Site icon Vistara News

HD Kumaraswamy: ನಾನು ಕೇಂದ್ರ ಮಂತ್ರಿ ಆಗಲ್ಲ, ನನ್ನ ಗುರಿಯೇ ಬೇರೆ: ಎಚ್.ಡಿ. ಕುಮಾರಸ್ವಾಮಿ

HD Kumaraswamy statement on Union Minister

ಬೆಂಗಳೂರು: ನಾನು ಕೇಂದ್ರ ಮಂತ್ರಿ (Union Minister) ಆಗುವ ಬಗ್ಗೆ ಚಿಂತೆ ಮಾಡಿಲ್ಲ. ಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ರಾಜ್ಯದ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವುದೇ ನಮ್ಮ ಗುರಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸ್ಪಷ್ಟಪಡಿಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರದ ಕೃಷಿ ಹಾಗೂ ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ ಅವರನ್ನು ಬೀಳ್ಕೊಟ್ಟ ನಂತರ ಮಾಧ್ಯಮಗಳ ಜತೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ನಾನು ಇವು ಯಾವುದರ ಬಗ್ಗೆಯೂ ಚಿಂತೆ ಮಾಡಿಲ್ಲ. 28 ಕ್ಷೇತ್ರಗಳನ್ನು ಗೆಲ್ಲುವುದಷ್ಟೇ ನಮ್ಮ ಮೈತ್ರಿಕೂಟದ ಗುರಿ. ನನ್ನ ಮುಂದೆ ‌ಇರುವ ಏಕೈಕ ಅಜೆಂಡಾ ಎಂದರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದು ಎಂದು ಹೇಳಿದರು.

ಮಂತ್ರಿಯಾಗಿ ಏನು ಮಾಡಲಿ? ನನಗೆ ಆ ಸುದ್ದಿಯೇ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಈ ಸುದ್ದಿಯನ್ನು ಗಮನಿಸಿದ್ದೇನೆ. ನನಗೆ ಅ ಬಗ್ಗೆ ಆಸೆಯೂ ಇಲ್ಲ‌. ಅ ರೀತಿ ಚರ್ಚೆಯೇ ಆಗಿಲ್ಲ. ಮುಂದಿನ ಫೆಬ್ರವರಿ ತಿಂಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಆದರೆ ಏನು ಮಾಡುವುದು? ಕೇಂದ್ರ ಮಂತ್ರಿ ಆಗುವ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಆಸೆಯೂ ಇಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಸೊಕ್ಕಿನ ಮನುಷ್ಯ; ಸಿಎಂ ವಿರುದ್ಧ ಜೆಡಿಎಸ್‌ ಕಿಡಿ

ಜೆಡಿಎಸ್ ಅಂತ್ಯ ನಿಮ್ಮ ಕನಸು ಅಷ್ಟೇ. ಸೊಕ್ಕು ಎನ್ನುವುದು ನಿಮ್ಮ ಪೇಟೆಂಟ್. ಆ ನಿಮ್ಮ ಸದ್ಗುಣ(!?)ವನ್ನು ದೇವೇಗೌಡರಿಗೆ (HD Devegowda) ಅಂಟಿಸುವ ಪಾಪದ ಕೆಲಸ ಮಾಡಬೇಡಿ. ಕರ್ನಾಟಕದ ‘ಸೊಕ್ಕಿನ ಮನುಷ್ಯ’ ಅಂತ ಯಾರಾದರೂ ಇದ್ದರೆ ಅದು ತಾವೇ ಸಿದ್ದರಾಮಯ್ಯನವರೇ. ನಿಮ್ಮ ಪಕ್ಷದ ಪಡಸಾಲೆಗೆ ಬಂದರೆ ಅಲ್ಲಿರುವ ಪ್ರತಿ ಬಾಗಿಲು ನಿಮ್ಮ ಸೊಕ್ಕಿನ ಕಥೆಗಳನ್ನೇ ಹೇಳುತ್ತವೆ ಎಂದು ರಾಜ್ಯ ಜೆಡಿಎಸ್‌ (JDS Karnataka) ಘಟಕ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಬಗ್ಗೆ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಖಂಡಿಸಿರುವ ರಾಜ್ಯ ಜೆಡಿಎಸ್‌, ಈ ಸಂಬಂಧ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಕಿಡಿಕಾರಿದೆ. ಸಿದ್ದರಾಮಯ್ಯ ಅವರು ಕರ್ನಾಟಕದ ಸೊಕ್ಕಿನ ಮನುಷ್ಯ ಎಂದು ಟೀಕಾಪ್ರಹಾರ ನಡೆಸಿದೆ. ಅಲ್ಲದೆ, ನೈಸ್ ಯೋಜನೆಯನ್ನು (Nice Project) ಸರ್ಕಾರದ ವಶಕ್ಕೆ ಪಡೆಯಲು ಯಾವ ಅತೀಂದ್ರ ಶಕ್ತಿ ಅಡ್ಡವಿದೆ ಎಂದು ಪ್ರಶ್ನೆ ಮಾಡಿದೆ.

