ಬೆಂಗಳೂರು: ನನಗೆ ಸಿಎಂ ಮಾಡೋದೂ ಗೊತ್ತು, ಇಳಿಸೋದೂ ಗೊತ್ತು ಎಂಬ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ (BK Hariprasad) ಅವರ ಮಾತು ಕಾಂಗ್ರೆಸ್‌ನಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದೆ. ಅವರ ಹೇಳಿಕೆ ವಿರುದ್ಧ ಸಾಕಷ್ಟು ಪ್ರತಿರೋಧಗಳು ಪಕ್ಷದೊಳಗೆ ವ್ಯಕ್ತವಾಗಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧದ ಈ ಹೇಳಿಕೆಗೆ ಅವರ ಆಪ್ತರು ಕಿಡಿಕಾರಿದ್ದರು. ಅಲ್ಲದೆ, ಇತರ ಸಚಿವರೂ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಈ ಬಗ್ಗೆ ಪುನಃ ಮಾತನಾಡಿರುವ ಬಿ.ಕೆ. ಹರಿಪ್ರಸಾದ್ ಅವರು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. “ನನ್ನ ಧ್ವನಿಯನ್ನು ಎಂದೂ ಅಡಗಿಸಲು ಸಾಧ್ಯವಿಲ್ಲ” ಎಂದು ಗುಡುಗಿದ್ದಾರೆ.
ಇತ್ತ ಬಿ.ಕೆ. ಹರಿಪ್ರಸಾದ್ ಹೇಳಿಕೆಯನ್ನು ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡಿದ್ದು, ರಾಜ್ಯ ಹಾಗೂ ಕೇಂದ್ರ ನಾಯಕರು ಇದರ ಬಗ್ಗೆ (BJP Counter Statement) ಮಾತನಾಡಿದ್ದಾರೆ. ಕಾಂಗ್ರೆಸ್ ಪಾಳೆಯದಲ್ಲೂ (Congress Party) ವಿರೋಧ ಹಾಗೂ ತಟಸ್ಥ ನೀತಿಗಳು ವ್ಯಕ್ತವಾಗಿವೆ. ಕೆಲವರು ನೇರವಾಗಿಯೇ ಟೀಕಿಸಿದ್ದು, ಹರಿಪ್ರಸಾದ್ ಈ ರೀತಿ ಹೇಳಿಕೆ ನೀಡಬಾರದು. ಇದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂಬ ಹೇಳಿಕೆಯನ್ನು ನೀಡಿದ್ದರು. ಹೀಗೆ ತಮ್ಮ ಮೇಲೆ ಪಕ್ಷದೊಳಗೆ ವಾಗ್ದಾಳಿ ಪ್ರಾರಂಭವಾಗಿದ್ದರಿಂದ ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹರಿಪ್ರಸಾದ್, ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ. ತಮಗೆ ಯಾವುದೇ ಅಧಿಕಾರದ ದಾಹ ಇಲ್ಲ ಎಂದು ಹೇಳುತ್ತಲೇ, ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತಿದ್ದಾರೆ.
ಇದನ್ನೂ ಓದಿ: HD Kumaraswamy : ಸರ್ಕಾರ ಕೆಡವಲು ಸಿಂಗಾಪುರಕ್ಕೆ ಹೋದರೇ ಎಚ್‌ಡಿಕೆ? ನನಗೆ ಗೊತ್ತಿದೆ ಅಂದ್ರು ಡಿಕೆಶಿ!
ಬಿ.ಕೆ. ಹರಿಪ್ರಸಾದ್ ಟ್ವೀಟ್‌ನಲ್ಲೇನಿದೆ?
ವಿಧಾನ ಪರಿಷತ್ ಹಿರಿಯ ಸದಸ್ಯ ಬಿ.ಕೆ. ಹರಿಪ್ರಸಾದ್ ಈ ಸಂಬಂಧ ಟ್ವೀಟ್ (BK Hariprasad Tweet) ಮಾಡಿದ್ದು, ನಾನು ವೈಯಕ್ತಿಕ ಹಿತಾಸಕ್ತಿಗಾಗಿ ಎಂದೂ ರಾಜಕೀಯ ಮಾಡಿದವನಲ್ಲ. ಸಾಮಾಜಿಕ ಬದಲಾವಣೆಗಾಗಿ ರಾಜಕೀಯಕ್ಕೆ ಬಂದವನು. ಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಯಾವ ಅಧಿಕಾರದ ಮೇಲೂ ಲಾಬಿ ನಡೆಸಿದ ಇತಿಹಾಸವಿಲ್ಲ. ಅದರ ಮೇಲೆ ಆಸೆಯೂ ಇಲ್ಲ. ಸಾಮಾಜಿಕ ನ್ಯಾಯದ ಪರ ನನ್ನ ಧ್ವನಿಯನ್ನು ಎಂದೂ ಅಡಗಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಇದನ್ನೂ ಓದಿ: Lok Sabha Election 2024 : ಬೆಂಗಳೂರು ದಕ್ಷಿಣದಲ್ಲಿ ‘ತೇಜಸ್ವಿ’ನಿ ಕಂಪನ!
ಈ ಮೂಲಕ ತಮ್ಮ ಬಾಯನ್ನು ಯಾರಿಂದಲೂ ಕಟ್ಟಿ ಹಾಕಲು ಸಾಧ್ಯವಾಗದು ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ. ವೈಯಕ್ತಿಕವಾಗಿ ರಾಜಕೀಯ ಮಾಡಿದವನಲ್ಲ. ಆದರೆ, ಸಾಮಾಜಿಕ ನ್ಯಾಯದ ಪರ ತಾವು ಧ್ವನಿ ಎತ್ತಲಿದ್ದು, ಅದನ್ನು ಅಡಗಿಸಲು ಯಾರಿಂದಲೂ ಸಾಧ್ಯ ಇಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಗತ್ಯ ಬಿದ್ದರೆ ಮತ್ತೆ ಮಾತನಾಡುವೆ ಎಂಬ ಸಂದೇಶವನ್ನು ಈ ಟ್ವೀಟ್ ಮೂಲಕ ನೀಡಿದ್ದಾರೆನ್ನಲಾಗಿದೆ.