Site icon Vistara News

Reservation fight : ಯಾವ ಸ್ವಾಮೀಜಿಗಳಿಗೂ ಒತ್ತಡ ಹಾಕಿಲ್ಲ, ಪ್ರಮಾಣ ಮಾಡುತ್ತೇನೆ ಎಂದ ಸಿಎಂ, ಡಿಕೆಶಿಗೆ ತಿರುಗೇಟು

Bommai swameeji

#image_title

ಶಿಗ್ಗಾಂವಿ (ಹಾವೇರಿ): ಹೊಸ ಮೀಸಲಾತಿ ನೀತಿಯನ್ನು (Reservation fight) ಒಪ್ಪಿಕೊಳ್ಳುವಂತೆ ಆದಿಚುಂಚನಗಿರಿ ಮಠ ಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಕೂಡಲ ಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಶ್ರೀಗಳಿಗೆ ಒತ್ತಡ ಹಾಕಲಾಗಿದೆ, ಹೆದರಿಸಲಾಗಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಆರೋಪವನ್ನು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ ಮತ್ತು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಶಿಗ್ಗಾಂವಿಯಲ್ಲಿ ನಡೆದ ಪಂಚಮಸಾಲಿ ಸಮಾಜದ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ ಅವರು, ನಾವು ನ್ಯಾಯ ಸಮ್ಮತವಾಗಿ ಮೀಸಲಾತಿ ತೀರ್ಮಾನ ಮಾಡಿದ್ದೇವೆ. ಯಾರಿಗೂ ಒತ್ತಡ ಹೇರುವ ಪ್ರಶ್ನೆಯೇ ಇಲ್ಲ. ಪ್ರಮಾಣ ಮಾಡಿ ಹೇಳುತ್ತೇನೆ ನಾನು ಯಾರಿಗೂ ಒತ್ತಡ ಹಾಕಿಲ್ಲ ಎಂದು ಹೇಳಿದರು.

ʻʻಸ್ವಾಮೀಜಿಗಳ ಮೇಲೆ ಮುಖ್ಯಮಂತ್ರಿ ಒತ್ತಡ ಹಾಕಿದ್ದಾರೆ ಎಂದು ವಿರೋಧ ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ಆದರೆ, ಅಂಥ ಕೆಲಸ ಮಾಡುವ ಅಗತ್ಯ ನನಗಿಲ್ಲʼʼ ಎಂದು ಹೇಳಿದರು. ನಿಜವೆಂದರೆ ಡಿ.ಕೆ. ಶಿವಕುಮಾರ್‌ ಅವರೇ ಈ ಮೀಸಲಾತಿ ಒಪ್ಪದಂತೆ ಒತ್ತಡ ಹೇರಿರಬಹುದು ಎಂದರು.

ʻʻಈ ಬೇಡಿಕೆಗೆ ಸಂಬಂಧಿಸಿ ಹರಿಹರ ಪೀಠದ ವಚನಾನಂದ ಶ್ರೀಗಳು ಸದಾ ಕಾಲ ನಮ್ಮ ಜೊತೆಗೆ ಚರ್ಚೆ ಮಾಡಿಕೊಂಡು ಬಂದಿದ್ದಾರೆ. ಈ ವಿಚಾರದಲ್ಲಿ ಬಹಳ ದೊಡ್ಡ ಪಾತ್ರ ವಚನಾನಂದ ಶ್ರೀಗಳದ್ದೂ ಇದೆ. ಮತ್ತೊಬ್ಬ ಗುರುಗಳು ಹೋರಾಟ ಮಾಡಿದ್ರು, ಆ ಹೋರಾಟದ ಒತ್ತಡವೂ ಇತ್ತುʼʼ ಎಂದು ಹೇಳಿದ ಅವರು, ರಾಜಕಾರಣದಿಂದಲೆ ಮೀಸಲಾತಿ ತಡವಾಗಿದೆ ಎಂದು ಕಾಂಗ್ರೆಸ್‌ ಮೇಲೆ ಆರೋಪ ಮಾಡಿದರು.

