Site icon Vistara News

ಬೊಮ್ಮಾಯಿ ನೇತೃತ್ವದಲ್ಲಿ 50 ಸೀಟೂ ಬರಲ್ಲ ಎಂದು ಯಾರೂ ಹೇಳಿಲ್ಲ ಎಂದ ಕತ್ತಿ

Umesh katti

ವಿಜಯಪುರ: ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೊದರೆ ಐವತ್ತು ಸೀಟೂ ಬರಲ್ಲ ಎಂದು ಯಾವ ಶಾಸಕನೂ ಹೇಳಿಲ್ಲ… ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾನು ಕೂಡಾ ಸಿಎಂ ಆಕಾಂಕ್ಷಿ ಎಂಬ ತಮ್ಮ ಹಳೆ ಡಯಲಾಗನ್ನು ಪುನರುಚ್ಚರಿಸಿದರು. ʻʻಈಗಲೂ ಹೇಳ್ತೀನಿ, ನಾನು ಸಿಎಂ ಆಕಾಂಕ್ಷಿ. 75 ವರ್ಷಕ್ಕೂ ನಾನು ಆಕಾಂಕ್ಷಿ. ನಸೀಬು ಇದ್ರೆ ನಾಳೆನೇ ಸಿಎಂ ಆಗಬಹುದು.. 15 ವರ್ಷ ಆದ್ಮೇಲೆಯೂ ಸಿಎಂ ಸೀಟ್ ಬರಬಹುದು..ʼʼ ಎಂದರು ಕತ್ತಿ. ಆದರೆ, ಈಗ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿಯನ್ನು ಕಿತ್ತು ಹಾಕಿ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಕೇಳುವವ ನಾನಲ್ಲ ಎಂದರು. ʻʻನನಗೆ ಇನ್ನೂ ೧೫ ವರ್ಷದ ಅವಕಾಶವಿದೆ. ಹಾಗಾಗಿ ಅವಸರವೇನೂ ಇಲ್ಲʼʼ ಎಂದರು ೬೧ ವರ್ಷದ ಉಮೇಶ್‌ ಕತ್ತಿ.

ʻʻಬೊಮ್ಮಾಯಿ ಉತ್ತಮ ಆಡಳಿತ ನೀಡ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆʼʼ ಎಂದು ಸ್ಪಷ್ಟಪಡಿಸಿದ ಅವರು, ಅಮಿತ್‌ ಶಾ ಅವರು ಮೊನ್ನೆ ಬಂದಿದ್ದು ಖಾಸಗಿ ಕಾರ್ಯಕ್ರಮಕ್ಕೆ, ಡೇರಿ ಉದ್ಘಾಟನೆಗೆ ಅಂತ ನನಗೆ ಗೊತ್ತು. ಹೆಚ್ಚಿನ ಮಾಹಿತಿ ನಿಮಗೇ ಇರಬಹುದುʼ ಎಂದರು.

…ʻʻಬೊಮ್ಮಾಯಿ ಸರ್ಕಾರದ ಬಗ್ಗೆ ಬಿಜೆಪಿ ಶಾಸಕರಲ್ಲೇ ಅಸಮಾಧಾನ ಇದೆ ಎಂಬುದು ಸರಿಯಲ್ಲ. ನಾವ್ಯಾರೂ ಆ ತರ ಹೇಳಿಲ್ಲ. ಶಾಸಕರಂತೂ ಹೇಳೇ ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿʼʼ ಎಂದು ಗರಂ ಆದರು ಕತ್ತಿ. ಬೊಮ್ಮಾಯಿ ಅವರ ನೇತೃತ್ವದಲ್ಲೇ ಚುನಾವಣೆ ನಡೆದರೆ ಐವತ್ತು ಸೀಟು ಬರಲ್ಲ ಎಂದು ಶಾಸಕರು ಹೇಳಿದ್ದಾರೆ ಎಂಬುದು ಕೂಡಾ ಸುಳ್ಳು ಎನ್ನುವುದು ಕತ್ತಿ ಮಾತು.

ಅಪ್ಪನಂತ ಕಾರ್ಯಕ್ರಮ ಮಾಡ್ತೀವಿ..
ಸಿದ್ದರಾಮೋತ್ಸವ ಕಂಡು ಬಿಜೆಪಿ ನಾಯಕರಿಗೆ ನಡುಕ ಹುಟ್ಟಿದೆ ಎಂಬ ಅಭಿಪ್ರಾಯಗಳಿಗೆ ಉತ್ತರಿಸಿದ ಅವರು, ʻʻನಮಗ್ಯಾಕ್ರಿ ನಡುಕ ಹುಟ್ಟತದರೀ.. ಸಿದ್ದರಾಮಯ್ಯನ ಅಪ್ಪನಂತ ಕಾರ್ಯಕ್ರಮ ಹಿಂದೆಯೂ ಮಾಡಿದ್ದೇವೆ.. ಮುಂದೆಯೂ ಮಾಡ್ತೇವೆ..ʼʼ ಎಂದರು ಉಮೇಶ್‌. ʻʻಕಾರ್ಯಕ್ರಮ ರೂಪಿಸುವ ಬಗ್ಗೆ ಪಕ್ಷ ಚಿಂತನೆ ನಡೆಸಲಿದೆ. ಪಕ್ಷದ ಅಧ್ಯಕ್ಷರಿದ್ದಾರೆ.. ಅವರು ಚಿಂತನೆ ಮಾಡ್ತಾರೆ. ಅವರು ಏನು ಮಾರ್ಗದರ್ಶ ಮಾಡ್ತಾರೋ ಹಾಗೆ ನಾವು ಮಾಡ್ತೇವೆʼʼ ಎಂದರು.

ಸಿಗಬಹುದು ನೋಡೋಣ
ಮತ್ತೆ ಮತ್ತೆ ಸಿಎಂ ವಿಚಾರಕ್ಕೇ ಬರುವ ಉಮೇಶ್‌ ಕತ್ತಿ, ʻʻನನಗೆ ಸಿಎಂ ಆಗೋ ಅವಕಾಶ ಸಿಕ್ಕೇ ಸಿಗುತ್ತೆ. ನಾನು 9 ಬಾರಿ ಎಂಎಲ್‌ಎ ಆದೋನು. ಈ ಅವಧಿಯಲ್ಲಿ ಸಿಎಂ ಸ್ಥಾನದ ಬೇಡಿಕೆ ಇಲ್ಲ.. ಈಗ ಸಿಗಬೇಕು ಅಂತಾ ಆಸೆ ಇಲ್ಲ.. ನಮ್ಮವರೆ ಮುಖ್ಯಮಂತ್ರಿ ಇದ್ದಾರೆ, ಉತ್ತರ ಕರ್ನಾಟಕದವರೇ ಸಿಎಂ ಇದ್ದಾರೆ. ಹೀಗಾಗಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡೊಲ್ಲ. ಇನ್ನು 15 ವರ್ಷ ಟೈಂ ಇದೆ, ಮುಂದೆ‌ ಸಿಗಬಹುದಾ ನೋಡೋಣʼʼ ಎಂದರು ಕತ್ತಿ.

Exit mobile version