ಮೈಸೂರು: ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ಚಿರತೆ ದಾಳಿಯಿಂದ (leopard attack) 11 ವರ್ಷದ ಬಾಲಕ ಬಲಿಯಾಗಿರುವ ಪ್ರಕರಣಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮೃತ ಬಾಲಕನ ಅಜ್ಜ ಆಕ್ರೋಶಗೊಂಡಿದ್ದು, ತಾಲೂಕಿನಲ್ಲಿ ಚಿರತೆ ದಾಳಿಯಿಂದ ಇನ್ನು ಒಂದೇ ಒಂದು ಸಾವಾದರೂ ನಾನು ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಮೃತ ಬಾಲಕನ ಅಜ್ಜ ಅರಣ್ಯ ಸಂರಕ್ಷಣಾಧಿಕಾರಿಗೆ ಬೆದರಿಕೆಯೊಡ್ಡಿದ್ದಾರೆ.
ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ವಿರುದ್ಧ ಅಪ್ಪಯ್ಯಗೌಡ ಎಂಬುವವರು ಆಕ್ರೋಶವನ್ನು ಹೊರಹಾಕಿದ್ದಾರೆ. ಚಿರತೆ ಓಡಾಡುತ್ತಿದೆ ಎಂದು ಎರಡು ಬಾರಿ ದೂರು ಕೊಟ್ಟಿದ್ದೇನೆ. ದೂರು ಕೊಟ್ಟರೂ ಕ್ರಮ ತೆಗೆದುಕೊಂಡಿಲ್ಲ. ತಾಲೂಕಿನಲ್ಲಿ ಇಂತಹದ್ದೇ ಇನ್ನೊಂದು ಪ್ರಕರಣ ನಡೆದರೆ, ನಿನ್ನನ್ನೇ ಕೊಲೆ ಮಾಡುತ್ತೇನೆ ಎಂದು ಗುಡುಗಿದ್ದಾರೆ.
ಇದನ್ನೂ ಓದಿ: Covid vaccine : ಭಾರತ್ ಬಯೊಟೆಕ್‌ನಿಂದ ಮೂಗಿನ ಮೂಲಕ ತೆಗೆದುಕೊಳ್ಳುವ ಕೋವಿಡ್ ಲಸಿಕೆ ಜನವರಿ 26ಕ್ಕೆ ಬಿಡುಗಡೆ ನಿರೀಕ್ಷೆ
ಈಗಾಗಲೇ ತಾಲೂಕಿನಲ್ಲಿ ಚಿರತೆ ದಾಳಿಯಿಂದ ನಾಲ್ವರು ಬಲಿಯಾಗಿದ್ದಾರೆ. ಆದರೆ, ನಮಗೆ ಸಂಸದರಾಗಿರುವ ವಿ. ಶ್ರೀನಿವಾಸ್ ಪ್ರಸಾದ್ ಆಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್.ಟಿ. ಸೋಮಶೇಖರ್ ಅವರಾಗಲೀ ಭೇಟಿ ನೀಡಿಲ್ಲ. ಇವರಿಬ್ಬರೂ ಬರಲು ಇನ್ನೆಷ್ಟು ಜನರ ಬಲಿ ಬೇಕು ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ಅಧಿಕಾರಿಗಳು ಜವಾಬ್ದಾರಿಯುತ ಕೆಲಸ ಮಾಡಲಿ- ಮೃತ ಬಾಲಕನ ತಂದೆ
ಶನಿವಾರ ಸಂಜೆ ನನ್ನ ಮಗ ಆಟ ಆಡಲೆಂದು ಹೊರಗೆ ಹೋಗಿದ್ದ. ಎಷ್ಟು ಹೊತ್ತಾದರೂ ಅವನು ಮನೆಗೆ ಬಂದಿಲ್ಲ. ವಿಚಾರಿಸಿದಾಗ ಯಾರೋ ಚಿರತೆ ನಾಯಿಯನ್ನು ಎಳೆದುಕೊಂಡು ಹೋಗಿದೆ ಎಂದು ಹೇಳಿದರು. ಆಮೇಲೆ ನಾವು ಹುಡುಕಾಟವನ್ನು ಪ್ರಾರಂಭ ಮಾಡಿದೆವು. ಭಾನುವಾರ ಶವವಾಗಿ ಪತ್ತೆಯಾಗಿದ್ದಾನೆ. ಇನ್ನಾದರೂ ಅನಾಹುತಗಳು ತಪ್ಪಬೇಕು. ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ತಾಲೂಕು ಆಡಳಿತ ನಮಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಮೃತ ಬಾಲಕನ ತಂದೆ ದಶಕಂಠ ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ
ಚಿರತೆ ದಾಳಿಗೆ ಬಲಿಯಾಗಿರುವ ಬಾಲಕ ಜಯಂತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಟಿ.ನರಸೀಪುರ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ನಡುವೆ ಚಿರತೆ ಸೆರೆ ಕಾರ್ಯಾಚರಣೆ ಚುರುಕುಗೊಂಡಿದೆ.
