Site icon Vistara News

Power Point with HPK : ನಾನು ಸಂಘ ಪರಿವಾರಕ್ಕೆ ಸೇರದೇ ಇದ್ದಿದ್ದರೆ ಬೀಡಿ ಸೇದಿಕೊಂಡು ಎಲ್ಲೋ ಇರುತ್ತಿದ್ದೆ: ಈಶ್ವರಪ್ಪ

KS Eshwarappa in Power Point with HPK

ಬೆಂಗಳೂರು: ಬಿಜೆಪಿ ಎಂಬುದು ಶಿಸ್ತಿನ (BJP disciplined party) ಪಕ್ಷವಾಗಿದೆ. ಬೂತ್‌ ಮಟ್ಟದ ಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸಿ ಐದು ಬಾರಿ ಗೆಲ್ಲಿಸಿ ಅನೇಕ ಇಲಾಖೆಯಲ್ಲಿ ಸಚಿವ ಸ್ಥಾನದ ಜವಾಬ್ದಾರಿಯನ್ನು ನೀಡಿದೆ. ಅಲ್ಲದೆ, ಉಪ ಮುಖ್ಯಮಂತ್ರಿ ಮಾಡಿದೆ. ಈಗ ಸಂಘಟನೆಯ ಕೆಲಸವನ್ನು ನೀನು ಮಾಡಬೇಕು ಎಂದು ಪಕ್ಷ ಸೂಚನೆ ನೀಡಿದೆ. ಹೀಗಾಗಿ ನಾನು ಹಿರಿಯರ ಆದೇಶವನ್ನು ಪಾಲನೆ ಮಾಡಿದ್ದೇನೆ. ನನ್ನ ಅಪ್ಪ ಅಡಿಕೆ ಮಂಡಿಯಲ್ಲಿ ಗುಮಾಸ್ತರು, ಅಮ್ಮ ಅಲ್ಲಿ ಅಡಿಕೆ ಆರಿಸುತ್ತಿದ್ದ ಕೂಲಿ ಹೆಣ್ಣು ಮಗಳಾಗಿದ್ದಾಳೆ. ಆದರೆ, ನಾನು ಸಂಘ ಪರಿವಾರಕ್ಕೆ ಸೇರಿರಲಿಲ್ಲವಾಗಿದ್ದರೆ ಎಲ್ಲಿಯೋ ಬೀಡಿ ಸೇದಿಕೊಂಡು ಇರುತ್ತಿದ್ದೆನೇನೋ ಎಂದು ಮಾಜಿ ಡಿಸಿಎಂ, ಬಿಜೆಪಿ ಹಿರಿಯ ನಾಯಕ ಕೆ.ಎಸ್.‌ ಈಶ್ವರಪ್ಪ ಅವರು ತಾವು ಬೆಳೆದು ಬಂದ ಹಾದಿಯನ್ನು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ವಿವರಿಸಿದ್ದಾರೆ.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಕೆ.ಎಸ್.‌ ಈಶ್ವರಪ್ಪ, ನಾನು ಬಿಜೆಪಿಗೆ ಸೇರಿದ್ದರಿಂದ ಸಂಸ್ಕಾರ ಹಾಗೂ ಶಿಸ್ತನ್ನು ಕಲಿತೆ. ಈಗ ಯುವಕರಿಗೆ ಸ್ಥಾನ ಬಿಟ್ಟುಕೊಡಬೇಕೆಂದು ಹಿರಿಯರು ಯೋಚನೆ ಮಾಡಿದ್ದರು. ಹಿರಿಯರ ಯೋಚನೆ ಸರಿ ಇರುತ್ತದೆ ಎಂಬುದು ನನ್ನ ಭಾವನೆ. ಈ ಭಾವನೆ ನಮ್ಮ ಕಾರ್ಯಕರ್ತರಿಗೂ ಇರಬೇಕು. ನಾನು ಚುನಾವಣಾ ರಾಜಕೀಯದಿಂದ ಮಾತ್ರವೇ ನಿವೃತ್ತಿ ಆಗಿದ್ದೇನೆ. ಆದರೆ, ರಾಜಕೀಯದಿಂದ ನಿವೃತ್ತಿ ಆಗಿಲ್ಲ ಎಂದು ಹೇಳಿದರು.