ಮಾಜಿ ಪ್ರಧಾನಿ‌ ಎಚ್‌.ಡಿ. ದೇವೇಗೌಡ ಅವರು ಹೇಳಿದ್ದರಲ್ಲಿ ಲವಲೇಶವೂ ಉತ್ಪ್ರೇಕ್ಷೆ ಇಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ. ಹೌದು, ದೇಶವನ್ನು ಜಾತಿ, ಧರ್ಮದಿಂದಲೇ ವಿಭಜಿಸಿ ಪ್ರಜಾಪ್ರಭುತ್ವವನ್ನೇ ಅಂತ್ಯ ಕಾಣಿಸಲು ಹೊರಟಿದ್ದ ಕಾಂಗ್ರೆಸ್, ಚರಿತ್ರೆಯ ಕೊನೇ ಪುಟದಲ್ಲಿ ಏದುಸಿರು ಬಿಡುತ್ತಿದೆ ಎಂದು ಜೆಡಿಎಸ್ ತಿರುಗೇಟು ನೀಡಿದೆ.

ಗೌಡರ ಕೈ ಅನುಗ್ರಹದ ದ್ಯೋತಕ

ಶಾಪ ಹಾಕುವುದನ್ನು ಗೌಡರೆಂದೂ ಮಾಡಿಲ್ಲ, ಮಾಡುವುದೂ ಇಲ್ಲ. ಅವರದ್ದು ಅಭಯ ಹಸ್ತ. ಅದು ಆಶೀರ್ವಾದ, ಅನುಗ್ರಹದ ದ್ಯೋತಕ. ಗುರುಸ್ವಾಮಿ ಎಂಬ ಅನಾಮಧೇಯ ವ್ಯಕ್ತಿ ಎದುರು ಸೋತ ನಿಮ್ಮನ್ನು ಅನುಗ್ರಹದಲ್ಲಿಯೇ ಅವರು ಅನುಗ್ರಹಿಸಿದ್ದು ಮರೆತಿರಾ? ಅಂದು ಆ ಕೈ ನಿಮ್ಮ ಕೈ ಹಿಡಿಯದಿದ್ದರೆ ನೀವಿಷ್ಟು ಎತ್ತರಕ್ಕೇರಲು ಸಾಧ್ಯವಿತ್ತೇ ಸಿದ್ದರಾಮಯ್ಯನವರೇ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಪ್ರಶ್ನಿಸಿದೆ.

ಅಪರ ಬ್ರೂಟಸ್ ಎಂದು ಕಿಡಿ

ಜಾತ್ಯತೀತತೆ ಎಂದು ನೀವಷ್ಟೇ ಹೇಳಬೇಕು ಸಿದ್ದರಾಮಯ್ಯನವರೇ? ಸಿಎಂ ಸಚಿವಾಲಯದ ಕೊಳಕು ಕೊಡವಿದರೆ ನಿಮ್ಮ ಢೋಂಗಿ ಜಾತ್ಯತೀತತೆಯ ಅಸಲಿ ಮುಖ ಕಳಚಿ ಬೀಳುತ್ತದೆ. ಅಭಿಪ್ರಾಯ, ಭಿನ್ನಾಭಿಪ್ರಾಯ, ಪ್ರಾಮಾಣಿಕತೆ, ಜಾತ್ಯತೀತತೆ.. ಈ ಪದಗಳೆಲ್ಲ ನಿಮಗೆ ಆಗಿ ಬರಲ್ಲ. ನಿಮ್ಮದೇನಿದ್ದರೂ ಏಕಾಭಿಪ್ರಾಯ. ಸರ್ವಾಧಿಕಾರ ಧೋರಣೆ, ತುಘಲಕ್ ಮನಃಸ್ಥಿತಿ. ದೇವೇಗೌಡರು ಸಾಮಾಜಿಕ ನ್ಯಾಯ, ಜಾತ್ಯತೀತತೆ, ನಂಬಿಕೆ, ವಿಶ್ವಾಸಾರ್ಹತೆ ಉಳ್ಳವರು ಆಗಿಲ್ಲದಿದ್ದಿದ್ದರೆ ನೀವು ಈವರೆಗೆ ಏನೇನೋ ಆಗಿದ್ದಿರಲ್ಲಾ… ಅದರಲ್ಲಿ ಏನೊಂದೂ ಆಗುತ್ತಿರಲಿಲ್ಲ. ನಿಮಗೆ ಏಣಿಯಾಗಿ, ಹೆಗಲಾಗಿದ್ದವರ ಬೆನ್ನಿಗಿರಿದ ‘ಅಪರ ಬ್ರೂಟಸ್’ ನೀವು. ಬೂಟಾಟಿಕೆ ಮಾಡಿಕೊಂಡೇ ರಾಜಕೀಯ ಬದುಕು ಕಟ್ಟಿಕೊಂಡವರು ನೀವು ಎಂದು ಜೆಡಿಎಸ್ ಕುಟುಕಿದೆ.

