Site icon Vistara News

HD Kumaraswamy : ಎಲ್ಲರನ್ನೂ Brother ಅನ್ನುವ ಕುಮಾರಸ್ವಾಮಿಗೆ ಡಿಕೆಶಿಯಂಥ ತಮ್ಮ ಯಾವ ಜನ್ಮದಲ್ಲೂ ಬೇಡವಂತೆ!

DKS HDK

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಮತ್ತು ಡಿ.ಕೆ. ಶಿವಕುಮಾರ್‌ (DK Shivakumar) ನಡುವಿನ ಅಣ್ತಮ್ಮ ಗಲಾಟೆ ಜೋರಾಗಿದೆ! ಡಿ.ಕೆ. ಶಿವಕುಮಾರ್‌ ಅವರಂಥ ತಮ್ಮ ನನಗೆ ಈ ಜನ್ಮದಲ್ಲಲ್ಲ, ಯಾವ ಜನ್ಮದಲ್ಲೂ ಬೇಡ ಎಂದು ಹೇಳಿದ್ದಾರೆ ಎಚ್‌.ಡಿ ಕುಮಾರಸ್ವಾಮಿ (No need of brother like you). ಶನಿವಾರ (ಆ. 5) ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು ಹಲವು ವಿಚಾರಗಳನ್ನು ತೆರೆದಿಟ್ಟರು.

ಯುರೋಪ್‌ ಪ್ರವಾಸ ಮುಗಿಸಿ ಗುರುವಾರ ರಾತ್ರಿ ಬೆಂಗಳೂರಿಗೆ ಮರಳಿದ ಎಚ್‌.ಡಿ. ಕುಮಾರಸ್ವಾಮಿ ಅವರು ವಿಮಾನ ನಿಲ್ದಾಣದಲ್ಲೇ ಸುಮಾರು 45 ನಿಮಿಷ ಮಾತನಾಡಿ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ಡಿ.ಕೆ. ಶಿವಕುಮಾರ್‌ ಅವರ ಮೇಲೂ ವಾಕ್‌ ಪ್ರಹಾರ ನಡೆಸಿದ್ದರು. ಯಾವುದೋ ಕೃತಕ ಶಕ್ತಿಯನ್ನು ಬಳಸಿಕೊಂಡು ಗೆದ್ದಿದ್ದಾರೆ, ಈ ಕೃತಕ ಶಕ್ತಿಗಳು ತುಂಬ ದಿನ ಉಳಿಯಲ್ಲ ಎಂದೆಲ್ಲ ಮಾತನಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಡಿ.ಕೆ. ಶಿವಕುಮಾರ್‌ ಅವರು, ʻʻನಮ್ಮಣ್ಣ ಹೇಳ್ತಾರೆ, ನಾವು ಕೇಳಬೇಕುʼʼ ಎಂದು ಲಘುವಾಗಿ ಪ್ರತಿಕ್ರಿಯಿಸಿದ್ದರು. ʻʻಕುಮಾರಸ್ವಾಮಿ ಅವರು ಅನುಭವಿಗಳು. ಅವರ ಮಾರ್ಗದರ್ಶನ ನಮಗೆ ಬೇಕು, ಆಶೀರ್ವಾದ ಬೇಕು. ಅಣ್ಣ ಹೇಳ್ತಾರೆ, ತಮ್ಮ ಕೇಳ್ತಾನೆʼʼ ಎಂದು ಪ್ರತಿಕ್ರಿಯಿಸಿದ್ದರು.

ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್‌ ಅವರ ಮಾತಿಗೆ ತಿರುಗೇಟು ನೀಡಿದರು. ʻʻಅಣ್ಣ ಹೇಳ್ತಾರೆ, ತಮ್ಮ ಕೇಳ್ಬೇಕು ಅಂತಾ ಅದೇನೋ ಡಿಕೆ ಶಿವಕುಮಾರ್ ಹೇಳಿದ್ದಾರಲ್ಲ.. ನನಗೆ ಈ ಜನ್ಮದಲ್ಲಿ ಅವರು ತಮ್ಮನಾಗೋದು ಸಾಧ್ಯವಿಲ್ಲ. ಮುಂದಿನ ಜನ್ಮದಲ್ಲೂ ಅವರು ನನಗೆ ತಮ್ಮನಾಗೋದು ಬೇಡʼʼ ಎಂದು ಹೇಳಿದರು.