ಬಿಜೆಪಿಗೆ ಸೋತು ಅಭ್ಯಾಸ ಇದೆ; ಗೆದ್ದರಷ್ಟೇ ವಿಶೇಷ

ಬಿಜೆಪಿ ಚುನಾವಣೆ ಗೆದ್ದರೆ ಮಾತ್ರ ವಿಶೇಷ. ಏಕೆಂದರೆ ನಾವು ಚುನಾವಣೆಗಳಲ್ಲಿ ಸೋತು ಸೋತು ಸೋತು ಅಭ್ಯಾಸವಾಗಿಬಿಟ್ಟಿತ್ತು. ಉದಾಹರಣೆಗೆ ಶಂಕರ ಮೂರ್ತಿ ಅವರು ನಗರಸಭೆ ಚುನಾವಣೆಗೆ ನಿಂತು ಸೋಲುತ್ತಿದ್ದರು. ಅಲ್ಲಿಂದ ಜಿಲ್ಲಾ ಪಂಚಾಯಿತಿ ಹಾಗೇ ವಿಧಾನಸಭೆ ಚುನಾವಣೆ, ಬಳಿಕ ಲೋಕಸಭೆ ಚುನಾವಣೆಗೆ ಸೋತು ಸೋತು ಸ್ಪರ್ಧೆ ಮಾಡುತ್ತಲೇ ಇದ್ದರು. ಲೋಕಸಭೆ ಬಳಿಕ ಮತ್ತೆ ಬರುತ್ತಿದ್ದ ನಗರಸಭೆ ಚುನಾವಣೆಗೆ ಮತ್ತೆ ಅವರೇ ಅಭ್ಯರ್ಥಿ ಆಗುತ್ತಿದ್ದರು ಎಂದು ಬಿಜೆಪಿ ನಡೆದು ಬಂದ ಹಾದಿಯನ್ನು ಕೆ.ಎಸ್.‌ ಈಶ್ವರಪ್ಪ ನೆನೆದರು.

ಈಗ ಬಿಜೆಪಿ ಸ್ಥಿತಿ ಹೇಗಿದೆ ಎಂದರೆ ಸಂಘಟನಾ ದೃಷ್ಟಿಯಿಂದ ದೊಡ್ಡ ಮಟ್ಟದಲ್ಲಿ ಬೆಳೆದಿದ್ದೇವೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದೇವೆ. ಈಗ ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆವರೆಗೆ ಅಧಿಕಾರ ಹಿಡಿಯುವಲ್ಲಿ ಬೆಳೆದಿದ್ದೇವೆ ಎಂದು ಕೆ.ಎಸ್.‌ ಈಶ್ವರಪ್ಪ ಹೇಳಿದರು.

ಇದನ್ನೂ ಓದಿ: Power Point with HPK : ಈ ರಾಜ್ಯ ಸರ್ಕಾರ ಎಷ್ಟು ದಿನ ಇರತ್ತೋ ಗೊತ್ತಿಲ್ಲ; ಕೆ.ಎಸ್.‌ ಈಶ್ವರಪ್ಪ ಹೊಸ ಬಾಂಬ್!

ಒಕ್ಕಲಿಗರು ಹೆಚ್ಚು ಇರುವ ಕಡೆ ಶೇ. 5-6 ಹೆಚ್ಚಳ

ಇದು ಉತ್ತರ ಕರ್ನಾಟಕದ ಪಕ್ಷ, ಲಿಂಗಾಯತ ಪಕ್ಷ ಎಂದು ಏನೇನೋ ಹೆಸರನ್ನು ಇಡುತ್ತಿದ್ದಾರೆ. ಆದರೆ, ಕಳೆದ ಚುನಾವಣೆಯಲ್ಲಿ ಒಕ್ಕಲಿಗರು ಹೆಚ್ಚು ಇರುವ ಪ್ರದೇಶಗಳಲ್ಲಿ ನಾವು ಶೇಕಡಾ 5ರಿಂದ 6ರಷ್ಟು ಹೆಚ್ಚುವರಿ ಮತಗಳನ್ನು ಪಡೆದುಕೊಂಡಿದ್ದೇವೆ. 5 ಸಾವಿರ ಮತ ಪಡೆಯುತ್ತಿದ್ದ ಅಭ್ಯರ್ಥಿಯು ಈಗ ಮಂಡ್ಯ, ರಾಮನಗರ ಸೇರಿ ಆ ಭಾಗದಲ್ಲಿ 40ರಿಂದ 50 ಸಾವಿರ ಮತಗಳನ್ನು ಪಡೆದುಕೊಂಡಿದ್ದಾರೆ. ಇದು ಸಾಧನೆಯಾಗಿದೆ ಎಂದು ಕೆ.ಎಸ್.‌ ಈಶ್ವರಪ್ಪ ಹೇಳಿದರು.

Exit mobile version