ಬೆಂಗಳೂರು: ನಾನು ರಾಜಕೀಯಕ್ಕೆ ಬಂದಿದ್ದು ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಮಾತ್ರ. ಯಾವುದೋ ಅಧಿಕಾರ ದಾಹಕ್ಕೋ, ಗಳಿಕೆ ಮಾಡಬೇಕೋ ಎಂದು ಬಂದವನಲ್ಲ. ಈ ಬಾರಿಯೂ ನಾನು ಬೇರೆಯವರಿಗೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದೆ. ಆದರೆ, ನನ್ನನ್ನು ಮಂತ್ರಿ ಮಾಡಿದ್ದಷ್ಟೇ ಅಲ್ಲದೆ, ಮಹತ್ವವಾದ ಕಂದಾಯ ಇಲಾಖೆಯ (Revenue Department) ಜವಾಬ್ದಾರಿಯನ್ನೂ ನೀಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna Byre Gowda) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜಕೀಯಕ್ಕೆ ಬರಬೇಕು, ಮಂತ್ರಿಯಾಗಬೇಕೆಂದು ಆಸೆಪಟ್ಟವನಲ್ಲ. ರಾಜಕೀಯದಿಂದ ದೂರವೇ ಇದ್ದೆ. ಆದರೆ, ನಮ್ಮ ತಂದೆಯವರ ಪರಂಪರೆಯನ್ನು ಬಿಟ್ಟುಕೊಡಬಾರದು. ಜನರ ಪ್ರೀತಿ, ವಿಶ್ವಾಸವನ್ನು ಬಿಡಲು ಆಗುವುದಿಲ್ಲ ಎಂದು ರಾಜಕೀಯಕ್ಕೆ ಬಂದಿದ್ದೇನೆ. ನಮ್ಮ ಪಕ್ಷ ಸಹ ಅವಕಾಶವನ್ನು ಮಾಡಿಕೊಟ್ಟಿದೆ. ಮೊದಲಿಗೆ ಕೃಷಿ ಇಲಾಖೆಯ ಜವಾಬ್ದಾರಿಯನ್ನು ನನಗೆ ಕೊಡಲಾಗಿತ್ತು. ನಾನು ಬೇಡ ಎಂದರೂ ಆರ್‌ಡಿಪಿಆರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಜವಾಬ್ದಾರಿಯನ್ನು ಕೊಟ್ಟಿದ್ದರು. ಈ ಬಾರಿಯೂ ನಾನು ಬೇರೆಯವರಿಗೆ ಅವಕಾಶ ಕೊಡಿ ಎಂದು ಹೇಳಿದ್ದೆ. ಆದರೆ, ನನ್ನನ್ನು ಕರೆದು ಮಹತ್ವದ ಜವಾಬ್ದಾರಿಯನ್ನು ಕೊಟ್ಟಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಸುಧಾರಣೆ ತರುವ ಟಾಸ್ಕ್
ಸುಧಾರಣೆಯನ್ನು ತಗೆದುಕೊಂಡು ಬಾ ಎಂಬ ಒಂದೇ ಒಂದು ಸೂಚನೆ ಕೊಟ್ಟಿದ್ದಾರೆ. ನಿನ್ನಿಂದ ಯಾವುದೇ ನಿರೀಕ್ಷೆ ಇಲ್ಲ. ಪಾರ್ಟಿ ಫಂಡ್ ಸೇರಿದಂತೆ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ. ಒಳ್ಳೇ ಕೆಲಸ ಆಗಬೇಕು, ನಮ್ಮ ಸರ್ಕಾರಕ್ಕೆ ಒಳ್ಳೇ ಹೆಸರು ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ವರಿಷ್ಠರು ನನಗೆ ಈ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಹೀಗಾಗಿ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ನಂಬಿಕೆ ಇಟ್ಟಿದ್ದರಿಂದ ನಾನು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಮನವಿ ಮಾಡಿದರೂ ಕೇಳದ ಸರ್ಕಾರ
