ಬೆಂಗಳೂರು: ಜಾತಿ ವ್ಯವಸ್ಥೆಯನ್ನು ನಾವು ಚುನಾವಣೆಗೆ ತೆಗೆದುಕೊಂಡು ಹೋಗುತ್ತಿರುವುದರಿಂದ ಪರಿಣಾಮಕಾರಿಯಾಗಿ ಕೆಲಸ ಮಾಡುವವರಿಗೆ ಸಚಿವ ಸ್ಥಾನ ಸಿಗುತ್ತಿಲ್ಲ. ನನಗೆ ಅದೇ ಹೊಡೆತ ಬಿದ್ದಿದೆ. ಹೀಗಾಗಿಯೇ ನನಗೆ ಸಚಿವ ಸ್ಥಾನ ಕೈತಪ್ಪಿದೆ ಎಂದು ಹಿರಿಯ ರಾಜಕಾರಣಿ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಪವರ್ ಪಾಯಿಂಟ್ ವಿತ್ ಎಚ್ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ, ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ನವರಿಗೆ ನನ್ನನ್ನು ಸಚಿವನನ್ನಾಗಿ ಮಾಡಬೇಕೆಂಬ ಆಸೆ ಇತ್ತು. ಆದರೆ, ಸಾಮಾಜಿಕ ನ್ಯಾಯ, ಜಿಲ್ಲಾವಾರು ಹಂಚಿಕೆ, ಜಾತಿ ರಾಜಕಾರಣ ಎಲ್ಲವೂ ನನಗೆ ಸಚಿವ ಸ್ಥಾನ ಕೈತಪ್ಪಲು ಕಾರಣವಾಯಿತು. ಈ ದೃಷ್ಟಿಯಲ್ಲಿ ನೋಡುವುದರಿಂದ ನಮ್ಮನ್ನು ಸಾಮಾನ್ಯ ಕೆಟಗಿರಿಯಲ್ಲಿ ಪರಿಗಣಿಸುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Power Point with HPK : ಸಿದ್ದರಾಮಯ್ಯ ಕೈ ಕಟ್ಟಿದೆ, ಸ್ವತಂತ್ರ ನಿರ್ಧಾರ ಸಾಧ್ಯವಾಗುತ್ತಿಲ್ಲ: ಬಸವರಾಜ ರಾಯರೆಡ್ಡಿ
ಈಗ ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಮೂವರು ಆಯ್ಕೆಯಾದೆವು. ಶಿವರಾಜ್ ತಂಗಡಗಿ ಅವರು ಬೋವಿ ಜನಾಂಗದವರಾಗಿದ್ದಾರೆ. ನಮ್ಮನ್ನು ರೆಡ್ಡಿ ಲಿಂಗಾಯತ ಕೆಟಗರಿಯಲ್ಲಿ ಹಿಡಿದರೇ ವಿನಃ ಜನರಲ್ ಕೆಟಗರಿಯಲ್ಲಿ ಪರಿಗಣಿಸುತ್ತಿಲ್ಲ. ಅಂದರೆ, ಮೆರಿಟ್ ಕೆಟಗರಿಯಲ್ಲಿ ಪರಿಗಣಿಸುತ್ತಿಲ್ಲ ಎಂದು ಶಾಸಕ ಬಸವರಾಜ ರಾಯರೆಡ್ಡಿ ಬೇಸರ ಹೊರಹಾಕಿದರು.
