Site icon Vistara News

CM Basavaraja Bommai : ತುಳಿತಕ್ಕೆ ಒಳಗಾದವರಿಗೆ ಜೇನು ತುಪ್ಪ ಸಿಗಲಿ ಎಂದು ಜೇನುಗೂಡಿಗೆ ಕೈಹಾಕಿದೆ ಎಂದ ಬೊಮ್ಮಾಯಿ

C M Basavaraj Bommai at India Today Interview.

ಹುಬ್ಬಳ್ಳಿ: ʻʻಜೇನುಗೂಡಿಗೆ ಕೈಹಾಕಬೇಡಿ ಎಂದು ಬಹಳಷ್ಟು ಜನ ಹೇಳಿದ್ದರು. ಆದರೆ, ನಾವು ತುಳಿತಕ್ಕೆ ಒಳಗಾಗಿರುವ ಜನರಿಗೆ ಜೇನುತುಪ್ಪ ದೊರೆಯಲಿ ಎಂಬ ಕಾರಣಕ್ಕೆ ಜೇನುಗೂಡಿಗೆ ಕೈ ಹಾಕಿದ್ದೇವೆʼʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಹೊಸ ಮೀಸಲಾತಿ ನೀತಿಯನ್ನು ಸಮರ್ಥಿಸಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ತುಳಿತಕ್ಕೊಳಗಾದ ಜನಾಂಗಗಳಿಗೆ ನ್ಯಾಯ ದೊರಕಿಸುವವರೆಗೂ ವಿಶ್ರಮಿಸುವುದಿಲ್ಲ. ಇದೇ ಕಾರಣಕ್ಕಾಗಿ ಒಳಮೀಸಲಾತಿಯ ನಿರ್ಧಾರ ಮಾಡಲಾಗಿದೆ ಎಂದರು.

ʻʻಮೀಸಲಾತಿ ವಿಚಾರದಲ್ಲಿ ಬೇಡಿಕೆ ಸುಮಾರು 30 ವರ್ಷಗಳಿಂದ ಇದೆ. ಕಾಂಗ್ರೆಸ್ ಅವರಿಗೆ ಆಶ್ವಾಸನೆಗಳನ್ನು ನೀಡಿ ಮೂಗಿಗೆ ತುಪ್ಪ ಹಚ್ಚಿ ಕೊನೆಗೆ ಗಳಿಗೆಯಲ್ಲಿ ಕೈಕೊಟ್ಟಿತು. ಬಿಜೆಪಿಗೆ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿದ್ದರು. ಆದರೆ ನಮಗೆ ಬದ್ಧತೆಯಿದೆ. ವರದಿ ತರಿಸಿ, ಅಧ್ಯಯನ ಮಾಡಿ, ಸಂಪುಟ ಉಪ ಸಮಿತಿ ರಚಿಸಿ, ಕಾನೂನಿನ ಪ್ರಕಾರ ವ್ಯವಸ್ಥಿತವಾಗಿ ತೀರ್ಮಾನ ಮಾಡಲಾಗಿದೆʼʼ ಎಂದರು.

