Site icon Vistara News

MP Renukacharya : ಶಿಸ್ತು ಸಮಿತಿ ನೋಟಿಸ್‌ಗೆ ಉತ್ತರ ಕೊಡಲ್ಲ, ಬಿಜೆಪಿ ಬಿಡಲ್ಲ; ರೇಣುಕಾಚಾರ್ಯ ಸವಾಲು

MP Renukacharya

ದಾವಣಗೆರೆ: ಬಿಜೆಪಿ ರಾಜ್ಯ ನಾಯಕತ್ವದ (BJP State Leadership) ವಿರುದ್ಧ ಸೆಡ್ಡು ಹೊಡೆದು ನಿಂತಿರುವ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ (MP Renukacharya) ಅವರು ಹೊಸ ಸವಾಲು ಹಾಕಿದ್ದಾರೆ. ಬಿಜೆಪಿಯ ಶಿಸ್ತು ಸಮಿತಿ (BJP Disciplinary Committee) ನೀಡಿರುವ ನೋಟಿಸ್‌ಗೆ (Disciplinary Notice) ಯಾವುದೇ ಉತ್ತರ ಕೊಡುವುದಿಲ್ಲ ಎಂದು ಹೇಳಿರುವ ಅವರು ಈ ರೇಣುಕಾಚಾರ್ಯನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

ಕಳೆದ ವಾರ ನಿರಂತರವಾಗಿ ಬಿಜೆಪಿ ನಾಯಕತ್ವವನ್ನು ಪ್ರಶ್ನಿಸಿದ್ದಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ರೇಣುಕಾಚಾರ್ಯ ಅವರಿಗೆ ರಾಜ್ಯ ಶಿಸ್ತು ಸಮಿತಿ ನೋಟಿಸ್‌ ನೀಡಿತ್ತು. ಒಂದು ವಾರದ ಒಳಗೆ ನೋಟಿಸ್‌ಗೆ ಉತ್ತರ ನೀಡುವಂತೆ ಆದೇಶ ಮಾಡಿತ್ತು.

ಆದರೆ, ಈ ನೋಟಿಸ್‌ ಬಂದ ಬಳಿಕವೂ ರೇಣುಕಾಚಾರ್ಯ ಅವರು ತಮ್ಮ ಬಂಡಾಯದ ಹೇಳಿಕೆಗಳನ್ನು ಮುಂದುವರಿಸಿದ್ದಾರೆ. ಬುಧವಾರ ಮತ್ತೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ ಅವರು, ಬಿಜೆಪಿ ಶಿಸ್ತು ಸಮಿತಿ ನೀಡಿರುವ ನೋಟಿಸ್‌ಗೆ ಉತ್ತರ ಕೊಡುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು.

ʻʻನೋಟಿಸ್‌ಗೆ ನಾನೇಕೆ ಉತ್ತರ ಕೊಡಬೇಕು? ನಾನೇನು ಬಿಜೆಪಿ ಪಕ್ಷದ, ಮೋದಿಯವರ ವಿರುದ್ಧ ಮಾತನಾಡಿದ್ದೇನಾ? ಬಿಜೆಪಿ ಕಚೇರಿಯಲ್ಲಿ 11 ಜನರಿಗೆ ನೋಟಿಸ್ ನೀಡಿದ್ದೇವೆ ಎಂದು ಹೇಳುತ್ತಾರೆ. ಹೊರಗೆ ಬಂದು ನನ್ನೊಬ್ಬನಿಗೆ ನೋಟಿಸ್ ಎಂದು ಹೇಳುತ್ತಾರೆ. ನನಗೆ ನೀಡಿದ ನೋಟಿಸ್‌ ಎಲ್ಲ ಕಡೆ ಹರಿಬಿಡಲಾಗುತ್ತದೆ. ಉಳಿದವರಿಗೆ ನೀಡಿದ ನೋಟಿಸ್‌ ಯಾಕೆ ಬಹಿರಂಗವಾಗುವುದಿಲ್ಲʼʼ ಎಂದು ಕೇಳಿರುವ ಅವರು, ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆ ಎಂಬುದೇ ನನಗೆ ಗೊತ್ತಿಲ್ಲ ಎಂದಿದ್ದಾರೆ. ನನ್ನ ಬಾಯಿಯನ್ನು ಯಾರಿಂದಲು ಮುಚ್ಚಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಮುಂದೆಯೂ ವಾಗ್ದಾಳಿ ನಡೆಸುವುದಾಗಿ ಸ್ಪಷ್ಟಪಡಿಸಿದರು.