ಜಾತಿ ವ್ಯವಸ್ಥೆ ರಾಜಕೀಯದಲ್ಲಿ ಹಾಸುಹೊಕ್ಕಾಗಿದೆ. ಜಾತಿ ರಾಜಕಾರಣದಲ್ಲಿ ಬಲಿಷ್ಠರಾದರೆ ಮಾತ್ರ ತಾವು ಮಂತ್ರಿಯಾಗಬಹುದು ಎಂದು ಕೆಲವರು ಇದನ್ನು ಮುಂದಿಡುತ್ತಾರೆ. ಇದಕ್ಕೆ ಸಾಮಾಜಿಕ ನ್ಯಾಯದ ಹೆಸರು ಹೇಳುತ್ತಾರೆ. ಆಗ ಮುಖ್ಯಮಂತ್ರಿಯಾದವರು ಸಮತೋಲನವನ್ನು ಮಾಡುತ್ತಾರೆ. ಜಾತಿ ಆಧಾರದ ಮೇಲೆ ಸಚಿವ ಸ್ಥಾನ ಕೊಡುವುದು ತಪ್ಪಲ್ಲ. ಆದರೆ, ಅರ್ಹತೆ ಇರುವವರಿಗೂ ಸಚಿವ ಸ್ಥಾನ ನೀಡುವ ಮಾನದಂಡವನ್ನೂ ಇಟ್ಟುಕೊಳ್ಳಬೇಕು. ಯಾವುದೇ ಸರ್ಕಾರ ಬಂದರೂ ಈ ಮಾದರಿಯನ್ನು ಅನುಸರಿಸಬೇಕು ಎಂದು ಶಾಸಕ ಬಸವರಾಜ ರಾಯರೆಡ್ಡಿ ಅಭಿಪ್ರಾಯಪಟ್ಟರು.
ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತನಿದ್ದೇನೆ. ಹಾಗಂತ ಅವರು ಮಾಡಿದ್ದೆಲ್ಲವನ್ನೂ ಸಮರ್ಥಿಸಿಕೊಳ್ಳಲಾರೆ. ಅವರು ತಪ್ಪು ಮಾಡಿದಾಗ ಟೀಕೆ ಮಾಡಿದ್ದೇನೆ. ಅವರು ಸಿಎಂ ಆಗಬೇಕೆಂದು ನಾನು ಬಯಸಿದ್ದೆ. ಅವರು ಸಿಎಂ ಆದರೆ, ಜನರಿಗೆ ಅನುಕೂಲ ಆಗುತ್ತದೆ ಎಂದು ನಂಬಿದವನು ನಾನು. ಈ ಕಾರಣಕ್ಕಾಗಿ ಅವರಿಗೆ 75 ವರ್ಷ ತುಂಬಿದಾಗ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆವು ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಕಾಂಗ್ರೆಸ್ನಲ್ಲಿ ಬಣ ಇಲ್ಲ
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಬಣ ಎಂದೆಲ್ಲ ಏನಿಲ್ಲ. ಅವರವರಿಗೆ ಅಭಿಮಾನಿಗಳು ಇದ್ದಾರೆ. ನಾನು ಸಿದ್ದರಾಮಯ್ಯ ಅವರ ಜತೆ ಇದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಏನೂ ಕೆಲಸ ಮಾಡಿಲ್ಲ ಎಂದು ಹೇಳಲು ಆಗುವುದಿಲ್ಲ. ಅವರು ಅದ್ಭುತ ಕೆಲಸಗಾರ. ಅವರಿಗೂ ಅವರದ್ದೇ ಆದ ಹಿಂಬಾಲಕರಿದ್ದಾರೆ ಎಂದು ಬಣ ರಾಜಕೀಯದ ಬಗ್ಗೆ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿದರು.
ಸಿಎಂ ರಾಯರೆಡ್ಡಿ ಸಲಹೆ; ಇಲ್ಲಿದೆ ವಿಡಿಯೊ
ಲೋಕಸಭಾ ಚುನಾವಣೆಗೆ ಸ್ಪರ್ಧೆ?
