Site icon Vistara News

V Somanna: ಬಿಜೆಪಿಗೆ ಬಂದ್ಮೇಲೆ 4 ಬಾರಿ ಸೋತೆ, ಅದಕ್ಕೂ ಮುಂಚೆ ಸೋತೇ ಇರಲಿಲ್ಲ: ಮಾಜಿ ಸಚಿವ ವಿ.ಸೋಮಣ್ಣ ಬೇಸರ

Ex Minister V Somanna

ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ವರುಣ ಎರಡೂ ಕ್ಷೇತ್ರದಲ್ಲಿ ಸೋತ ಹಿನ್ನೆಲೆಯಲ್ಲಿ ಹತಾಶರಾಗಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರು, ಮತ್ತೊಮ್ಮೆ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿರುವುದು ಕಂಡುಬಂದಿದೆ. ಬಿಜೆಪಿಗೆ ಬರುವವರೆಗೆ ನಾನು ಸೋತೇ ಇರಲಿಲ್ಲ. ಬಿಜೆಪಿಗೆ ಬಂದಾಗ ನಾನು 4 ಬಾರಿ ಸೋತೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಯೇ ನನ್ನ ಸೋಲಿಗೆ ಕಾರಣ ಎಂದು ವಿ. ಸೋಮಣ್ಣ (V Somanna) ಹೇಳಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ಮಾತನಾಡಿರುವ ಅವರು, ಶ್ರೀನಿವಾಸ್ ಸಾಹೇಬರೇ, ನಾನು ಸೋತೆ ಇಲ್ಲ. ಕಾಂಗ್ರೆಸ್‌ನಲ್ಲಿ ನಿಂತು ಗೆದ್ದಿದ್ದೇನೆ. ಸ್ವತಂತ್ರ ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದೇನೆ. ಬಿಜೆಪಿ ಬಂದು ಸೋತೆ. ನಾನು ಏನಾಗಿಬಿಡುತ್ತೇನೋ ಎಂಬ ಭಯದಲ್ಲಿ ಸೋಲಿಸಿದರು ಎಂದು ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಮೈಸೂರು ಜಿಲ್ಲೆ ರಾಷ್ಟ್ರದ ಪ್ರತಿಷ್ಠಿತ ಜಿಲ್ಲೆ. ಶರಣರ ಆದರ್ಶಗಳನ್ನು ನಾವು ಬಸವ ಕಲ್ಯಾಣಕ್ಕೆ ಹೋದಾಗ ನೆನಪಿಸಿಕೊಳ್ಳುತ್ತೇವೆ. ಹಲವಾರು ವರ್ಷಗಳಿಂದ ಬಸವಕಲ್ಯಾಣಕ್ಕೂ ನನಗೂ ಸಂಬಂಧ ಇದೆ. ಬಸವಣ್ಣನವರ ಆದರ್ಶಪ್ರಾಯವಾದ ಚಿಂತನೆ ಈಗಲೂ ಇದೆ. ಅನೇಕ ವಿಚಾರ ಮಾತನಾಡಿದರೆ ಕೆಲವರಿಗೆ ಕಸಿವಿಸಿಯಾಗುತ್ತದೆ. ಒಬ್ಬನೇ ಒಬ್ಬ ಸೋಮಣ್ಣ ಸಣ್ಣ ಅಪಚಾರ ಮಾಡದೆ ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದೇನೆ ಎಂದರೆ, ಅದಕ್ಕೆ ಕಾರಣ ನಮ್ಮ ಗುರುಗಳು ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ದೊಡ್ಡ ಮಟ್ಟದ ಚಿಂತನ ಶಿಬಿರಗಳು ನಡೆಯುತ್ತಿರುತ್ತವೆ. ದೇಶಕ್ಕೆ ಮಾದರಿ ನಮ್ಮ ಅನುಭವ ಮಂಟಪ ಎಂದು ದೇಶದ ಪ್ರಧಾನಿ ಹೇಳುತ್ತಾರೆ. ಬುದ್ಧಿವಂತರಿದ್ದರೆ ಅವರನ್ನು ಮೂಲೆ ಗುಂಪು ಮಾಡುವ ಕೆಲಸ ನಡೆಯುತ್ತಿದೆ ಎಂದರು. ಬಿಹಾರದಲ್ಲಿ ಜಾತಿ ಗಣತಿ‌ ಬಿಡುಗಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಜಾತಿ ಗಣತಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. 2015ರಲ್ಲಿ ಜಾತಿ ಗಣತಿ ವರದಿಯನ್ನು ನೋಡಿದರೆ ಆಶ್ಚರ್ಯ ಆಗುತ್ತದೆ. ಈ ಸಮಾಜ ಕವಲುದಾರಿಯಲ್ಲಿ ಹೋಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಬಸವ ಜಯಂತಿ ಕಾರ್ಯಕ್ರಮ ಎರೆಡು ದಿನ ನಡೆದಿದೆ. ಬೇರೆಯದನ್ನ ಬಿಟ್ಟು ಅರ್ಹತೆಯುಳ್ಳವರಿಗೆ ಅವಕಾಶ ಕೊಡಬೇಕು. ನೀವುಗಳು ಒಗ್ಗಟ್ಟಾಗಬೇಕು, ಇಲ್ಲವೆಂದರೆ ಹೇಳುವವರು, ಕೇಳುವವರು ಇಲ್ಲದಂತಾಗುತ್ತದೆ ಎಂದು ಸಮುದಾಯಕ್ಕೆ ಸಲಹೆ ನೀಡಿದ ಅವರು, ನಮ್ಮಲ್ಲಿ ಎಲ್ಲವೂ ಇದೆ, ಆದರೆ ಅವಕಾಶ ಬಂದಾಗ ಕಣ್ಮುಚ್ಚಿ ಕುಳಿತುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ತಮಿಳುನಾಡಿಗೆ ಹೋಗಿದ್ದಾಗ ಅಲ್ಲಿನ ಮಂತ್ರಿಯೊಬ್ಬರು, ನೀವು ಗೋವಿಂದರಾಜನಗರ ಯಾಕೆ ಬಿಟ್ರಿ ಎಂದು ಕೇಳಿದರು. ನಾನು ಬಿಡಲಿಲ್ಲ, ನನ್ನನ್ನ ಬೇರೆ ಕ್ಷೇತ್ರಕ್ಕೆ ಕಳುಹಿಸಿದರು ಎಂದು ಹೇಳಿದೆ. ಕರುಣಾನಿಧಿ 9 ಭಾರಿ ಗೆದಿದ್ದಾರೆ. ಪ್ರತಿ ಭಾರಿಯೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಗೆದಿದ್ದಾರೆ. ಅದೇ ರೀತಿ ಮುಂದೆ ನೀವು ಬೇರೆ ಬೇರೆ ಕ್ಷೇತ್ರಕ್ಕೆ ಹೋಗಿ, ಸೋಲಿನಿಂದ ದೃತಿಗೆಡಬೇಡಿ ಎಂಬ ಸಲಹೆ ನೀಡಿದರು ಎಂದು ಹೇಳುವ ಮೂಲಕ ಮತ್ತೆ ಬೇರೆ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವ ಸುಳಿವು ನೀಡಿದರು.

Exit mobile version