ʻʻನಾನು ಅವರಿಗೆ ಅಣ್ಣಾ ಆಗೊದು ಬೇಡ. ಅವರು ನನಗೆ ತಮ್ಮ ಆಗೊದು ಬೇಡ. ಅಂತ ತಮ್ಮ ನನಗೆ ಬೇಕಿಲ್ಲʼʼ ಎಂದು ಹೇಳಿದರು ಎಚ್‌.ಡಿ ಕುಮಾರಸ್ವಾಮಿ.

ಹುಡುಗಾಟಿಕೆಗೆ ಹೇಳಿಕೆ ಕೊಟ್ಟಿಲ್ಲ ಎಂದ ಕುಮಾರಸ್ವಾಮಿ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 12 ದಿನಗಳ ಕಾಲ ಹೊರ ದೇಶಕ್ಕೆ ಕುಟುಂಬ ಸಮೇತವಾಗಿ ಹೋಗಿದ್ದೆ. ವಾಪsff ಬರುವಾಗ ಏರ್ಪೋರ್ಟ್ ನಲ್ಲಿ ಕೆಲ ವಿಷಯಗಳ ಪ್ರಸ್ತಾಪ ಮಾಡಿದ್ದೆ. ಅದನ್ನು ನಾನು ಹುಡುಗಾಟಿಗೋ, ಅಥವಾ ಸಿಎಂ ಏನೋ ಹೇಳಿದ್ದಾರಲ್ಲ ಹಿಟ್ ಅಂಡ್ ರನ್ ಗೋ ಹೇಳಿಲ್ಲ ಎಂದು ಹೇಳಿದರು.

ʻʻಹಿಟ್ ಅಂಡ್ ರನ್ ಜಾಯಮಾನದ ವ್ಯಕ್ತಿ ನಾನಲ್ಲ. ಹಿಟ್ ಅಂಡ್ ರನ್ ಮಾಡುವ ಸಂಸ್ಕೃತಿ ಕಾಂಗ್ರೆಸ್‌ನದ್ದು. ಚುನಾವಣೆ ಸಂದರ್ಭದಲ್ಲಿ ಕಮಿಷನ್ ಅಂತಾ ಜಾಹೀರಾತು ಕೊಟ್ರಲ್ಲ ಇವ್ರು ಹಿಂದಿನ ಸರ್ಕಾರದ ಕಮಿಷನ್ ಬಗ್ಗೆ ಇವ್ರು ದಾಖಲೆ ಕೊಡೋಕೆ ಆಗಿಲ್ಲ ಇವರ ಕೈಯಲ್ಲಿʼʼ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್‌ನವರು ಯಾವ ರೀತಿ ನುಡಿದಂತೆ ನಡೆದಿದ್ದೀರಿ?

ʻʻಕಾಂಗ್ರೆಸ್ ನವರು ನುಡಿದಂತೆ ನಡೆದಿದ್ದೇವೆ ಎಂದು ಜಾಹಿರಾತು ಕೊಟ್ಟಿದ್ದಾರೆ. ನೀವು ಯಾವ ರೀತಿ ನುಡಿದಂತೆ ನಡೆದಿದ್ದೀರಿ..?ʼʼ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

“ನೀವು ಕರೆಂಟ್ ಕೊಟ್ಟ ನಂತರ ಪಾಪ ಅವ್ರು ಬೆಳಕು ಕಾಣ್ತಿದ್ದಾರೆ ಅಲ್ವಾ..? ೨೦೦ ಯುನಿಟ್ ಉಚಿತ ಎಂದು ಗೈಡ್ ಲೈನ್ಸ್ ಹಾಕಿದ್ರಲ್ಲ ಅದಕ್ಕೆ ನನ್ನ ತಕರಾರು ಇಲ್ಲ. 230-240 ಯುನಿಟ್ ವಿದ್ಯುತ್ ಬಳಸಿದವರಿಗೂ ವಿದ್ಯುತ್ ಬಿಲ್ ಕಳುಹಿಸಿದ್ದಾರೆʼʼ ಎಂದು ಹೇಳಿದರು.

ಅಂದು ಕುಮಾರಸ್ವಾಮಿ ಅವರು ಡಿಕೆಶಿ ಬಗ್ಗೆ ಹೇಳಿದ್ದೇನು?

