Site icon Vistara News

‌ST Somashekhar : ಜೆಡಿಎಸ್‌ ಜತೆಗಿನ ಮೈತ್ರಿಗೆ ನನ್ನ ವಿರೋಧ; ಅಧಿಕೃತವಾದ ಬಳಿಕ ನನ್ನ ನಿರ್ಧಾರ: ಎಸ್‌.ಟಿ. ಸೋಮಶೇಖರ್

ST Somashekhar attack on bjp

ಬೆಂಗಳೂರು: ರಾಜ್ಯದಲ್ಲಿ ಆಪರೇಷನ್‌ ಹಸ್ತದ ಬಗ್ಗೆ ಭಾರಿ ಚರ್ಚೆಗಳು ಆಗುತ್ತಿರುವ ಬೆನ್ನಲ್ಲೇ ಮಾಜಿ ಸಚಿವ, ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ ಸೋಮಶೇಖರ್ ಅವರ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ, ಈ ಬಗ್ಗೆ ಎಸ್‌ಟಿಎಸ್‌ ಆಗಲೀ, ಕಾಂಗ್ರೆಸ್‌ ನಾಯಕರಾಗಲೀ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಇದುವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ದೃಷ್ಟಿಯಿಂದ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS Alliance) ಮಾಡಿಕೊಂಡಿದೆ. ಇದಕ್ಕೆ ಆಯಾ ಪಕ್ಷದೊಳಗೆ ಪರ – ವಿರೋಧ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಎಸ್‌.ಟಿ. ಸೋಮಶೇಖರ್‌ (‌ST Somashekhar) ಸಹ ಪ್ರತಿಕ್ರಿಯೆ ನೀಡಿದ್ದು, ತಮಗೆ ವೈಯಕ್ತಿಕವಾಗಿ ಮೈತ್ರಿ ಬಗ್ಗೆ ವಿರೋಧ ಇದೆ. ಅಧಿಕೃತವಾಗಿ ಘೋಷಣೆಯಾದ ಬಳಿಕ ನನ್ನ ಮುಂದಿನ ನಿರ್ಧಾರವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಪಕ್ಷ ಬಿಡುವ ಮುನ್ಸೂಚನೆಯನ್ನು ನೀಡಿದ್ದಾರೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.

ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಎಸ್‌.ಟಿ. ಸೋಮಶೇಖರ್‌, ವೈಯಕ್ತಿಕವಾಗಿ 20 ವರ್ಷದಿಂದ ಸೆಣಸಾಟ ಮಾಡಿಕೊಂಡು ಬಂದಿದ್ದೇವೆ. ಕಾಂಗ್ರೆಸ್-ಜೆಡಿಎಸ್ ಜತೆ ಮೈತ್ರಿಯನ್ನು ನೋಡಿದ್ದೇನೆ. ಕಾಂಗ್ರೆಸ್‌ಗೆ ಜೆಡಿಎಸ್‌ ಮೊದಲಿನಿಂದಲೂ ವಿರೋಧ ಇದೆ. ಯಾವತ್ತೂ ಕೂಡ ನಮ್ಮ ಹಾಗೂ ಅವರ ಕಾರ್ಯಕರ್ತರಿಗೆ ಹೊಂದಾಣಿಕೆ ಇಲ್ಲ. ಮಾನಸಿಕ ಕಿರುಕುಳವನ್ನು ಹತ್ತಿರದಿಂದ‌ ನೋಡಿದ್ದೇನೆ ಎಂದು ಹೇಳಿದರು.

ವೈಯಕ್ತಿಕವಾಗಿ ಮೈತ್ರಿ ಬಗ್ಗೆ ವಿರೋಧ ಇದೆ

ಮೈತ್ರಿ ವಿಚಾರದ ಬಗ್ಗೆ ನನಗೂ ವೈಯಕ್ತಿಕವಾಗಿ ಅಸಮಾಧಾನ ಇದೆ. ಅವರಿಂದ ಮಾನಸಿಕವಾಗಿ ಕಿರುಕುಳ‌ ಇದೆ. ಅಧಿಕೃತವಾಗಿ ಮೈತ್ರಿಯಾದ ಬಳಿಕ ನಿರ್ಧಾರ ಮಾಡುತ್ತೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇತ್ತು. ಅವರು ಇವರಿಗೆ ಮತ ಹಾಕಲಿಲ್ಲ, ಇವರು ಅವರಿಗೆ ಮತ ಹಾಕಲಿಲ್ಲ. ಯಾರೂ ಕೂಡ ಈ ಬಗ್ಗೆ ವೈಯಕ್ತಿಕವಾಗಿ ಮಾತನಾಡುತ್ತಿಲ್ಲ. ಆದರೆ, ಎಲ್ಲರಿಗೂ ಅಸಮಾಧಾನ ಅಂತೂ ಇದೆ. ನಮ್ಮ ಪಕ್ಷದಲ್ಲಿ ಯಾರನ್ನೂ ಕರೆದು ಚರ್ಚೆ ಮಾಡಿಲ್ಲ ಎಂದು ಎಸ್‌.ಟಿ. ಸೋಮಶೇಖರ್‌ ಹೇಳಿದರು.

