
ನಮ್ಮ ರಾಜಕಾರಣ ಯಾತಕ್ಕಾಗಿ? ಬಡವರ, ಅಶಕ್ತರ ಸಲುವಾಗಿ ರಾಜಕಾರಣ ಇರುವುದು. ಯಾರೋ ಅನುಕೂಲಸ್ಥರ ಅನುಕೂಲಕ್ಕಾಗಿ ಇರುವುದಲ್ಲ. ಅದೃಷ್ಟವಶಾತ್ ಕಾಲೇಜಿನಿಂದ ಈವರೆಗೆ ನಾನು ಬಡವರ ಪ್ರತಿನಿಧಿಯಾಗಿ ಉಳಿದಿದ್ದೇನೆ. ನಾನು ಶಾಂತಿ ಬಯಸುವವನು. ಸ್ಪರ್ಧೆ ವಿಚಾರದಲ್ಲಿ ನಾನು ಸೀರಿಯಸ್ ಇದ್ದೇನೆ. ಖಂಡಿತವಾಗಿ ಹಠ ಮಾಡಿ ಕೇಳಿದ್ದೇನೆ. ಹಠ ಮಾಡುತ್ತಿದ್ದೇನೆ ಅಂದ ಮೇಲೆ ಬೇರೆ ಅರ್ಥೈಸಿಕೊಳ್ಳುವುದು ಬೇಡ. ಈ ಸಾರಿ ನಾನು ಸ್ಪರ್ಧೆ ಮಾಡಬೇಕೆಂಬ ಉತ್ಕಟವಾದ ಇಚ್ಛೆಯನ್ನು ಇಟ್ಟುಕೊಂಡಿದ್ದೇನೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ಸೇರುವ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಲ್ಪನೆಗಳಿಗೆ ಯಾರು ಕಡಿವಾಣ ಹಾಕಬೇಕು? ನಿಷ್ಠುರವಾದ ಮಾತು ಆಡಿದರೆ ಅಲ್ಲಿಗೆ ಹೋಗ್ತಾರೆ, ಇಲ್ಲಿಗೆ ಹೋಗ್ತಾರೆ ಎಂದರೆ ಹೇಗೆ? ಸದನದಲ್ಲೂ ನಿಷ್ಠುರವಾಗಿ ಮಾತನಾಡುತ್ತೇನೆ. ನನ್ನ ಸರ್ಕಾರ ಇದ್ದಾಗಲೇ ನ್ಯಾಯ ಒದಗಿಸುವುದಕ್ಕೋಸ್ಕರ ನೈಜ ಬಡಿದಾಟ ನಡೆಸಿದ್ದೇನೆಯೇ ಹೊರತು, ಸರ್ಕಾರದ ವಿರುದ್ಧ ಅಲ್ಲ. ನನ್ನದು ಸಮಸ್ಯೆಯ ವಿರುದ್ಧದ ಹೋರಾಟ. ಇದಕ್ಕೆ ಯಾರಾದರೂ, ಏನಾದರೂ ಅರ್ಥ ಮಾಡಿಕೊಂಡರೆ ನಾನು ಹೊಣೆಗಾರನಲ್ಲ ಎಂದು ಹೇಳಿದರು.
ಇದನ್ನೂ ಓದಿ: JDS Politics: ದೇವೇಗೌಡರ ಸಭೆ ನಂತರವೂ ಬಗೆಹರಿಯದ ಹಾಸನ ಟಿಕೆಟ್ ಸಂಘರ್ಷ: ಮತ್ತೆ ಸಭೆ ನಡೆಸಿದ ಮಾಜಿ ಪ್ರಧಾನಿ
ಬಿಜೆಪಿಯಿಂದ ಕೆಲವರು ಪಕ್ಷ ಬಿಡುತ್ತಿರುವ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಪಕ್ಷದ ಯಾವುದೇ ಹೊಣೆಗಾರಿಕೆಯನ್ನು ಹೊಂದಿಲ್ಲ, ನಾನು ಶಾಸಕ ಮಾತ್ರ. ಹಾಗಾಗಿ ಯಾರು, ಯಾಕೆ ಪಕ್ಷ ಬಿಟ್ಟರು ಎಂಬ ಬಗ್ಗೆ ಖಚಿತವಾಗಿ ನನಗೆ ಗೊತ್ತಿಲ್ಲ. ಸಂಬಂಧಪಟ್ಟವರು ಅಥವಾ ಉತ್ತರಿಸಬಲ್ಲವರನ್ನು ಕೇಳಿದರೆ ಸಮರ್ಥ ಉತ್ತರ ಸಿಗುತ್ತದೆ. ಇನ್ನೊಬ್ಬರ ನಿಲುವುಗಳು ಹೇಗೆ ಎಂದು ನಾನ್ಯಾಕೆ ಉತ್ತರಿಸಲಿ ಎಂದು ಹೇಳಿದರು.