ಯಾರು, ಯಾರ ಸಂಗ ಮಾಡಿದ್ದರು? ಯಾವ ಗಾಳಿ ಯಾರಿಗೆ ಸೋಕಿತ್ತು? ನಿಮ್ಮ ಇಂಥ ಕಾಗಕ್ಕ,ಗೂಬ್ಬಕ್ಕ ಕಥೆಗಳ ಮೂಲಕ್ಕೆ ಹೋದರೆ ನೀವೇ ಬೆತ್ತಲೆ ಸ್ಥಿತಿಯಲ್ಲಿ ನಿಲ್ಲಬೇಕಾಗುತ್ತದೆ. ಅಂತಹ ಸ್ಥಿತಿ ತಂದುಕೊಳ್ಳಬೇಡಿ. ನಿಮ್ಮ ರಾಜಕೀಯ ಅಂತ್ಯಕಾಲ ಆನಂದವಾಗಿರಲಿ, ಅದಕ್ಕೆ ಕಳಂಕ ಮೆತ್ತಿಕೊಳ್ಳಬೇಡಿ ಎನ್ನುವುದು ನಮ್ಮ ಕಳಕಳಿಯ ಸಲಹೆ ಎಂದಿದೆ ಜೆಡಿಎಸ್.

ಸಿದ್ದಾರಮೆ ಆಟ ಎಲ್ಲರಿಗೂ ಗೊತ್ತು

ನಿಮ್ಮಂಥ ಆತ್ಮಸಾಕ್ಷಿ ಹೀನರು ಇದ್ದರೆ ಕಾಂಗ್ರೆಸ್ ಅಂತ್ಯವಾಗುತ್ತದೆ, ನಿಜ. ಜೆಡಿಎಸ್ ಪಕ್ಷವನ್ನು ಅಂತ್ಯ ಕಾಣಿಸಲು ನೀವು ಆಡುತ್ತಿರುವ ‘ಸಿದ್ದಾರಮೆ ಆಟ’ ಯಾರಿಗೆ ಗೊತ್ತಿಲ್ಲ? ಇವತ್ತಿಗೂ ಕತ್ತಲಾದೊಡನೆ ನಮ್ಮ ಪಕ್ಷದ ನಾಯಕರ ಮನೆಗಳ ಮುಂದೆ ಠಳಾಯಿಸುವ ನಿಮ್ಮ ಕತ್ತಲು ಗಿರಾಕಿಗಳ ಬಗ್ಗೆ ಹೇಳಬೇಕೆ? ಜೆಡಿಎಸ್ ಅಂತ್ಯ ನಿಮ್ಮ ಕನಸು ಅಷ್ಟೇ. ಸೊಕ್ಕು ಎನ್ನುವುದು ನಿಮ್ಮ ಪೇಟೆಂಟ್. ಆ ನಿಮ್ಮ ಸದ್ಗುಣ(!?)ವನ್ನು ದೇವೇಗೌಡರಿಗೆ ಅಂಟಿಸುವ ಪಾಪದ ಕೆಲಸ ಮಾಡಬೇಡಿ. ಕರ್ನಾಟಕದ ‘ಸೊಕ್ಕಿನ ಮನುಷ್ಯ’ ಅಂತ ಯಾರಾದರೂ ಇದ್ದರೆ ಅದು ತಾವೇ ಸಿದ್ಧರಾಮಯ್ಯನವರೇ. ನಿಮ್ಮ ಪಕ್ಷದ ಪಡಸಾಲೆಗೆ ಬಂದರೆ ಅಲ್ಲಿರುವ ಪ್ರತಿ ಬಾಗಿಲು ನಿಮ್ಮ ಸೊಕ್ಕಿನ ಕಥೆಗಳನ್ನೇ ಹೇಳುತ್ತವೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಜನಾದೇಶವನ್ನು ದೇವೇಗೌಡರು ಎಂದೂ ಧಿಕ್ಕರಿಸಿಲ್ಲ. ಶಿರಸಾ ವಹಿಸಿದ್ದಾರೆ. ಅಂತಹ ಆಚಾರ, ವಿಚಾರ, ಸದ್ವಿಚಾರ, ಶಿಷ್ಟಾಚಾರವನ್ನು ನಿಮಗೆ ಕಲಿಸಿದ್ದೇ ಅವರು. ಆದರೆ, ಅಡ್ಡದಾರಿ ಆಯ್ಕೆ ಮಾಡಿಕೊಂಡ ನಿಮಗೆ ಇವೆಲ್ಲ ರುಚಿಸುತ್ತಿಲ್ಲ. ಸದ್ಯಕ್ಕೆ ನಿಮಗೆ ನೆಲ ಕಾಣುತ್ತಿಲ್ಲ. ನೆಲವೇ ಬುದ್ಧಿ ಕಲಿಸುವ ಕಾಲ ಹತ್ತಿರದಲ್ಲಿದೆ. ಕಾಲ ಕ್ಷಣಿಕ. ಜೆಡಿಎಸ್, ಬಿಜೆಪಿ ಬಿ ಟೀಮ್ ಎನ್ನುವ ನೀವು ಚುನಾವಣೆ ಬಂದಾಗಲೆಲ್ಲ ಮಾಡುವ ಮೊದಲ ಕೆಲಸ ಮ್ಯಾಚ್ ಫಿಕ್ಸಿಂಗ್ & ಇನ್ನೊಂದು ಟೀಮ್‌ಗೆ ಬಾಲಂಗೋಚಿ ಆಗುವುದು. 2023ರ ವಿಧಾನಸಭೆ ಚುನಾವಣೆಯಲ್ಲೂ ಇದೇ ಆಟ ಆಡಿದಿರಿ. ಆ ನಿಮ್ಮ ರಂಗಿನಾಟ, ಕಳ್ಳಾಟ ದೇಶ ರಾಜಕಾರಣಕ್ಕೆ ಮಾದರಿ!! ಏನಂತೀರಿ? ಎಂದು ಜೆಡಿಎಸ್ ಕೇಳಿದೆ.

