ಬೆಂಗಳೂರು, ಕರ್ನಾಟಕ: ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಟ ಕಿಚ್ಚ ಸುದೀಪ್ (kichcha sudeepa) ಅವರು ಬೆಂಬಲ ನೀಡಿದ್ದಕ್ಕೆ ನಟ ಪ್ರಕಾಶ್ ರಾಜ್ (Prakash Raj) ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮಗೆ ದಿಗ್ಭ್ರಮೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ನಟ ಸುದೀಪ್ ಅವರು ಬುಧವಾರ ಸಿಎಂ ಬೊಮ್ಮಾಯಿ ಅವರಿಗೆ ಬೆಂಬಲ ನೀಡಿ, ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ಕರ್ನಾಟಕದಲ್ಲಿ ಮೇ 10ರ ಎಲೆಕ್ಷನ್ ನಡೆಯಲಿದೆ.
ಬಿಜೆಪಿಗೆ ಕಿಚ್ಚ ಸುದೀಪ್ ಬೆಂಬಲ ನೀಡಿರುವುದು ನನಗೆ ದಿಗ್ಭ್ರಮೆ ತಂದಿದೆ ಮತ್ತು ನೋವಾಗಿದೆ ಎಂಬ ಪ್ರಕಾಶ್ ರೈ ಹೇಳಿಕೆಯನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ. ಪ್ರಕಾಶ್ ರೈ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಬೆಂಗಳೂರಿಂದ ಸ್ಪರ್ಧಿಸಿ, ಸೋತಿದ್ದರು.
ಬಿಜೆಪಿಗೆ ಸುದೀಪ್ ಮಾರಿಕೊಳ್ಳಲ್ಲ ಎಂದಿದ್ದ ಪ್ರಕಾಶ್
ಬುಧವಾರ ಕಿಚ್ಚ ಸುದೀಪ್ (Kichcha Sudeep) ಅವರು ಬಿಜೆಪಿ ಪರ ಪ್ರಚಾರ ಮಾಡುತ್ತಾರೆ, ಬಿಜೆಪಿ ಸೇರುತ್ತಾರೆ ಎಂಬಿತ್ಯಾದಿ ಸುದ್ದಿ ಹರಿದಾಡುತ್ತಿದ್ದವು. ಏಪ್ರಿಲ್ 5ರಂದು ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಸುದ್ದಿಗೋಷ್ಠಿ ನಡೆಸಲಿದ್ದು ಸುದೀಪ್ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದು, ಟ್ವೀಟ್‌ನಲ್ಲಿ ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಪ್ರಕಾಶ್ ರಾಜ್ ಟ್ವೀಟ್ ಮಾಡಿ ʻʻಇದು ಕರ್ನಾಟಕದಲ್ಲಿ ಹತಾಶ, ಸೋತ ಬಿಜೆಪಿಯಿಂದ ಹರಡಿದ ಸುಳ್ಳು ಸುದ್ದಿ ಎಂದು ನಾನು ಬಲವಾಗಿ ನಂಬುತ್ತೇನೆ. ಭ್ರಷ್ಟ BJP ಹರಡುತ್ತಿರುವ ಸುಳ್ಳು ಸುದ್ದಿ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲʼʼ ಎಂದು ಬರೆದುಕೊಂಡಿದ್ದರು.
ಪ್ರಕಾಶ್ ರೈ ಜತೆ ಸಿನಿಮಾ ಮಾಡುವೆ ಎಂದ ಸುದೀಪ್
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರು ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದರು. ಈ ವೇಳೆ, ಸುದ್ದಿಗಾರರು ಪ್ರಕಾಶ್ ರೈ ಅವರ ಟ್ವೀಟ್ ಬಗ್ಗೆ ಗಮನ ಸೆಳೆದರು. ಆಗ ಸುದೀಪ್, ರನ್ನ ಸಿನಿಮಾದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ಮುಂದೆಯೂ ಅವರಿಗೆ ಕೆಲಸ ಮಾಡುತ್ತೇನೆ. ಅವರೊಬ್ಬ ಉತ್ತಮ ಕಲಾವಿದ ಎಂದಷ್ಟೇ ಹೇಳಿದರು.
