ರಾಮನಗರ: ನೀವು ನನ್ನನ್ನು ರಾಜಕೀಯವಾಗಿ ಬೆಳೆಸಿ, ಸಾಕಿದ್ದೀರಿ. ಎಚ್.ಡಿ.ದೇವೇಗೌಡರ ವಿರುದ್ಧ ಸೋತೆ, ಬಳಿಕ ಎಲ್ಲಾ ಚುನಾವಣೆಯಲ್ಲೂ ಗೆದ್ದಿದ್ದೇನೆ. ನಿಮಗೆಲ್ಲ ನಾನು ಸಿಎಂ ಆಗಬೇಕು ಎಂಬ ಆಸೆ ಇತ್ತು. ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತೆ, ಮುಂದೆ ಅವಕಾಶ ಸಿಗುತ್ತೆ ಎಂದು ಪರೋಕ್ಷವಾಗಿ ಮುಂದಿನ ಮುಖ್ಯಮಂತ್ರಿ ತಾವೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿರುವುದು ಕಂಡುಬಂದಿದೆ.
ಜಿಲ್ಲೆಯ ಕನಕಪುರ ತಾಲೂಕಿನ ಸ್ವಗ್ರಾಮ ದೊಡ್ಡಾಲಹಳ್ಳಿಯಲ್ಲಿ ಕಾರ್ಯಕರ್ತರು ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ದೊಡ್ಡ ಸಂಖ್ಯೆಯಲ್ಲಿ ನೀವು ಬಂದು ಆಶೀರ್ವಾದ ಮಾಡಿದ್ದೀರಿ. ನಿಮಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ಚುನಾವಣೆಯಲ್ಲಿ ನನ್ನನ್ನು ದಾಖಲೆಯ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೀರಿ. ಅಧಿಕಾರ ನಶ್ವರ, ನಾವು ಮಾಡುವ ಕೆಲಸ ಅಜರಾಮರ. ಮುಂದೆ ಅವಕಾಶ ಸಿಗುತ್ತೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಸಿಎಂ ಆಗುವ ಇಚ್ಛೆ ವ್ಯಕ್ತಪಡಿಸಿದರು.
ಹೈಕಮಾಂಡ್ ತೀರ್ಮಾನಕ್ಕೆ ತಲೆ ಬಾಗಿದ್ದೇನೆ. ನನ್ನ ಅಧ್ಯಕ್ಷತೆಯಲ್ಲಿ ಬಹುಮತ ಬಂದಿರುವುದು ಖುಷಿ ಕೊಟ್ಟಿದೆ.
ನಾನು ಕೆಪಿಸಿಸಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಸರಿಯಾಗಿ ನಿದ್ದೆ ಮಾಡಿಲ್ಲ. ಊಟ, ತಿಂಡಿ ಬಿಟ್ಟು ಕೆಲಸ ಮಾಡಿದ್ದೇನೆ. ನನ್ನನ್ನು ಕಟ್ಟಿಹಾಕಲು ಬಿಜೆಪಿಯವರು ಕೊಡಬಾರದ ಕಿರುಕುಳ ಕೊಟ್ಟರು. ಎಲ್ಲವನ್ನೂ ಎದುರಿಸಿ ನಿಮ್ಮ ಮುಂದೆ ಬಂದು ನಿಂತಿದ್ದೇನೆ. ನಮ್ಮ ಕೆಲವು ಆಸ್ತಿಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ದಾನ ಮಾಡಿದ್ದೇನೆ. ಈ ಭಾಗದ ಯಾರೂ ನಿಮ್ಮ ಆಸ್ತಿ ಮಾರಿಕೊಳ್ಳ ಬೇಡಿ. ಮುಂದೆ ಈ ಭಾಗದ ಜಮೀನಿಗೆ ಒಳ್ಳೆಯ ಬೆಲೆ ಬರುತ್ತೆ ಎಂದು ಹೇಳಿದರು.