ನಾನು ಯಾರಿಗೂ ಹೆದರುವುದಿಲ್ಲ

ʻʻಎಲ್ಲಾ ಸಮುದಾಯದವರಿಗೆ ನ್ಯಾಯ ಕೊಡಬೇಕು ಎನ್ನುವುದು ನಮ್ಮ ನಿಲುವುದ. ಇದಕ್ಕಾಗಿ ಯಾದಿಟ್ಟ ಕ್ರಮ ಕೈಗೊಳ್ಳಲು ಬೊಮ್ಮಾಯಿ ಹಿಂದೆ ಮುಂದೆ ನೊಡಲ್ಲ. ನಾನು ಯಾರಿಗೂ ಹೆದರಲ್ಲʼʼ ಎಂದರು.

ʻʻಮೀಸಲಾತಿ ಪರಿಷ್ಕರಣೆ, ಒಳಮೀಸಲಿಗೆ ಹಿಂದೆ 2016ರಲ್ಲೇ ಅರ್ಜಿ ಹಾಕಲಾಗಿತ್ತು. ಆಗ ಕಾಂಗ್ರೆಸ್‌ ಸರಕಾರ ಈ ಅರ್ಜಿಯನ್ನು ತಿರಸ್ಕಾರ ಮಾಡಿತ್ತು. ಆವಾಗ ಇವರೆಲ್ಲ ಬಾಯಲ್ಲಿ ಕಡುಬು ತುಂಬಿಕೊಂಡು ಕುಳಿತಿದ್ದರುʼʼ ಎಂದು ಹೇಳಿದ ಬೊಮ್ಮಾಯಿ, ʻʻಇದು ಒಂದು ಸಮುದಾಯದ ಪ್ರಶ್ನೆ ಅಲ್ಲ. ಚುನಾವಣೆಗಾಗಿ ಚಿಲ್ಲರೆ ರಾಜಕಾರಣ ಮಾಡೋದು ನಮ್ಮ ಡಿಕ್ಷನರಿಯಲ್ಲಿಲ್ಲ. ಜೇನುಗೂಡಿಗೆ ಕೈಹಾಕಿ, ಜೇನು ಕಡಿದರೂ ಪರವಾಗಿಲ್ಲ ಅಂತಾ ನ್ಯಾಯ ಕೊಟ್ಟಿದ್ದೇನೆʼʼ ಎಂದು ಬೊಮ್ಮಾಯಿ ನುಡಿದರು.

ʻʻನಾನು ಕೂಡಾ ಅವರಂತೆ ಮುಂದಕ್ಕೆ ಹಾಕಬಹುದಿತ್ತು. ಮುಂದಕ್ಕೆ ಹಾಕುವುದು ನನ್ನ ಜಾಯಮಾನ ಅಲ್ಲ. ನಾನು ಸಮಸ್ಯೆ ಬಗೆಹರಿಸುವ ವ್ಯಕ್ತಿʼʼ ಎಂದು ಅಬ್ಬರಿಸಿದರು ಬೊಮ್ಮಾಯಿ.

ʻʻಈ ಸಮುದಾಯದ ಋಣ ನನ್ನ ಮೇಲಿದೆ. ಹಲವು ನಿಗಮಗಳನ್ನ ಮಾಡಿದ್ದೇನೆ. ಸರ್ವರಿಗು ಸಮಪಾಲು ತತ್ವದಡಿ ಕೇಲಸ ಮಾಡುತ್ತಿದ್ದೇನೆ. ಇದು ಅಭಿವೃದ್ಧಿ ಪಯಣ, ಇಲ್ಲಿಗೆ ನಿಲ್ಲುವುದಿಲ್ಲ, ಮುಂದುವರಿಯುತ್ತದೆʼʼ ಎಂದು ಹೇಳಿದರು ಬೊಮ್ಮಾಯಿ. ಸಚಿವರಾದ ಸಿ.ಸಿ ಪಾಟೀಲ್, ಶಂಕರ ಪಾಟೀಲ್ ಮುನೇನಕೊಪ್ಪ ನನ್ನ ಜತೆ ಗಟ್ಟಿಯಾಗಿ ನಿಂತಿದ್ದಾರೆ ಎಂದು ಹರ್ಷಿಸಿದರು.

ಇದನ್ನೂ ಓದಿ : Reservation : ಮೀಸಲಾತಿ ಒಪ್ಪಿಕೊಳ್ಳಲು ಸ್ವಾಮೀಜಿಗಳಿಗೆ 25 ಬಾರಿ ಫೋನ್‌ ಮಾಡಿ ಒತ್ತಡ: ಡಿಕೆಶಿ ಆರೋಪ, ಬಿಜೆಪಿ ತಿರುಗೇಟು

Exit mobile version