ಬಿಜೆಪಿ ಬಿಡಲ್ಲ, ಕಾಂಗ್ರೆಸ್‌ಗೆ ಹೋಗೊಲ್ಲ

ʻʻಕಾಂಗ್ರೆಸ್ ಮುಖಂಡರ ಜೊತೆ ರಾಜಕೀಯ ಹೊರತಾದ ಉತ್ತಮ ಸ್ನೇಹ ಸಂಬಂಧವಿದೆ. ಶಾಮನೂರು ಶಿವಶಂಕರಪ್ಪನವರ ಜೊತೆಯಲ್ಲಿ ಮೈಸೂರಿಗೆ ವಿಮಾನದಲ್ಲಿ ಒಂದು ಬಾರಿ ಹೋಗಿದ್ದೆ. ಶಾಮನೂರು ಶಿವಶಂಕರಪ್ಪ ಅವರು ಪ್ರೀತಿಯಿಂದ ನನಗೆ ವಿಮಾನದಲ್ಲಿ ಬರುವಂತೆ ಆಹ್ವಾನ ನೀಡಿದ್ದರು. ಸಿದ್ದರಾಮಯ್ಯ ಮತ್ತು ಡಿಕೆಶಿಯವರಿಗೆ ನಾನು ಫೋನ್‌ ಮಾಡಿ ಸಮಯ ತೆಗೆದುಕೊಂಡು ಹೋಗಿ ಮಾತನಾಡಿದ್ದೇನೆ. ಹಾಗಂತ ನಾನು ಕಾಂಗ್ರೆಸ್‌ಗೆ ಹೋಗೊಲ್ಲ. ನಾನು ಬಿಜೆಪಿಯಲ್ಲೇ ಇರುತ್ತೇನೆʼʼ ಎಂದು ಹೇಳಿದರು.

ʻʻನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಪಕ್ಷವನ್ನು ಸದೃಢವಾಗಿ ಕಟ್ಟಲು ಸಮರ್ಥನಿದ್ದೇನೆ. ರಾಜ್ಯಾದ್ಯಂತ ಸುತ್ತಿ ಮತಗಳಾಗಿ ಪರಿವರ್ತನೆ ಮಾಡುವ ಶಕ್ತಿ‌ ನನ್ನಲ್ಲಿದೆʼʼ ಎಂದು ಹೇಳಿದ ಅವರು, ರಾಜ್ಯಾಧ್ಯಕ್ಷ ಪಟ್ಟ ನೀಡುವಂತೆ ಬೇಡಿಕೆಯಿಟ್ಟರು.

ರೇಣುಕಾಚಾರ್ಯ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆಯೇ ಬಿ.ಎಸ್‌. ಯಡಿಯೂರಪ್ಪ ಅವರು ಕರೆಸಿಕೊಂಡು ಮಾತನಾಡಿದ್ದರು. ಆದರೆ, ಬಿಎಸ್‌ವೈ ಅವರನ್ನು ಭೇಟಿ ಮಾಡಿದ ನಂತರವೂ ರೇಣುಕಾಚಾರ್ಯ ತಮ್ಮ ದಾಳಿ ಮುಂದುವರಿಸಿದ್ದಾರೆ.

ಈ ನಡುವೆ, ಬಿಜೆಪಿ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿರುವ ರೇಣುಕಾಚಾರ್ಯ ಅವರು ಕಾಂಗ್ರೆಸ್‌ ಸೇರಿ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುತ್ತಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಆದರೆ, ತಾನು ಕಾಂಗ್ರೆಸ್‌ ಸೇರುವ ಯೋಚನೆಯಲ್ಲಿಲ್ಲ ಎಂದಿದ್ದಾರೆ ರೇಣುಕಾಚಾರ್ಯ.

ಇದನ್ನೂ ಓದಿ: MP Renukacharya : BSYಗೆ ವಯಸ್ಸಾಯ್ತು ಅಂತ ಕಿತ್ತಾಕಿದ್ರಲ್ವಾ, ಈಗ ರಾಜ್ಯ ಸುತ್ತಲು ಬೇಕಾ; ಮತ್ತೆ ರೇಣುಕಾ ಗುಡುಗು

Exit mobile version