ಇದನ್ನೂ ಓದಿ: Hariprakash Konemane: ನೈತಿಕ ಪೊಲೀಸ್‌ಗಿರಿ ತಡೆ ಕಾಯ್ದೆ ಹಿಂದುಗಳಿಗೆ ಮಾತ್ರವೇ? ಸರ್ಕಾರಕ್ಕೆ ಹರಿಪ್ರಕಾಶ್‌ ಕೋಣೆಮನೆ ಚಾಟಿ

ನೈಸ್‌ಗೆ ‘ಅತೀಂದ್ರ ಶಕ್ತಿ’ ಅಡ್ಡವಾಗಿ ಕೂತಿದೆಯಾ?

ದೇವೇಗೌಡರು ಕೇಳಿದ್ದು ನೈಸ್ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಿರಿ ಎಂದು. ಅವರು ಅದನ್ನೇ ಆಗ್ರಹಿಸಿ ಪತ್ರ ಬರೆದಿದ್ದರು. ನೀವು ಆ ಪಾಯಿಂಟ್‌ಗೇ ಬರುತ್ತಿಲ್ಲ. ಸತ್ಯದ ಸೊಲ್ಲೆತ್ತದೆ ಸೈಲಂಟಾಗಿ ನೈಸ್ ಅನ್ನು ಪಕ್ಕಕ್ಕೆ ಸರಿಸುತ್ತಿದ್ದೀರಿ. ಯಾಕೆ? ಹೇಳಿಬಿಡಿ ಕಾರಣ. ನೈಸ್ ಯೋಜನೆ ಸರ್ಕಾರದ ವಶಕ್ಕೆ ಪಡೆಯುವುದು ನಿಮಗೆ ಇಷ್ಟ ಇಲ್ಲದಿದ್ದರೆ ಹೇಳಿ? ಆ ಕಳಂಕ, ಆ ಕಪ್ಪುಚುಕ್ಕೆ ಹೊತ್ತುಕೊಂಡೇ ರಾಜಕೀಯ ಅಂತ್ಯ ಕಾಣಬೇಕೆ? ನಿಮ್ಮ ಹಣೆಯಲ್ಲಿ ಹಾಗೆಯೇ ಬರೆದಿದ್ದರೆ ಯಾರು ಏನು ಮಾಡಿಯಾರು? ಅಲ್ಲಿಯೂ ಯಾವುದಾದರೂ ‘ಅತೀಂದ್ರ ಶಕ್ತಿ’ ಅಡಗಿ ಕೂತಿದೆಯಾ? ನಿಮ್ಮ ಮೌನ ಆ ಅನುಮಾನಕ್ಕೆ ಕಾರಣ. ದಯಮಾಡಿ ಮಾತನಾಡಿ ಎಂದು‌ ಜೆಡಿಎಸ್‌ ಒತ್ತಾಯ ಮಾಡಿದೆ.

Exit mobile version