ವಿದೇಶದಲ್ಲಿ ಸರ್ಕಾರ ಪತನದ ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ‌ ನೀಡಿರುವುದನ್ನು ಗಮನಿಸಿದ್ದೇನೆ. ಯಾಕೆ ಅವರು ಹೀಗೆ ಮಾಡಿಕೊಂಡರೋ ಗೊತ್ತಿಲ್ಲ. ಬಹುಶಃ ಅವರಿಗೆ ಈ ಸರ್ಕಾರದ ಅವಧಿ ಬಹಳ ದಿನ ಇರಲ್ಲ ಎಂದು ಅಂದುಕೊಂಡಿರಬೇಕು. ನಮಗಿಂತ ಜಾಸ್ತಿ ಅವರೇ ಶಾಸ್ತ್ರ ಕೇಳುತ್ತಾರೆ. ಜೋತಿಷ್ಯದವರನ್ನು ಬಹಳ ನಂಬಿರೋರು ಅವರು. ಹಲವಾರು ರೀತಿ ಕುತಂತ್ರಗಳನ್ನು ಮಾಡುತ್ತಾರೆ. ಜೋತಿಷ್ಯದ ಕೃತಕ ಶಕ್ತಿಯನ್ನು ಪಡೆದುಕೊಂಡು ವಾಮ ಮಾರ್ಗದ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆ ಕೃತಕವಾದ ಶಕ್ತಿ ಬಹುಶಃ ಬಹಳ ದಿನ ಇರಲ್ಲ ಅಂತ ಅವರ ತಲೆಯಲ್ಲಿ ಇರಬಹುದು. ಅದಕ್ಕಾಗಿ ಇಂತಹ ಹೇಳಿಕೆ ನೀಡಿರಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು.

ಕುಮಾರಸ್ವಾಮಿ ಮಾತಿಗೆ ಡಿಕೆಶಿ ನೀಡಿದ ಉತ್ತರವೇನು?

ವಾಮ ಮಾರ್ಗದಿಂದ ಅಧಿಕಾರಕ್ಕೆ ಕಾಂಗ್ರೆಸ್ ಬಂದಿದೆ ಎಂಬ ಎಚ್‌.ಡಿ. ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಅವರ ಆಶೀರ್ವಾದ, ಮಾರ್ಗದರ್ಶನ ಬಹಳ ಮುಖ್ಯವಾಗುತ್ತದೆ. ಮಾಯಾನೋ, ಮಾಟಾನೋ, ಜೋತಿಷ್ಯನೋ, ಧರ್ಮನೋ ಅಥವಾ ನಮ್ಮ ಶ್ರಮಾನೋ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ತಿರುಗೇಟು ನೀಡಿದರು. ನಾವು ಅಧಿಕಾರ ವಹಿಸಿಕೊಂಡಿರುವುದರ ಹಿಂದೆ ಮೂರು ವರ್ಷದ ಶ್ರಮ ಇದೆ. ಕಾರ್ಯಕರ್ತರನ್ನು ಮಲಗಲು ನಾನು ಬಿಡಲಿಲ್ಲ. ಜನರು ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಈಗೇನಿದ್ದರೂ ಜನರ ಋಣ ತೀರಿಸುವ ಕೆಲಸ ನಮ್ಮದು. ಪಾಪ ಅವರಿಗೆ ಅನುಭವ ಇದೆ ಮಾತನಾಡುತ್ತಾರೆ. ಅಣ್ಣ ಹೇಳಿದ್ದು ತಮ್ಮ ಕೇಳಬೇಕು ಎಂದು ಮತ್ತೊಮ್ಮೆ ವ್ಯಂಗ್ಯದ ಮಾತುಗಳ ಮೂಲಕ ಕುಮಾರಸ್ವಾಮಿ ಅವರನ್ನು ತಿವಿದರು.

ಇದನ್ನೂ ಓದಿ: HD Kumaraswamy : ಕುಮಾರಸ್ವಾಮಿ ರಿಟರ್ನ್ಸ್‌ ವಿತ್‌ ಚಾರ್ಜ್‌ಶೀಟ್‌; ಸರ್ಕಾರದ ಮೇಲೆ ಮಿಡ್‌ನೈಟ್‌ ಪ್ರಹಾರ!

Exit mobile version