ಬೊಮ್ಮಾಯಿ ಹೇಳುವ ಕ್ಷೇತ್ರಗಳಲ್ಲಿ ಪ್ರಚಾರ ಎಂದ ಸುದೀಪ್
ಮಾನ್ಯ ಮುಖ್ಯಮಂತ್ರಿಗಳನ್ನು ನಾನು ಮಾಮ ಎಂದೇ ಕರೆಯುತ್ತೇನೆ. ನನ್ನ ಚಿತ್ರರಂಗದ ಕಷ್ಟದ ದಿನಗಳಲ್ಲಿ ಕೆಲವರು ಮಾತ್ರ ನನ್ನೊಟ್ಟಿಗೆ ನಿಂತಿದ್ದರು, ಅವರಲ್ಲಿ ಬಸವರಾಜ ಬೊಮ್ಮಾಯಿ ಮಾಮ ಅವರೂ ಒಬ್ಬರು. ನಾವು ಬೆಳೆದು ಬಂದ ಹಾದಿಯಲ್ಲಿ ಪ್ರತಿ ವಿಷಯದಲ್ಲೂ ಗಾಡ್ ಫಾದರ್ ಯಾರೂ ಇರಲಿಲ್ಲ. ಮಾಮ ಆಗ ತಾನೆ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದರು. ಅವರು ಇಂದು ಸಿಎಂ ಆಗಿದ್ದಾರೆ. ಆ ವ್ಯಕ್ತಿಗೆ ಬೆಂಬಲ ನೀಡಲು ಇಷ್ಟಪಡುತ್ತೇನೆ ಎಂದರು.
ಬಿಜೆಪಿಯ ಎಲ್ಲ ಸಿದ್ಧಾಂತಗಳಿಗೆ ಒಪ್ಪುತ್ತೀರ ಎಂಬ ಪ್ರಶ್ನೆಗೆ, ನನ್ನ ತಂದೆಯ ಸ್ಥಾನದಲ್ಲಿ ಅವರು ಇದ್ದಾರೆ. ನನ್ನ ಅವಶ್ಯಕತೆ ಎಲ್ಲಿ ಇದೆ ಎಂದು ಅವರಿಗೆ ಎನ್ನಿಸುತ್ತದೆಯೋ ಅಲ್ಲಿರುತ್ತೇನೆ. ಯಾವುದೇ ಪಕ್ಷದ ಪರವಾಗಿ ನಿಲ್ಲುತ್ತೇನೆ ಎನ್ನುವುದಾದರೆ ನಾನು ಅದನ್ನೇ ಹೇಳುತ್ತಿದ್ದೆ. ಅದನ್ನು ಹೇಳಿಲ್ಲ ಎಂದರೆ ಹಾಗೆ ಇಲ್ಲ ಎಂದರ್ಥ ಎಂದು ತಿಳಿಸಿದರು.
ಇದನ್ನೂ ಓದಿ: Kiccha Sudeep: ನಟ ಕಿಚ್ಚ ಸುದೀಪ್ ಚಲನಚಿತ್ರ, ಟಿವಿ ಶೋ, ಜಾಹೀರಾತು ತಡೆ ಹಿಡಿಯಿರಿ; ಚುನಾವಣಾ ಆಯೋಗಕ್ಕೆ ಮನವಿ
ಪಕ್ಷದ ಪರವಾಗಿ ಪ್ರಚಾರ ಮಾಡಬೇಕು ಎಂದು ಬೊಮ್ಮಾಯಿ ಅವರು ಹೇಳಿದರೆ ಅದನ್ನು ಮಾಡುತ್ತೇನೆ ಎಂದರು. ಬೇರೆ ಪಕ್ಷದಿಂದ ಆಹ್ವಾನಿಸಿದರೂ ಪ್ರಚಾರ ಮಾಡುತ್ತೀರ ಎಂಬ ಪ್ರಶ್ನೆಗೆ, ನನ್ನ ಜೀವನದಲ್ಲಿ ಬೆಂಬಲವಾಗಿ ನಿಂತವರಾರಾದರೂ ಇದ್ದರೆ ಅವರ ಜತೆಗೆ ನಿಲ್ಲುತ್ತೇನೆ. ನಾನು ಈ ಪಕ್ಷ, ಆ ಪಕ್ಷ ಎಂಬುದಕ್ಕೆ ಬರಲಿಲ್ಲ. ಬೊಮ್ಮಾಯಿ ಅವರು ಈ ಪಕ್ಷ ಅಲ್ಲದೆ ಬೇರೆ ಯಾವ ಪಕ್ಷದಲ್ಲಿ ಇದ್ದಿದ್ದರೂ ನಿಲ್ಲುತ್ತಿದ್ದೆ ಎಂದರು. ಬೊಮ್ಮಾಯಿ ಅವರು ಹಾಗೂ ಅವರು ಹೇಳುವವರನ್ನು ಬೆಂಬಲಿಸುತ್ತೇನೆ. ನಾನು ಎಲ್ಲರಿಗೂ ಪ್ರಚಾರ ಮಾಡಲು ಆಗುವುದಿಲ್ಲ. ಬೊಮ್ಮಾಯಿ ಅವರು ತಿಳಿಸುವ ಅಗತ್ಯಕ್ಕೆ ಅನುಗುಣವಾಗಿ ಪ್ರಚಾರ ಮಾಡುತ್ತೇನೆ ಎಂದರು.