ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪಕ್ಷ ಹೀನಾಯ ಸ್ಥಿತಿಗೆ ಬರಲು ಬೇರೆ ಪಕ್ಷದಿಂದ ಬಂದವರು ಕಾರಣ ಎಂಬ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಅವರು ಪದೇಪದೆ ಸ್ಪಷ್ಟೀಕರಣ ನೀಡಬೇಕಾದ ಪರಿಸ್ಥಿತಿ ಬಂದಿದೆ. ಶನಿವಾರ ಅವರು ನೇರವಾಗಿ ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಗೇ ಬಂದು ಮಾಧ್ಯಮ ಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.
ʻʻಹುಬ್ಬಳ್ಳಿಯಲ್ಲಿ ನಾನು ಮತ್ತು ಪ್ರಹ್ಲಾದ್ ಜೋಶಿ ಮಾತನಾಡಿದ್ದೆವು. ಆದರೆ, ನಾವು ಬಾಂಬೆ ಬಾಯ್ಸ್ ಬಗ್ಗೆ ಮಾತನಾಡಲಿಲ್ಲ. ಕಾಂಗ್ರೆಸ್ ಅಶಿಸ್ತು ನಮ್ಮಲ್ಲು ಬೀಸ್ತಿದೆ ಎಂದಿದ್ದು ಹೌದು. ಅದನ್ನ ಕಾಂಗ್ರೆಸ್, ಜೆಡಿಎಸ್‌ನವರ ಬಗ್ಗೆ ತಳುಕು ಹಾಕಲಾಯ್ತು. ಒಂದು ಮಾಧ್ಯಮದಲ್ಲಿ ಬಾಂಬೆ ಬಾಯ್ಸ್ (Bombay Boys) ಬಗ್ಗೆ ಹೇಳಿದ್ರು. ಈಶ್ವರಪ್ಪ ಗರಂ ಅಂತ ಸುದ್ದಿ ಹಾಕ್ತಿದ್ರು. ಆದರೆ ನಾನು ಆರೀತಿ ಎಲ್ಲೂ ಹೇಳಲಿಲ್ಲʼʼ ಎಂದು ಈಶ್ವರಪ್ಪ ಹೇಳಿದರು.
ಕಾಂಗ್ರೆಸ್‌ನಿಂದ ಹಲವಾರು ಮಂದಿ ವಲಸೆ ಬಂದ ಬಳಿಕ ಪಕ್ಷದಲ್ಲಿ ಅಶಿಸ್ತು ಜಾಸ್ತಿಯಾಯಿತು ಎಂದು ಕೆ.ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ ಎಂಬ ಸುದ್ದಿ ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತು. ಬಿಜೆಪಿ ಸೇರಿದ್ದ ನಾಯಕರಲ್ಲಿ ಹಲವರು ಈಶ್ವರಪ್ಪ ಯಾಕೆ ಹೀಗೆ ಹೇಳಿದರು ಎಂದು ಅಚ್ಚರಿಪಟ್ಟರು ಮತ್ತು ಆಕ್ರೋಶವನ್ನೂ ತೋಡಿಕೊಂಡರು. ಪಕ್ಷದ ಹಲವು ನಾಯಕರು ಈ ವಲಸೆ ನಾಯಕರ ಬಗ್ಗೆ ಅಭಿಮಾನದಿಂದ ಮಾತನಾಡಿದರು. ಈಶ್ವರಪ್ಪ ಅವರ ಹೇಳಿಕೆ ಪಕ್ಷದ ವರ್ಚಸ್ಸಿಗೆ ಇನ್ನಷ್ಟು ಘಾಸಿಯುಂಟು ಮಾಡಿದೆ ಎಂಬ ಹಿನ್ನೆಲೆಯಲ್ಲಿ ಸ್ಪಷ್ಟನೆಗಳನ್ನು ನೀಡಲಾಗುತ್ತಿದೆ.
ಅವರಿಂದಲೇ ಸರ್ಕಾರ ಬಂದಿದ್ದು
ʻʻನಾನು ಬಾಂಬೆ ಬಾಯ್ಸ್ ಅಂತ ಶಬ್ದವನ್ನೂ ಬಳಸಿಲ್ಲ. ಅವರ ಬಗ್ಗೆ ಎಲ್ಲೂ ಮಾತನಾಡಲಿಲ್ಲ. ಕಾಂಗ್ರೆಸ್, ಜೆಡಿಎಸ್‌ನಿಂದ ಬಂದ ನಾಯಕರು ಯಾರೂ ಅಶಿಸ್ತಿನಿಂದ ವರ್ತಿಸಲಿಲ್ಲ. ನಾನು ಯಾವುದೇ ಆಪಾದನೆ ಮಾಡಿಲ್ಲʼʼ ಎಂದು ಹೇಳಿದ ಅವರು, ಅವರು ಬಂದಿದ್ದರಿಂದಲೇ ಬಿಜೆಪಿ ಸರ್ಕಾರ ಬಂದಿದ್ದು ಎಂದು ಸ್ಪಷ್ಟಪಡಿಸಿದರು.