ನನ್ನನ್ನು ಲೋಕಸಭೆಗೆ ಕಳುಹಿಸಬೇಕು ಎಂಬ ಬಗ್ಗೆ ನಮ್ಮ ಪಕ್ಷದಲ್ಲಿ ಚರ್ಚೆ ಇದೆ. ಇನ್ನು ಕೆಲವು ಶಾಸಕರು ಸಹ ನನ್ನನ್ನು ಸಾಗಹಾಕಿದರೆ ಒಳ್ಳೆಯದು ಎಂಬ ಆಲೋಚನೆಯಲ್ಲೂ ಇದ್ದಾರೆ. ಸ್ವಾರ್ಥ ಇದ್ದೇ ಇರುತ್ತದೆ. ಇನ್ನು ಜನರ ಮನಸ್ಸಿನಲ್ಲಿಯೂ ಆ ಬಗ್ಗೆ ಒಲವು ಇದೆ. ನಾನು ಸಂಸದನಾಗಿ ಎರಡು ರೈಲ್ವೆ ಮಾರ್ಗ ನನ್ನ ಕ್ಷೇತ್ರದಲ್ಲಿ ಹಾದುಹೋಗುವಂತೆ ಮಾಡಿದ್ದೇನೆ. ಅಲ್ಲದೆ, ಎರಡು ರಾಷ್ಟ್ರೀಯ ಹೆದ್ದಾರಿ ಮಾಡಿದ್ದೇನೆ. ನನಗೆ ಲೋಕಸಭೆಯಲ್ಲಿ ಕೆಲಸ ಮಾಡಲು ಬಹಳ ಆಸಕ್ತಿ ಇದೆ. ಆದರೆ, ಈಗಿನ ವ್ಯವಸ್ಥೆಯಲ್ಲಿ ರಾಜಕೀಯ ಮಾಡುವ ಮನಸ್ಸು ಇಲ್ಲ. ಈಗಿನ ಭ್ರಷ್ಟ ರಾಜಕಾರಣದಲ್ಲಿ ಕೆಲಸ ಮಾಡುವುದು ಕಷ್ಟ. ಆದರೆ, ಈ ಭ್ರಷ್ಟತೆ ಹೋಗಬೇಕು. ಸಾಮಾನ್ಯ ವ್ಯಕ್ತಿ ರಾಜಕೀಯಕ್ಕೆ ಬರಬೇಕು ಎಂದು ಶಾಸಕ ಬಸವರಾಜ ರಾಯರೆಡ್ಡಿ ಅಭಿಪ್ರಾಯಪಟ್ಟರು.
ರಾಜಕಾರಣದ ಬಗ್ಗೆ ರಾಯರೆಡ್ಡಿ ಹೇಳಿದ್ದೇನು? ಇಲ್ಲಿದೆ ವಿಡಿಯೊ
ಇದನ್ನೂ ಓದಿ: Power Point with HPK : ನವೆಂಬರ್ ಬಜೆಟ್ನಲ್ಲಿ ಅಭಿವೃದ್ಧಿಗೆ ಸಿದ್ದರಾಮಯ್ಯ ಹಣ ನೀಡುತ್ತಾರೆ: ಬಸವರಾಜ ರಾಯರೆಡ್ಡಿ
ನನ್ನ ಮನೆಯಲ್ಲಿ ಯಾರಾದರೂ ಸಂಬಂಧಿಕರು ರಾಜಕೀಯದಲ್ಲಿದ್ದರೆ ಹೇಳಿ? ನನ್ನ ಮಗಳು, ಮಾವ, ಸಂಬಂಧಿಗಳು ಯಾರೂ ಸಹ ರಾಜಕಾರಣದಲ್ಲಿ ಇಲ್ಲ. ನಾನು ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವನು. ಜಾತಿ ರಾಜಕಾರಣವನ್ನು ನಾನು ಮಾಡಲಾರೆ. ನಾನು ನೂರಕ್ಕೆ ನೂರು ಪ್ರತಿಶತ ಹರಿಶ್ಚಂದ್ರ ಎಂದು ಹೇಳಲಾರೆ. ಅದಕ್ಕೊಂದು ಮಿತಿ, ರೇಖೆ ಇದೆ. ಅದನ್ನು ದಾಟಲು ನನಗೆ ಮನಸ್ಸಾಗುತ್ತಿಲ್ಲ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.