ಮೈಸೂರು: ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬಹುದು ಎಂಬ ಬಗ್ಗೆ ಕುಟುಂಬದೊಂದಿಗೆ ಚರ್ಚೆ ನಡೆಸಿದ್ದೇನೆ. ಬಾದಾಮಿ, ಕೋಲಾರ ಮತ್ತು ವರುಣ ನನ್ನ ಆಯ್ಕೆ. ಆದರೆ, ನಾನು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು.
ಮಂಗಳವಾರ ಕೋಲಾರದ ಕಾಂಗ್ರೆಸ್ ಮುಖಂಡರು ಮನೆಗೆ ಮುತ್ತಿಗೆ ಹಾಕಿದಾಗ ಕುಟುಂಬದೊಂದಿಗೆ ಚರ್ಚಿಸಿ ಹೇಳುವುದಾಗಿ ಹೇಳಿದ್ದ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ತಾವು ಮೂರು ಕ್ಷೇತ್ರಗಳನ್ನು ಆಯ್ಕೆ ಮಾಡಿದ್ದರೂ ವರುಣ ಕ್ಷೇತ್ರಕ್ಕೆ ಡಾ.ಯತೀಂದ್ರ ಸಿದ್ದರಾಮಯ್ಯ ಅವರೇ ಅಭ್ಯರ್ಥಿ ಎಂದು ಕೂಡಾ ಅವರು ಸ್ಪಷ್ಟಪಡಿಸಿದರು. ವರುಣದಿಂದ ಯತೀಂದ್ರಗೆ ಕ್ಲಿಯರ್ ಆಗಿದೆ ಎಂದರು. ಹಾಗಿದ್ದರೆ ಅವರು ವರುಣದ ಆಯ್ಕೆಯನ್ನು ಕೈ ಬಿಟ್ಟಿದ್ದಾರಾ ಎನ್ನುವುದು ಸ್ಪಷ್ಟವಿಲ್ಲ.
ʻʻನಾನು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ತೀರ್ಮಾನ ಮಾಡಿದರೆ ನಾಳೆಯೇ ಗೊಂದಲಕ್ಕೆ ತೆರೆ ಬೀಳಬಹುದುʼʼ ಎಂದು ಹೇಳಿದರು ಸಿದ್ದರಾಮಯ್ಯ.
ಕ್ಷೇತ್ರ ಹುಡುಕಾಟದ ಬಗ್ಗೆ ಅನುಕಂಪದಿಂದ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದ ಅವರು, ʻʻಹೆಚ್ಚು ಕ್ಷೇತ್ರಗಳು ಇರೋದು ಸಮಸ್ಯೆ ಆಗಿರೋದು. ನಾಳೆ ಒಂದೇ ಹೆಸರು ಇರುವ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ. ಅದರಲ್ಲಿ ನನ್ನ ಹೆಸರು ಇರುತ್ತೋ ಇಲ್ಲವೋ ಗೊತ್ತಿಲ್ಲ.
ಹೈಕಮಾಂಡ್ ನಿರ್ಧಾರವೇ ನನ್ನ ನಿರ್ಧಾರʼʼ ಎಮದರು.
ʻʻನಾನು ಎಲ್ಲೇ ಸ್ಪರ್ಧೆ ನಡೆಸಿದರೂ ಗೆಲ್ಲುವ ವಿಶ್ವಾಸ ಇದೆ. ನಾನು ಕ್ಷೇತ್ರಗಳನ್ನು ಹುಡುಕುತ್ತಿಲ್ಲ. ನನ್ನನ್ನು ಕ್ಷೇತ್ರಕ್ಕೆ ಕರೆಯುವವರ ಸಂಖ್ಯೆ ಹೆಚ್ಚಾಗಿದೆ ಅಷ್ಟೆ. ನಾನು ಕ್ಷೇತ್ರ ಹುಡುಕುತ್ತಿದ್ದೇನೆ ಎಂಬುದೆಲ್ಲ ತಪ್ಪು ಗ್ರಹಿಕೆʼʼ ಎಂದರು ಸಿದ್ದರಾಮಯ್ಯ.
ಈ ವಾರ ಮತ್ತೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻಅಡುಗೆ ಮಾಡಿದ್ದು ನಾವು ಅದನ್ನು ಬಡಿಸಲು ಈಗ ಪ್ರಧಾನಿ ಬರುತ್ತಿದ್ದಾರೆ ಅಷ್ಟೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತೆ ಕಣ್ಣು ಮುಚ್ಚಿಕೊಂಡಂತೆ ಆಗುವುದಿಲ್ಲ. ಪ್ರಧಾನಿ ಮಾತುಗಳೆನ್ನೆಲ್ಲ ಜನ ನಂಬುವುದಿಲ್ಲ. ದಶಪಥ ರಸ್ತೆ ಮಾಡಿದ್ದು ನಾವು, ಐಐಟಿಗೆ ಜಾಗ ಕೊಟ್ಟು ಗುದ್ದಲಿ ಪೂಜೆ ಮಾಡಿದ್ದು ನಾನು. ಇವರು ಈಗ ಬರಿ ಉದ್ಘಾಟನೆಗೆ ಬರುತ್ತಿದ್ದಾರೆ. ಇದು ಜನರಿಗೆ ಅರ್ಥವಾಗುತ್ತದೆ ಬಿಡಿʼʼ ಎಂದರು.
ಇದನ್ನೂ ಓದಿ Karnataka Elections : ಹೆಂಡ್ತಿ, ಮಗನ ಜತೆ ಕೇಳಿ ಹೇಳ್ತೇನೆ; ಕೋಲಾರದ ಜನರಿಗೆ ಸಿದ್ದರಾಮಯ್ಯ ಸಮಾಧಾನ!