ಹಿಂದಿನ ಸರ್ಕಾರ ಭ್ರಷ್ಟಾಚಾರ ನಡೆಸಿ ದುರಾಡಳಿತ ಮಾಡಿತ್ತು. ನಮ್ಮ ಸರ್ಕಾರ ಅಧಿಕಾರ ನಡೆಸಬೇಕೆಂಬ ಆಸೆ ನನಗೂ ಇತ್ತು. ಅದೀಗ ಆಗಿದೆ. ನಾನೂ ಶಾಸಕನಾಗಿದ್ದೇನೆ. ಇನ್ನು ಶಾಸಕನಾಗಲು, ಗೆಲ್ಲಲು ಏನೇನು ಬೇಕೋ ಅದಲ್ಲೆವನ್ನೂ ನಾನು ಮಾಡಿದ್ದೇನೆ. ಗೆಲ್ಲಬೇಕೆಂಬ ಸ್ವಾರ್ಥ ಬಿಟ್ಟರೆ, ಬಂದ ಮೇಲೆ ನನಗೆ ಅಧಿಕಾರ ಬರಬೇಕು ಎಂದು ನಾನು ಆಸೆಪಟ್ಟವನಲ್ಲ. ಹಾಗಾಗಿ ನಾನು, ಬೇರೆಯವರಿಗೆ ಅವಕಾಶ ಮಾಡಿ ಕೊಡಿ ಎಂದು ವರಿಷ್ಠರಿಗೆ ಹೇಳಿದ್ದೆ. ನನಗೆ 2013ರಲ್ಲಿ, 2018ರಲ್ಲಿ ಮಂತ್ರಿ ಮಾಡಲಾಗಿತ್ತು. ಹಾಗಾಗಿ ಅವಕಾಶ ಇಲ್ಲದವರಿಗೆ ಕೊಡಿ, ನನಗೆ ಈಗಾಗಲೇ ಸಾಕಷ್ಟು ಅವಕಾಶ ಸಿಕ್ಕಿದೆ ಎಂದು ಹೇಳಿದ್ದೆ. ನನಗೆ ಸಮಾಧಾನ ಇದ್ದಿದ್ದರ ಜತೆಗೆ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಇರುವ ಬಗ್ಗೆ ಚಿಂತನೆ ನಡೆಸಿದ್ದೆ. ಈ ಬಗ್ಗೆ ಮನವಿಯನ್ನೂ ಕೊಟ್ಟಿದ್ದೆ. ಇಷ್ಟಾದರೂ ನಾನು ಸರ್ಕಾರದಲ್ಲಿ ಇರಬೇಕು ಎಂದು ಪಕ್ಷ ತೀರ್ಮಾನ ಮಾಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಇದನ್ನೂ ಓದಿ: Power point with HPK : ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ವಿಶೇಷ ಟಾಸ್ಕ್‌ಫೋರ್ಸ್ ; ಕಂದಾಯ ಸಚಿವ ಕೃಷ್ಣಬೈರೇಗೌಡ
ನನ್ನ ಮೇಲೆ ನಂಬಿಕೆ ಇಟ್ಟು ಇಷ್ಟು ದೊಡ್ಡ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಕಂದಾಯ ಇಲಾಖೆಯ ಸವಾಲು ನೋಡಿದರೆ ನನಗೆ ಒಮ್ಮೆ ಭಯವಾಗುತ್ತದೆ. ಇಲ್ಲಿ ಬದಲಾವಣೆ ತರಲು ಸಾಧ್ಯವೇ ಎಂದು ಅನ್ನಿಸುತ್ತದೆ. ಆದರೆ, ಇಲ್ಲಿ ನಾನು ನನ್ನ ಇಲಾಖೆಯ ಸದಸ್ಯರೊಂದಿಗೆ ಸೇರಿ ಧನಾತ್ಮಕ ಬದಲಾವಣೆಯನ್ನು ತಂದು ತೋರಿಸುತ್ತೇನೆ ಎನ್ನುವ ನಂಬಿಕೆ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.