ಬೆಂಬಲಿಗರು ಬಿಜೆಪಿ ಬಿಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌.ಟಿ. ಸೋಮಶೇಖರ್‌, ನನ್ನ ಕ್ಷೇತ್ರ ಅಷ್ಟೇ ಅಲ್ಲ, ಅಶೋಕ್, ಮುನಿರತ್ನ, ದಾಸರಹಳ್ಳಿ ಕ್ಷೇತ್ರಗಳಲ್ಲಿಯೂ ಪಕ್ಷವನ್ನು ತೊರೆದಿದ್ದಾರೆ. ನಾನು 100% ಬಿಜೆಪಿಯಲ್ಲಿ ಇದ್ದೇನೆ, ಎಲ್ಲಿಯೂ ಹೋಗಿಲ್ಲ. ಆದರೆ, ಮೈತ್ರಿ ಬಳಿಕ ಯೋಚನೆ ಮಾಡಬೇಕಿದೆ. 6 ಬಾರಿ ಜೆಡಿಎಸ್‌ ಜತೆ ಹೊಡೆದಾಡಿಕೊಂಡು ಬಂದಿದ್ದೇವೆ. ಜೆಡಿಎಸ್ ಜತೆ ಮೈತ್ರಿ ವಿಚಾರ ಯಾರಿಗೂ ಆಗಲ್ಲ ಅಂತ ಕಾಂಗ್ರೆಸ್ ಸೇರುತ್ತಿದ್ದಾರೆ. ಯಾರೋ ನಾಲ್ಕು ಜನ ಕುಳಿತು ಮಾತಾಡಿದರೆ ಆಗಲ್ಲ ಅಂತ ಜೆಡಿಎಸ್ ರಾಜ್ಯಾಧ್ಯಕ್ಷರೂ ಹೇಳಿದ್ದಾರೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ನನ್ನ ಬಳಿ ಕೆಲವರು ಹೇಳಿದ್ದಾರೆ ಎಂದು ತಿಳಿಸಿದರು.

ಉಸಿರು ಕಟ್ಟುವ ವಾತಾವರಣ

ಕಾಂಗ್ರೆಸ್‌ಗೆ ಯಾರು ಹೋಗುತ್ತಾರೆ ಎಂಬ ವಿಚಾರದ ಬಗ್ಗೆ ಭಯಪಡುವ ಅವಶ್ಯಕತೆ ಏನಿಲ್ಲ. ಹೋಗಿರುವವರು ಕಾಂಗ್ರೆಸ್ ಟಿಕೆಟ್‌ಗೆ, ಮತ್ತೊಂದಕ್ಕೆ ಅನುಕೂಲ ಆಗಲಿ ಅಂತ ಹೋಗಿದ್ದಾರೆ. ನಮಗೆ ಉಸಿರು ಕಟ್ಟುವ ವಾತಾವರಣ ನಿರ್ಮಾಣ ಆಗಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಇದೇ ರೀತಿ ಆಗಿತ್ತು. ಹೊರಗಡೆ ಬಂದ ಉದ್ದೇಶ ಏನು? ಎಂಪಿ ಚುನಾವಣೆಗೆ ಮೈತ್ರಿ ಆದ ಉದ್ದೇಶ ಏನು? ರಾಹುಲ್ ಗಾಂಧಿ ಮತ್ತು ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಚುನಾವಣೆ ಮಾಡಿದರು. ನಾವು ನಾವು ಒಂದಾಗಬಹುದು. ಆದರೆ, ಕೆಳಮಟ್ಟದ ಕಾರ್ಯಕರ್ತರಿಗೆ ಹಿಂಸೆಯಾಗಿದೆ. ನಾವು ಲೀಡರ್‌ಗಳನ್ನು, ಕಾರ್ಯಕರ್ತರನ್ನು ಎದುರಿಗೆ ಹಾಕಿಕೊಂಡು, ಅವರ ವಿರೋಧ ಕಟ್ಟಿಕೊಂಡು ರಾಜಕಾರಣದಲ್ಲಿ ಎಂಎಲ್‌ಎ ಆಗಲು ಆಗಲ್ಲ. ಅವರಿಗೆ ಏನು ಗೌರವ ಕೊಡಬೇಕೋ ಅದನ್ನು ಕೊಡುತ್ತಿದ್ದೇವೆ ಎಂದು ಎಸ್‌.ಟಿ. ಸೋಮಶೇಖರ್‌ ಹೇಳಿದರು.

