Site icon Vistara News

Power Point with HPK : ಅಡಿಕೆ ಟಾಸ್ಕ್‌ಫೋರ್ಸ್‌ ರಚನೆಗೆ ಸಿಎಂಗೆ ಮನವಿ ಮಾಡಿದ್ದೇನೆ: ಆರಗ ಜ್ಞಾನೇಂದ್ರ

Araga Gyanendra in Power Point with HPK

ಬೆಂಗಳೂರು: ಅಡಿಕೆಯು ನಮ್ಮ ರಾಜ್ಯದ ವಾಣಿಜ್ಯ ಬೆಳೆಯಾಗಿದ್ದು, ಹೆಚ್ಚಿನ ತೆರಿಗೆಯನ್ನು ಕೊಡುವ ಬೆಳೆಯಾಗಿದೆ. ಈ ಹಿನ್ನೆಲೆಯಲ್ಲಿ ಇದರ ಬಲವರ್ಧನೆ ಆಗಬೇಕು. ಅಲ್ಲದೆ, ಅಡಿಕೆ ಬೆಳೆಗೆ ಕಾಣಿಸಿಕೊಂಡ ಎಲೆ ಚುಕ್ಕೆ ರೋಗ ಹಾಗೂ ಹಳದಿ ರೋಗಗಳ ಬಗ್ಗೆ ಸಂಶೋಧನೆಗಾಗಿ ನಮ್ಮ ಸರ್ಕಾರ ತೆಗೆದಿಟ್ಟಿದ್ದ 10 ಕೋಟಿ ರೂಪಾಯಿಯನ್ನು ಈಗಿನ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ತೆಗೆದು ಹಾಕಿದೆ. ಅಲ್ಲದೆ, ಟಾಸ್ಕ್‌ಫೋರ್ಸ್‌ ಅನ್ನು ಸಹ ಬರ್ಖಾಸ್ತು ಮಾಡಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Former Home Minister Araga Jnanendra) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಎಲೆ ಚುಕ್ಕೆ ರೋಗ ಹಾಗೂ ಹಳದಿ ರೋಗವು ನಮ್ಮ ರಾಜ್ಯದಲ್ಲಿ ವ್ಯಾಪಕವಾಗಿ ಬಾಧಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಮಲೆನಾಡಿನಲ್ಲಿ ಸಮಸ್ಯೆ ಹೆಚ್ಚಿದೆ. ಈ ಕಾರಣಕ್ಕಾಗಿ ವಿಶೇಷ ಅಧ್ಯಯನ ಮಾಡಲು ನಮ್ಮ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರವು 10 ಕೋಟಿ ರೂಪಾಯಿಯನ್ನು ಕಳೆದ ಬಜೆಟ್‌ನಲ್ಲಿ ತೆಗೆದಿರಿಸಿತ್ತು. ಆದರೆ, ಈಗ ಅದನ್ನು ಸಿದ್ದರಾಮಯ್ಯ ಅವರ ಸರ್ಕಾರ ತೆಗೆದುಹಾಕಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಚಾರವನ್ನು ತಿಳಿಸಿದ್ದೇವೆ ಎಂದು ತಿಳಿಸಿದರು.

ಇದರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ. ಈ ಎಲ್ಲದರ ಹಿಂದೆ ಅಡಿಕೆ ಟಾಸ್ಕ್‌ಫೋರ್ಸ್‌ ಬಹಳವಾಗಿಯೇ ಕೆಲಸ ಮಾಡಿದೆ. ಈಚೆಗೆ ಅಡಿಕೆ ಬೆಳೆ ಬೆಳೆಯುವ ಭಾಗದ ಶಾಸಕರ ಸಭೆ ನಡೆಸಿದ್ದೇವೆ. ಅಲ್ಲಿ ಪಕ್ಷಾತೀತ ತೀರ್ಮಾನವನ್ನು ಕೈಗೊಂಡಿದ್ದೇವೆ. ಅಡಿಕೆ ಪಕ್ಷವನ್ನು ಮಾಡಬೇಕು ಎಂಬುದು ನಮ್ಮ ಇಂಗಿತವಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಮೇಲೆ ಅಡಿಕೆ ಕಾರ್ಯಪಡೆ ಬರ್ಖಾಸ್ತು ಆಗಿದೆ. ಈ ಸಂಬಂಧ ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಅಡಿಕೆ ಕಾರ್ಯಪಡೆ ಎಂಬುದು ಇರಬೇಕು. ಯಾರನ್ನೇ ಬೇಕಾದರೂ ಅದಕ್ಕೆ ನೇಮಿಸಿ. ಆದರೆ, ಅಡಿಕೆ ಬಗ್ಗೆಯೇ ಯೋಚನೆ ಮಾಡುವ ವಿಂಗ್‌ ಸರ್ಕಾರದ ಪರವಾಗಿ ಇರಬೇಕು. ಜತೆಗೆ ನಮಗೆ ದೊಡ್ಡ ತೆರಿಗೆಯನ್ನು ತಂದು ಕೊಡುವ ಬೆಳೆಯಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಅಡಿಕೆ ಬೆಳೆಗಾರರಿಗೆ ಹರಿಪ್ರಕಾಶ್‌ ಕೋಣೆಮನೆ ಬೆಂಬಲ ನೆನೆದ ಆರಗ

ಅಡಿಕೆ ಟಾಸ್ಕ್‌ ಫೋರ್ಸ್‌ನಲ್ಲಿ ನಿಮ್ಮ (ಹರಿಪ್ರಕಾಶ್‌ ಕೋಣೆಮನೆ) ಕೊಡುಗೆ ಸಹ ಸಾಕಷ್ಟಿದೆ. ಅಡಿಕೆ ಬೆಳೆಗಾರರ ಸಮಸ್ಯೆಗೆ ನೀವು ಸ್ಪಂದನೆ ಮಾಡಿದ ರೀತಿಯನ್ನು ಬೆಳೆಗಾರರು ಸದಾ ನೆನಪಿನಲ್ಲಿಡುತ್ತಾರೆ ಎಂದು ಆರಗ ಜ್ಞಾನೇಂದ್ರ ಇದೇ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: Power Point with HPK : ಕಾಂಗ್ರೆಸ್ಸಿಗರ ಮಕ್ಕಳ, ಮೊಮ್ಮೊಕ್ಕಳ ವಿಡಿಯೊ ಮಾಡಿದ್ರೆ ಸುಮ್ಮನಿರ್ತಾರಾ?: ಆರಗ

ಅಡಿಕೆಯಿಂದ ಕ್ಯಾನ್ಸರ್‌ ಬಾರದು

ನಾನು ಸಂಶೋಧನಾ ವರದಿಯೊಂದನ್ನು ತರಿಸಿದ್ದೆ. ಅದರಲ್ಲಿ ಅಡಿಕೆಯಿಂದ ಕ್ಯಾನ್ಸರ್‌ ಬಾರದು. ಅದರಲ್ಲಿ ಔಷಧೀಯ ಗುಣಗಳಿವೆ ಎಂಬುದು ಸಾಬೀತಾಗಿದೆ. ಅದನ್ನು ನಾವು ಸುಪ್ರೀಂ ಕೋರ್ಟ್‌ ಮುಂದೆ ಸಹ ಇಟ್ಟಿದ್ದೆವು. ಒಟ್ಟಾರೆಯಾಗಿ ನಾವು ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಶ್ರಮ ಹಾಕುತ್ತಿದ್ದೇವೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

Exit mobile version