ಇದನ್ನೂ ಓದಿ | ಕಳೆದ ಲೋಕಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದ್ದು ನಾವೇ: ಶಾಸಕ ನರೇಂದ್ರಸ್ವಾಮಿ
ರಾಜ್ಯದ ಜನರಿಗೆ ಐದು ಗ್ಯಾರಂಟಿಗಳ ಕೊಟ್ಟಿದ್ದೇವೆ. ನಿಮ್ಮ ಮನೆಗಳು ಉಜ್ವಲವಾಗಿ ಬೆಳಗಬೇಕು. ಅದಕ್ಕಾಗಿ ಗೃಹಜ್ಯೋತಿ ಯೋಜನೆ ನೀಡಿದ್ದೇವೆ. ಈ ತಿಂಗಳು ನೀವೇ ಬಿಲ್ ಕಟ್ಟಬೇಕು. ಮುಂದಿನ ತಿಂಗಳು ನೀವು ಕರೆಂಟ್ ಕಟ್ಟಂಗಿಲ್ಲ. ಹಾಗೆಂದು ಬೇಕಾಬಿಟ್ಟಿ ಉಪಯೋಗಿಸುವ ಹಾಗಿಲ್ಲ. ನೀವು ಉಪಯೋಗಿಸುವ ವಾರ್ಷಿಕ ಸರಾಸರಿ ನೋಡಿ ಉಚಿತ ಕೊಡುತ್ತೇವೆ. ಕಮರ್ಷಿಯಲ್ ವಿದ್ಯುತ್ ಬಳಸುವವರು ಕರೆಂಟ್ ಬಿಲ್ ಕಟ್ಟಬೇಕು. ಗೃಹ ಲಕ್ಷ್ಮಿ ಯೋಜನೆ ಮೂಲಕ 2 ಸಾವಿರ ದುಡ್ಡು ಬರುತ್ತೆ. ಎಲ್ಲರೂ ಅರ್ಜಿ ಹಾಕಿ. ಯಾರೂ ಒಂದು ರೂಪಾಯಿ ಲಂಚ ಕೊಡಬೇಡಿ. ಅಧಿಕಾರಿಗಳು ಏನಾದರೂ ಲಂಚ ಕೇಳಿದರೆ ನನಗೆ ಪತ್ರ ಬರೆಯಿರಿ ಎಂದು ಹೇಳಿದರು.
ಆಗಸ್ಟ್ 15 ಕ್ಕೆ 2 ಸಾವಿರ ರೂ. ನೀಡುತ್ತೇವೆ. ಮುಂದಿನ ತಿಂಗಳಿಂದ 10 ಕೆ.ಜಿ ಅಕ್ಕಿ ಕೊಡುತ್ತೇವೆ. ಜೂ. 11ರಿಂದ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರಯಾಣ ಸಿಗಲಿದೆ. ನನಗೆ ಹೆಣ್ಣುಮಕ್ಕಳು ಮೇಲೆ ಮಾತ್ರ ನಂಬಿಕೆ. ಮುಂದಿನ ಎಲ್ಲಾ ಯೋಜನೆಗಳನ್ನು ಹೆಣ್ಣುಮಕ್ಕಳಿಗೆ ಕೊಡುತ್ತೇವೆ. ಯಾಕೆಂದರೆ ಗಂಡುಮಕ್ಕಳು ಏನೇ ಮಾಡಿದರೂ ಮನೆಯಲ್ಲಿ ಸಹಿಸಿಕೊಳ್ಳುವುದು ಹೆಣ್ಣು ಮಕ್ಕಳು. ಹಾಗಾಗಿ ಅವರ ಮೇಲೆ ನನಗೆ ನಂಬಿಕೆ ಜಾಸ್ತಿ. ಪದವಿ ವಿದ್ಯಾರ್ಥಿಗಳಿಗೆ ಯುವ ನಿಧಿ 3 ಸಾವಿರ ಕೊಡುತ್ತೇವೆ. ಎರಡು ವರ್ಷದಲ್ಲಿ ಕೆಲಸ ಹುಡುಕಿಕೊಳ್ಳಬೇಕು, ಸುಮ್ಮನೆ ಕೂತು ಸೋಮಾರಿಗಳಾಗಬೇಡಿ ಎಂದು ಸೂಚಿಸಿದರು.
ತಾಯಿ ಆರೋಗ್ಯ ವಿಚಾರಿಸಿದ ಉಪ ಮುಖ್ಯಮಂತ್ರಿ ಡಿಕೆಶಿ
ಕನಕಪುರ ತಾಲೂಕು ಕೋಡಿಹಳ್ಳಿಯಲ್ಲಿರುವ ತಾಯಿ ಗೌರಮ್ಮ ಅವರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ವೇಳೆ ಮಗನಿಗೆ ತಾಯಿ ಚಹಾ ಮಾಡಿಸಿಕೊಟ್ಟರು. ಕಾಫಿ ಬಿಸಿಯಿದ್ಯಾ ಆರಿಸಿಕೊಡುತ್ತೇನೆ ಎಂದು ಗೌರಮ್ಮ ಕೇಳಿದರು. ತುಂಬಾ ಆಯಾಸವಾಗಿರುತ್ತೀಯಾ, ಬೆಂಗಳೂರಿಗೆ ಹೋಗುತ್ತೀಯಾ ಅಂದುಕೊಂಡೆ ಎಂದು ಮಗನ ಜತೆಗೆ ಗೌರಮ್ಮ ಪ್ರೀತಿಯ ಮಾತುಗಳನ್ನಾಡಿದ್ದು ಕಂಡುಬಂತು. ಇದಕ್ಕೂ ಮುನ್ನಾ ಕಬ್ಬಾಳು ಗ್ರಾಮದಲ್ಲಿ ಕುಲದೇವತೆ ಕಬ್ಬಾಳಮ್ಮ ದೇವಿಗೆ ಡಿಕೆಶಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ 101 ಈಡುಗಾಯಿ ಒಡೆಯುವ ಮೂಲಕ ಹರಕೆ ತೀರಿಸಿದರು.