ಕೆಟ್ಟ ಕನಸು ಬಿಟ್ಟು ಚುನಾವಣೆಗೆ ಸಿದ್ಧರಾಗೋಣ
ʻʻಚುನಾವಣೆ ನಂತರ ನಮ್ಮ ಪಕ್ಷದಲ್ಲಿ ಕೆಲವರು ಹೇಳಿಕೆ ಮೇಲೆ ಹೇಳಿಕೆ ಕೊಡ್ತಿದ್ದಾರೆ. ಆದರೆ, ಲಕ್ಷ ಲಕ್ಷ ಕಾರ್ಯಕರ್ತರು ಪಕ್ಷ ಕಟ್ಟಿದ್ದಾರೆ. ಅವರಿಗೆ ಭ್ರಮನಿರಸನ ಆಗದಂತೆ ನೋಡಿಕೊಳ್ಳಬೇಕುʼʼ ಎಂದು ಹೇಳಿದ ಈಶ್ವರಪ್ಪ, ಗ್ಯಾರಂಟಿಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಚುನಾವಣೆ ಸೋಲನ್ನನಾವು ಒಪ್ಪಿಕೊಳ್ಳಬೇಕು. ಸೋಲನ್ನು ಕೆಟ್ಟ ಕನಸು ಅಂತ ಒಪ್ಪಿಕೊಳ್ಳಬೇಕು. ಲೋಕಸಭೆ ಚುನಾವಣೆಗೆ ನಾವು ರೆಡಿಯಾಗಬೇಕುʼʼ ಎಂದರು.
ʻʻಅಲ್ಲಿ ಇಲ್ಲಿ ಕೆಲವರು ಮಾತನಾಡುವುದು ಮುಂದುವರಿದಿದೆ. ಈಗ ಎಲ್ಲರೂ ಒಟ್ಟಿಗೆ ಕುಳಿತು ಚರ್ಚೆ ಮಾಡಿದ್ದಾರೆ. ಗೊಂದಲದ ಗೂಡು ಇಂದಿಗೆ ಮುಕ್ತಾಯವಾಗಿದೆʼʼ ಎಂದ ಅವರು, ಯಾರೇ ಆದರೂ ಅಸಮಾಧಾನವಿದ್ದರೆ ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳಿʼʼ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಮೇಲೆ ಕೆಂಡಾಮಂಡಲ
ʻʻಕಾಂಗ್ರೆಸ್ 200 ಯೂನಿಟ್ ವಿದ್ಯುತ್ ಫ್ರೀ ಕೊಡುತ್ತೇವೆ ಎಂದು ಹೇಳಿದೆ. ಆದರೆ, ಇವತ್ತು ವಿದ್ಯುತ್ ಬಿಲ್ ಏರಿಕೆಯಾಗಿದೆ. ಕೈಗಾರಿಕೋದ್ಯಮಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಸ್ತುಗಳ ದರ ದುಬಾರಿಯಾಗಿದೆ. ಮನೆ ಯಜಮಾನಿಗೆ 2000 ರೂ. ಇನ್ನೂ ಕೊಟ್ಟಿಲ್ಲ. 10 ಕೆ.ಜಿ ಅಕ್ಕಿ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ” ಎಂದು ನುಡಿದರು.
ಇದನ್ನೂ ಓದಿ: MP Renukacharya : BSYಗೆ ವಯಸ್ಸಾಯ್ತು ಅಂತ ಕಿತ್ತಾಕಿದ್ರಲ್ವಾ, ಈಗ ರಾಜ್ಯ ಸುತ್ತಲು ಬೇಕಾ; ಮತ್ತೆ ರೇಣುಕಾ ಗುಡುಗು
ʻʻನಾವು ಸೋಲನ್ನು ಒಪ್ಪಿಕೊಳ್ತೇವೆ. ಮೋಸ ಮಾಡಿಯೇ ಅಧಿಕಾರಕ್ಕೆ ಬಂದಿದ್ದು ಎಂದು ಕಾಂಗ್ರೆಸ್‌ನವರು ಒಪ್ಪಿಕೊಳ್ಳಬೇಕು. ಭರವಸೆಗಳನ್ನು ಈಡೇರಿಸಬೇಕು. ಇಲ್ಲವಾದರೆ ನಾವು ಬೀದಿಗಿಳಿಯುತ್ತೇವೆ. ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸಭೆಯ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸುತ್ತೇವೆʼʼ ಎಂದು ಹೇಳಿದರು ಈಶ್ವರಪ್ಪ.