Site icon Vistara News

ಸಿದ್ದು ಪಶ್ಚಾತ್ತಾಪಕ್ಕೆ ಡಿಕೆಶಿ ಪ್ರತಿಕ್ರಿಯೆ; ತಪ್ಪು ಒಪ್ಪಿಕೊಂಡ್ರೆ ತಪ್ಪಲ್ಲ, ನಾನು ಆವತ್ತೇ ಬಹಿರಂಗವಾಗಿ ಕ್ಷಮೆ ಕೇಳಿದ್ದೆ

DK Shivakumar

ಬೆಂಗಳೂರು: ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಮತ್ತು ರಂಭಾಪುರಿ ಶ್ರೀಗಳ ನಡುವೆ ಏನೇನು ಮಾತುಕತೆ ಆಗಿದೆ ಎಂದು ನನಗೆ ಗೊತ್ತಿಲ್ಲ. ಲಿಂಗಾಯತ ಧರ್ಮದ ವಿವಾದಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರು ಪಶ್ಚಾತ್ತಾಪ ವ್ಯಕ್ತಪಡಿಸಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ನಾನು ಆಗಲೇ ಬಹಿರಂಗವಾಗಿ ಕ್ಷಮೆ ಯಾಚನೆ ಮಾಡಿದ್ದೆ: ಹೀಗೆಂದು ಸ್ಪಷ್ಟವಾಗಿ ಹೇಳಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಡೆದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಜಯಂತಿ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದ ವೇಳೆ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್, ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾದ ಬಿ.ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ‌ರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್ ಭಾಗಿಯಾಗಿದ್ದರು.

ʻʻಮನುಷ್ಯ ತಪ್ಪು ಮಾಡಿದ್ರೆ ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ. ನಾವೇನೂ ದೇವರು ಅಲ್ಲ. ದೇವರು ಕೂಡ ತಪ್ಪು ಮಾಡಿದಾಗ ಒಪ್ಪಿಕೊಂಡಿದ್ದಾರೆʼʼ ಎಂದು ಸಿದ್ದರಾಮಯ್ಯ ಅವರ ಪಶ್ಚಾತ್ತಾಪ ವಿಚಾರಕ್ಕೆ ಪ್ರತಿಕ್ರಿಯಿಸಿದರು. ʻʻಲಿಂಗಾಯತ ಧರ್ಮ ವಿವಾದ ನಡೆದಾಗ ನಾನು ಕ್ಯಾಬಿನೆಟ್‌ನಲ್ಲಿದ್ದೆ. ಆವತ್ತೇ ನಾನು ಸಾಕಷ್ಟು ವಿರೋಧ ಮಾಡಿದ್ದೆ. ನಿನ್ನೆ ಸಿದ್ದರಾಮಯ್ಯ ಅವರು ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಎಲ್ಲ ಧರ್ಮದವರ ಆಶೀರ್ವಾದವೂ ನಮಗೆ ಬೇಕು. ನಿನ್ನೆ ಸ್ವಾಮಿಜಿ ಜೊತೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಅವರಿಬ್ಬರ ಸಂಭಾಷಣೆ ನನಗೆ ಗೊತ್ತಿಲ್ಲʼʼ ಎಂದರು.

ಆವತ್ತು ನಾನು ಬಹಿರಂಗವಾಗಿಯೇ ಕ್ಷಮೆ ಯಾಚನೆ ಮಾಡಿದ್ದೆ. ಧರ್ಮದ ವಿಚಾರದಲ್ಲಿ ಕೈ ಹಾಕಬಾರದು ಎಂದು ಹೇಳಿದ್ದೆ ಎಂದು ಡಿ.ಕೆ. ಶಿವಕುಮಾರ್‌ ನೆನಪು ಮಾಡಿಕೊಂಡರು.

ಕಾಂಗ್ರೆಸ್ ಹಿಂದುತ್ವ ಒಪ್ಪಿಕೊಳ್ಳಲಿ ಅಂದ್ರೇನು?
ಕಾಂಗ್ರೆಸ್‌ ಹಿಂದುತ್ವವನ್ನ ು ಒಪ್ಪಿಕೊಳ್ಳಬೇಕು ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ʻಒಪ್ಪಿಕೊಳ್ಳುವುದು ಅಂದ್ರೇನು? ನಾನೇನು ಹಿಂದೂ ಅಲ್ವೇನ್ರಿ? ಗಾಂಧಿ ಪರಿವಾರ ಮೂಲತಃ ಕಾಶ್ಮೀರದ ಪಂಡಿತರು. ೨೫ ವರ್ಷದ ಹಿಂದೆ ಯುಗಾದಿ ಹಬ್ಬದ ದಿನ ಸೋನಿಯಾ ಗಾಂಧಿ ಅವರ ಮನೆಗೆ ಹೋಗಿದ್ದೆವು. ಆವತ್ತು ಹಬ್ಬದ ಆಚರಣೆ ಇತ್ತು. ಸೋನಿಯಾ ಗಾಂಧಿ ಅವರೇ ಯುಗಾದಿ ಹಬ್ಬ ಮಾಡ್ತಾ ಇದ್ರು. ನನಗೆ ಶಿವನ ಮಗ ಕುಮಾರ ಅಂತ ಹೆಸರು ಇಟ್ಟಿದ್ದಾರೆ. ಸಿದ್ದರಾಮಯ್ಯ ಅಂತ ಅವರಿಗೆ ಹೆಸರು ಇಟ್ಟಿದ್ದಾರೆ. ನಾವೇನು ಕಲ್ಲು ಮಣ್ಣು ಅಂತ ಹೆಸರು ಇಟ್ಟುಕೊಂಡಿದ್ದೇವಾ? ʼ ಎಮದು ಆಕ್ರೋಶದಿಂದ ಪ್ರತಿಕ್ರಿಯಿಸಿದರು.

ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದ ಸಿದ್ದು
ಈ ನಡುವೆ, ರಂಭಾಪುರಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ತಾನು ಲಿಂಗಾಯತ ಧರ್ಮದ ವಿವಾದಕ್ಕೆ ಸಂಬಂಧಿಸಿ ಕ್ಷಮೆ ಕೇಳಿಲ್ಲ. ಸ್ವಾಮೀಜಿ ಅವರಿಗೆ ವಿವರಣೆ ನೀಡಿದ್ದೇನೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಶ್ಚಾತ್ತಾಪ ಆಗಿದೆ ಎಂದು ಹೇಳಿಲ್ಲ, ಧರ್ಮ ಒಡೆಯುವ ಉದ್ದೇಶ ಇಲ್ಲ ಎಂದಿದ್ದೇನೆ ಅಷ್ಟೆ: ಸಿದ್ದರಾಮಯ್ಯ ಸ್ಪಷ್ಟನೆ

Exit mobile version