ಯಡಿಯೂರಪ್ಪ ಅವರೇ ನಮಗೆ ಹೈಕಮಾಂಡ್‌

ಮೈತ್ರಿ ಬಗ್ಗೆ ಹೈಕಮಾಂಡ್ ಹೇಳಿದರೆ ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಸ್‌.ಟಿ. ಸೋಮಶೇಖರ್‌, ಹೈಕಮಾಂಡ್ ಅಂದರೆ ನಮಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ.‌ ನಾನು ಹೇಳುವವರೆಗೂ ಏನೂ ಮಾಡಬೇಡಿ ಅಂತ ಅವರು ಹೇಳಿದ್ದಾರೆ. ಅದಕ್ಕೆ ನಾನೆಲ್ಲೂ ಒಂದು ತಿಂಗಳಿಂದ ಏನೂ ಮಾತನಾಡಿಲ್ಲ. ಅವರು ಏನೋ ಹೇಳಿದ್ದಾರೆ, ಹಾಗಾಗಿ ಅಲ್ಲಿಯವರೆಗೂ ಮಾತನಾಡಲ್ಲ. ಯಾವುದನ್ನೂ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: Tax Collection : ಕೇಂದ್ರ – ರಾಜ್ಯ ಸರ್ಕಾರಿ ಸಂಸ್ಥೆಗಳ ಮೇಲೆ ಕಣ್ಣಿಟ್ಟ ರಾಜ್ಯ ಸರ್ಕಾರ; ಬಾಕಿ ತೆರಿಗೆ ವಸೂಲಿಗೆ ಕ್ರಮ

ನೈಸ್‌ ಭೂಮಿಯನ್ನು ವಾಪಸ್‌ ಪಡೆಯಬೇಕು

ನೈಸ್ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌.ಟಿ. ಸೋಮಶೇಖರ್‌, ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಸಮಿತಿ ಮಾಡಲಾಗಿತ್ತು. ನಾನು ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿದ್ದೆ. ಸದನ ಸಮಿತಿ ಇದ್ದಾಗ ಟಿ.ಬಿ ಜಯಚಂದ್ರ ಅಧ್ಯಕ್ಷ ಇದ್ದರು. ನೈಸ್ ಸಮಿತಿಯ ಸಂಪೂರ್ಣ ಅಧ್ಯಯನ ಮಾಡಿ ವರದಿ ಕೊಡಲಾಗಿತ್ತು. ನಾನು ಬಿಜೆಪಿಯಲ್ಲಿ ಸಚಿವ ಆಗಿದ್ದಾಗ ನಾನು ಸಬ್ ಕಮಿಟಿಯಲ್ಲಿದ್ದೆ. ನಾನ್ ಅಗ್ರಿಮೆಂಟ್ ಆಗಿರೋದನ್ನು ಭೂಮಿ ವಾಪಸ್ ಪಡೆಯಬೇಕು ಅಂತ ಹೇಳಿದ್ದೆ. ನಮ್ಮ ಕ್ಷೇತ್ರದಲ್ಲೂ 1,600 ಎಕರೆಯಷ್ಟು ರೈತರು ಜಮೀನು ಕಳೆದುಕೊಂಡಿದ್ದಾರೆ. ಹೆಚ್ಚು ಕಡಿಮೆ 30 ವರ್ಷ ಆಗಿದೆ. ನೈಸ್‌ನವರು ತೆಗೆದುಕೊಳ್ಳುತ್ತಿಲ್ಲ, ಅದರ ದುಡ್ಡು ಕೊಡುತ್ತಿಲ್ಲ. ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಎಲ್ಲವನ್ನೂ ವಾಪಸ್ ತೆಗೆದುಕೊಳ್ಳಬೇಕು ಅಂತ ಕ್ಯಾಬಿನೆಟ್‌ನಲ್ಲೂ ಇತ್ತು. ಸಬ್ ಕಮಿಟಿಯಲ್ಲೂ ಇತ್ತು. ಅದಕ್ಕೆ ಈಗ ಚಾಲನೆ ಕೊಟ್ಟಿದ್ದೇವೆ ಎಂದು ಹೇಳಿದರು.

Exit mobile version