ಕಾಂಗ್ರೆಸ್ ನವರು ಹತಾಶರಾಗಿದ್ದಾರೆ

ʻʻಕಾಂಗ್ರೆಸ್‌ನವರಿಗೆ ತಮಗೆ ಮಾಡಲಾಗದೆ ಇರುವುದನ್ನು ಬಿಜೆಪಿ ಮಾಡಿದೆ ಎಂಬ ಹತಾಶ ಮನೋಭಾವ ಇದೆ. ಹೀಗಾಗಿ ಅವರು ಏನೇನೋ ಮಾತನಾಡುತ್ತಿದ್ದಾರೆ. ಅದಕ್ಕೆ ಕಿಮ್ಮತ್ತಿಲ್ಲ. ಅವರು ಸದಾ ಎಸ್.ಸಿ ಎಸ್.ಟಿ ಅವರನ್ನು ಯಾಮಾರಿಸಿಕೊಂಡೇ ಬಂದಿದ್ದಾರೆ. ಅವರ ಟ್ರ್ಯಾಕ್ ರೆಕಾರ್ಡ್ ಅದು. ಸಹಾನುಭೂತಿ ತೋರಿಸುವ ಮೂಲಕ ಮತ ಪಡೆಯಬಹುದು ಎಂದು ಎಣಿಸಿದ್ದಾರೆ. ಆದರೆ ಅದಕ್ಕೆ ನಿರ್ಣಯ ಮಾಡುವ ಸರ್ಕಾರ ಇದೆ ಎಂದು ತಿಳಿದಿರಲಿಲ್ಲ. ನಾವು ಸಾಮಾಜಿಕ, ಅಭಿವೃದ್ಧಿ, ಸಂಘಸಂಸ್ಥೆಗಳ ಬೇಡಿಕೆ ವಿಚಾರದಲ್ಲಿಯಾಗಲಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಗಳನ್ನು ಮಾಡಿದ್ದೇವೆ. ಈ ಬಗ್ಗೆ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ರಾಜ್ಯದಲ್ಲಿ ನಿರ್ಣಾಯಕ ತೀರ್ಮಾನ ಮಾಡುವ ಸರ್ಕಾರ ಇದೆʼʼ ಎಂದರು.

ಅಲ್ಪಸಂಖ್ಯಾತರ ಹಿತರಕ್ಷಣೆಗೆ ಬದ್ಧ

ಮುಸ್ಲಿಮರನ್ನು ಮೇಲ್ವರ್ಗದ ಬಡವರ ವರ್ಗಕ್ಕೆ ಸೇರಿಸಿ ಶೇಕಡಾ 4ರಷ್ಟಿದ್ದ ಮೀಸಲಾತಿಯನ್ನು ಹಂಚಿ ಅನ್ಯಾಯ ಮಾಡಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಶೇ. 4 ರಲ್ಲಿ ಅವರಿಗೆ ಆರ್ಥಿಕವಾಗಿ ಅರ್ಹತೆ ಇದೆ. ನಾಲ್ಕರ ಬದಲಿಗೆ ಶೇ. 10ರಷ್ಟು ನೀಡಲಾಗಿದೆ. ಅನ್ಯಾಯ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಅಲ್ಪಸಂಖ್ಯಾತರ ಹಿತರಕ್ಷಣೆಯನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗಿದೆ ಎಂದರು ಮುಖ್ಯಮಂತ್ರಿಗಳು.

ಮಹದಾಯಿ ಯೋಜನೆ ಕಾಮಗಾರಿ ಶೀಘ್ರ ಆರಂಭ

ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ಮಹದಾಯಿ ಯೋಜನೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಅಷ್ಟರಲ್ಲಿ ಅರಣ್ಯ ಇಲಾಖೆಯ ಅನುಮೋದನೆ ದೊರೆತರೆ ಕಾಮಗಾರಿ ಪ್ರಾರಂಭವಾಗುತ್ತದೆ ಎಂದರು.

ಚುನಾವಣೆ ಘೋಷಣೆಯಾದ ನಂತರ ಬಿಜೆಪಿ ಪಟ್ಟಿ ಬಿಡುಗಡೆ

ಬಿಜೆಪಿ ಪಟ್ಟಿಯನ್ನು ಯಾವಾಗಲೂ ಚುನಾವಣೆ ಘೋಷಣೆಯಾದ ನಂತರವೇ ಬಿಡುಗಡೆ ಮಾಡುವುದು. ಅದರಂತೆಯೇ ಈ ಬಾರಿಯೂ ಮಾಡಲಾಗುತ್ತದೆ ಎಂದರು. ಸರಿಯಾದ ಸಮಯದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ : Reservation : ಮೀಸಲಾತಿ ಒಪ್ಪಿಕೊಳ್ಳಲು ಸ್ವಾಮೀಜಿಗಳಿಗೆ 25 ಬಾರಿ ಫೋನ್‌ ಮಾಡಿ ಒತ್ತಡ: ಡಿಕೆಶಿ ಆರೋಪ, ಬಿಜೆಪಿ ತಿರುಗೇಟು

Exit mobile version