ಕೊಡಗು: ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಸಂಪತ್ ಯಾರು ಎಂಬುದು ನನಗೆ ತಿಳಿದಿಲ್ಲ. ಆತನಿಗೆ ನಾನು ಜಾಮೀನು ಕೊಡಿಸಿಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ಸ್ಪಷ್ಟೀಕರಣ ನೀಡಿದ್ದಾರೆ.
ಸಂಪತ್ ಜತೆಗಿನ ಆರ್‌ಎಸ್‌ಎಸ್ ಫೋಟೋ ಇರುವ ಬಗ್ಗೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ನನಗೂ ಆ ಫೋಟೋ ನೋಡಿ ಆಶ್ವರ್ಯ ಆಗಿದೆ. ಅದು ಸುಮಾರು 6-7 ವರ್ಷಗಳ ಹಿಂದಿನದ್ದು ಇರಬಹುದು. ಮಡಿಕೇರಿಯ ಜೂನಿಯರ್ ಕಾಲೇಜ್‌ನ ಮೆರವಣಿಗೆ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಸಾವಿರಾರು ಜನ ಸೇರಿದ್ದರು. ಅಂದು ಯಾರು ಯಾರ ಹಿಂದೆ ನಿಂತಿದ್ದರು ಎಂದು ಹೇಳಲು ಆಗುವುದಿಲ್ಲ ಎಂದು ತಿಳಿಸಿದರು.
ಆರ್‌ಎಸ್‌ಎಸ್‌ನಲ್ಲಿ ಯಾರಿಗೂ ಅಂತಸ್ತು, ಶ್ರೀಮಂತಿಕೆ ಎಂಬುದಿಲ್ಲ. ಹೀಗಾಗಿ ಅವರು ನಮ್ಮ ಹಿಂದೆ ನಿಂತಿರಬಹುದು. ನಮ್ಮ ಬಗ್ಗೆ ಅಭಿಮಾನ ಇರುವವರು ಬಂದು ನಿಲ್ಲುವುದು ಜತೆಗೆ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಆತನೇ ನಾನು ಫೋಟೋ ತೆಗೆಸಿಕೊಂಡಿದ್ದು ನಿಜ ಎಂದಿದ್ದಾನೆ. ಆದರೆ, ಅವರ ತಂದೆಯವರು ನಾವು ಕಾಂಗ್ರೆಸ್‌ನವರು ಎಂದು ಹೇಳಿಕೊಂಡಿದ್ದಾರೆ. ಈ ಮೊದಲು ಜೆಡಿಎಸ್‌ನಲ್ಲಿ ಇದ್ದು ಬಳಿಕ ಕಾಂಗ್ರೆಸ್‌ಗೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ ಎಂದು ಅಪ್ಪಚ್ಚು ರಂಜನ್ ಪ್ರತಿಕ್ರಿಯೆ ನೀಡಿದರು.
ಕುಶಾಲನಗರ ಠಾಣೆಗೆ ಹೋದಾಗ ಆತ ಇರಲಿಲ್ಲ
ಮೊನ್ನೆ ಕುಶಾಲನಗರ ಠಾಣೆಗೆ ಹೋದಾಗ ಆತ ಅಲ್ಲಿ ಇರಲಿಲ್ಲ. ಆದರೆ, ಮೊಟ್ಟೆ ಹೊಡೆದಿರುವುದು ಈ ವ್ಯಕ್ತಿ ಎಂದು ಫೋಟೊ ತೋರಿಸಿದಾಗಲೇ ಗೊತ್ತಾಗಿದೆ. ನಮಗೂ ಮೊಟ್ಟೆ ಹೊಡೆದ ಸಂಪತ್‌ಗೂ ಯಾವ ಸಂಬಂಧವಿಲ್ಲ. ಆತನನ್ನು ನಾನು ಬಿಡಿಸಿಲ್ಲ ಎಂದು ಅಪ್ಪಚ್ಚು ರಂಜನ್ ಸ್ಪಷ್ಟಪಡಿಸಿದ್ದಾರೆ.
ನಾನು ನಮ್ಮ ಕಾರ್ಯಕರ್ತರಿಗೆ ಜಾಮೀನು ಕೊಟ್ಟು ಬಿಡಿಸಿದ್ದೆ ಎಂದಿರುವ ರಂಜನ್, ನಮ್ಮ ಕಾರ್ಯಕರ್ತರು ಬಿಡುಗಡೆಯಾಗಿದ್ದು ಆಗಸ್ಟ್ 18ರ ರಾತ್ರಿಯಾಗಿದೆ. ಆದರೆ, ಸಂಪತ್ ಆ.20ರಂದು ಅರೆಸ್ಟ್ ಆಗಿ ಬಿಡುಗಡೆಯಾಗಿದ್ದಾನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸಂಪತ್ ಮಾಜಿ ಸಚಿವ ಜೀವಿಜಯ ಫಾಲೋವರ್
ಸಂಪತ್ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆದಮ್ ಪರ ಪ್ರಚಾರ ಮಾಡಿದ್ದರು. ಆದಮ್ ಪರವಾಗಿ ಕೆಲಸ ಮಾಡಿರುವ ವಿಡಿಯೊ ಫೋಟೊ ಕೂಡ ಇದೆ. ಸಂಪತ್ ತಮ್ಮ ಫಾಲೋವರ್ ಅಲ್ಲ ಎಂದು ಮಾಜಿ ಸಚಿವ ಜೀವಿಜಯ ಎದೆ ಮುಟ್ಟಿಕೊಂಡು ಹೇಳಲಿ ಎಂದು ಸವಾಲು ಹಾಕಿದ ಅಪ್ಪಚ್ಚು ರಂಜನ್, ಸಂಪತ್ ಹಾಗೂ ಅವರ ಅಪ್ಪನೇ ಕಾಂಗ್ರೆಸ್ ಮತ್ತು ಜೀವಿಜಯ ಅನುಯಾಯಿ ಎಂದಿದ್ದಾರೆ. ಇದಕ್ಕಿಂತ ಸಾಕ್ಷಿ ಇನ್ನೇನು ಬೇಕಾಗುತ್ತದೆ. ಅವರೇ ಕಾಂಗ್ರೆಸ್ ಕಾರ್ಯಕರ್ತ ಎಂದು ಘೋಷಿಸಿದ್ದಾರೆಂದು ಹೇಳಿದರು.
ಇದನ್ನೂ ಓದಿ | ಡಿಕೆ ಶಿವಕುಮಾರ್ ಅವರೇ ಮೊಟ್ಟೆ ಹೊಡೆಸಿರುವ ಸಾಧ್ಯತೆ ಇದೆ ಎಂದ ನಳಿನ್ ಕುಮಾರ್ ಕಟೀಲ್!