ಇದನ್ನೂ ಓದಿ: WhatsApp New Feature : ವಾಟ್ಸಾಪ್‌ನಲ್ಲಿ ನೀವಿನ್ನು ಒರಿಜಿನಲ್ ಸೈಜಿನಲ್ಲೇ ಇಮೇಜ್ ಕಳುಹಿಸಬಹುದು
ಕಂಡಲ್ಲಿ ಗುಂಡಿಕ್ಕಲು ಆದೇಶ
ಈಗಾಗಲೇ ಚಿರತೆ ಸೆರೆಗೆ ಕೂಂಬಿಂಗ್ ಪ್ರಾರಂಭಗೊಂದಿದೆ. ಅಲ್ಲದೆ, ಚಿರತೆಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲ್ಲು ಹಿರಿಯ ಅಧಿಕಾರಿಗಳು ಮೌಖಿಕ ಆದೇಶ ನೀಡಿದ್ದಾರೆ. ಇದೀಗ ಕಾರ್ಯಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಟಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಸಾರ್ವಜನಿಕರ ಸಹಕಾರ ಬೇಕು- ಮಾಲತಿ ಪ್ರಿಯ
ಹೊರಳಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ, ಚಿರತೆಗಳ ಹಾವಳಿ ತಪ್ಪಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಸಿಬ್ಬಂದಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಚಿರತೆಗಳು ಯಾವ ರೀತಿ ಬರುತ್ತಿವೆ ಎಂಬ ಮಾಹಿತಿ ನಮಗೆ ಸಿಗುತ್ತಿಲ್ಲ. ಚಿರತೆ ಸೆರೆಗೆ ಬೇಕಾದ ಎಲ್ಲ ಕ್ರಮಗಳನ್ನೂ ತೆಗೆದುಕೊಂಡಿದ್ದೇವೆ. ಸಾರ್ವಜನಿಕರು ಸಹ ನಮಗೆ ಸಹಕಾರ ನೀಡಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Heart Attack: ಹೃದಯಾಘಾತದಿಂದ ಎಎಸ್‌ಐ ಮೃತ್ಯು; 24 ಗಂಟೆ ಕೆಲಸ ಮಾಡಿದ್ದೇ ಸಾವಿಗೆ ಕಾರಣವಾಯ್ತಾ?
ಜಿಲ್ಲಾಧಿಕಾರಿ ಭೇಟಿ, ಸಾಂತ್ವನ
ಹೊರಳಹಳ್ಳಿಗೆ ಮೈಸೂರು ಜಿಲ್ಲಾಧಿಕಾರಿ ರಾಜೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದು ಜಿಲ್ಲಾಡಳಿತದ ಮೊದಲ ಸಮಸ್ಯೆ ಎಂದು ಪರಿಗಣಿಸಿದ್ದೇವೆ. ಕಬ್ಬು ಕಟಾವು ಮಾಡಲು ಫ್ಯಾಕ್ಟರಿಯವರ ಜತೆ ಸಭೆ ನಡೆಸುತ್ತೇನೆ. ಕೂಂಬಿಂಗ್ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕಗೊಳಿಸುತ್ತೇವೆ. ಸ್ಥಳೀಯರು ಸಾಕಷ್ಟು ಸಲಹೆಗಳನ್ನು ಕೊಟ್ಟಿದ್ದಾರೆ. ಅವರ ಸಲಹೆಗಳನ್ನು ಪರಿಗಣಿಸುತ್ತೇವೆ. ನಂತರ ಅವರನ್ನು ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುತ್ತೇವೆ. ಚಿರತೆ ಸೆರೆ ಅಥವಾ ಶೂಟ್ ಮಾಡುವವರೆಗೆ ಹಾಗೂ ಸಂಜೆ ವೇಳೆ ಆದಷ್ಟು ಜನರು ಮನೆಯಿಂದ ಹೊರಬರಬಾರದು. ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಸ್ಥಳೀಯರ ಪ್ರತಿಭಟನೆ
ಚಿರತೆ ದಾಳಿಯಿಂದ ಕಂಗೆಟ್ಟಿರುವ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಟಿ.ನರಸೀಪುರ ಚಾಮರಾಜನಗರ ರಸ್ತೆ ಸಂಪರ್ಕವನ್ನು ಬಂದ್ ಮಾಡಲಾಗಿದೆ. ಟಿ.ನರಸೀಪುರ ಸೇತುವೆಯಲ್ಲಿ ಪ್ರತಿಭಟನೆಗೆ ಕುಳಿತಿದ್ದು, ಕಿಲೋ ಮೀಟರ್‌ಗಟ್ಟಲೆ ವಾಹನಗಳು ನಿಂತು ಸಂಚಾರಕ್ಕೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು-ಚಾಮರಾಜನಗರ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್ ಆಗಿದೆ.