Site icon Vistara News

HD Deve Gowda: ಕೇರಳದ ಸಿಪಿಎಂ‌, ಬಿಜೆಪಿ-ಜೆಡಿಎಸ್ ಮೈತ್ರಿ ಬೆಂಬಲಿಸುತ್ತದೆ ಎಂದು ಹೇಳಿಲ್ಲ: ಎಚ್‌.ಡಿ.ದೇವೇಗೌಡ ಸ್ಪಷ್ಟನೆ

H D Deve gowda

ಬೆಂಗಳೂರು: ಸಿಪಿಎಂ ಕುರಿತ ನನ್ನ ಹೇಳಿಕೆಯ ಬಗ್ಗೆ ಕೆಲವು ಗೊಂದಲಗಳಿವೆ. ನನ್ನ ಕಮ್ಯುನಿಸ್ಟ್ ಸ್ನೇಹಿತರು ನಾನು ಹೇಳಿದ್ದನ್ನು ಅಥವಾ ನಾನು ಹೇಳಿದ ಸಂದರ್ಭವನ್ನು ಅನುಸರಿಸಿದಂತೆ ತೋರುತ್ತಿಲ್ಲ. ಕೇರಳದ ಸಿಪಿಎಂ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬೆಂಬಲಿಸುತ್ತದೆ ಎಂದು ನಾನು ಹೇಳಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.

ಎಚ್‌.ಡಿ. ದೇವೇಗೌಡರ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ ವಿಚಾರಕ್ಕೆ ಟ್ವೀಟ್ ಮೂಲಕ ಮಾಜಿ ಪ್ರಧಾನಿ ಸ್ಪಷ್ಟನೆ ನೀಡಿದ್ದಾರೆ. ಕೇರಳದಲ್ಲಿ ನನ್ನ ಪಕ್ಷದ ಘಟಕ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ಮಾತ್ರ ಹೇಳಿದ್ದೆ. ಬಿಜೆಪಿಯೊಂದಿಗಿನ ನಮ್ಮ ಮೈತ್ರಿಯ ನಂತರ, ಕರ್ನಾಟಕದ ಹೊರಗಿನ ನನ್ನ ಪಕ್ಷದ ಘಟಕಗಳಲ್ಲಿನ ವಿಷಯಗಳು ಬಗೆಹರಿಯದ ಕಾರಣ ಕೇರಳದ ಎಲ್‌ಡಿಎಫ್ ಸರ್ಕಾರದ ಜತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದಷ್ಟೇ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | VISTARA TOP 10 NEWS: ಕಾಂಗ್ರೆಸ್‌ನ ಕಲೆಕ್ಷನ್‌ ವಂಶಾವಳಿ ಬಿಡುಗಡೆ, ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣ ಸಿಐಡಿಗೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು

ಕೇರಳ ಸಿಎಂ ಪಿಣರಾಯಿ ವಿಜಯನ್ ಏನು ಹೇಳಿದ್ದಾರೆ?

ಕೇರಳದಲ್ಲಿ ಇಬ್ಬರು ಜೆಡಿಎಸ್‌ ಶಾಸಕರಿದ್ದು, ಅಲ್ಲಿನ ಜೆಡಿಎಸ್‌ ಘಟಕ ನಮ್ಮ ಜತೆಗಿದೆ. ಕೇರಳ ಸರ್ಕಾರದಲ್ಲಿ ನಮ್ಮ ಸಚಿವರೊಬ್ಬರು ಇದ್ದಾರೆ, ಅವರಿಗೂ ಕರ್ನಾಟಕದ ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ಒಪ್ಪಿಗೆ ಇದೆ. ಸಿಎಂ ಪಿಣರಾಯಿ ವಿಜಯನ್ ಅವರು ಸಂಪೂರ್ಣ ಒಪ್ಪಿಗೆ ನೀಡಿದ್ದಾರೆ ಎಂದು ಎಚ್‌.ಡಿ. ದೇವೇಗೌಡರು ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು, ದೇವೇಗೌಡರ ಹೇಳಿಕೆ ಸಂಪೂರ್ಣ ಅಸಂಬದ್ಧ. ಅವರಂತಹ ಹಿರಿಯ ರಾಜಕಾರಣಿ ಈ ರೀತಿ ಆಧಾರ ರಹಿತ ಸುಳ್ಳುಗಳನ್ನು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದರು.

ದೇವೇಗೌಡರು ತಮ್ಮ ಹೇಳಿಕೆಯನ್ನು ಸರಿಪಡಿಸುವ ಮೂಲಕ ರಾಜಕೀಯ ಸಭ್ಯತೆ ಮೆರೆಯಬೇಕು. ಬದಲಾಗುತ್ತಿರುವ ತಮ್ಮ ರಾಜಕೀಯ ನಿಲುವುಗಳನ್ನು ಸಮರ್ಥಿಸಿಕೊಳ್ಳಲು ಮಾಜಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ. ಈ ಹಿಂದೆ ತಮ್ಮ ಮಗ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಪಕ್ಷದ ಸಿದ್ಧಾಂತಕ್ಕೆ ದ್ರೋಹ ಎಸಗಿದ್ದರು ಎಂದು ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.

Exit mobile version