ಹುಬ್ಬಳ್ಳಿ: ʻʻಚುನಾವಣೆಯ ವೇಳೆ ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರಂಟಿಗಳನ್ನು (Congress Guarantee) ಜಾರಿಗೆ ತಂದೇ ತರುತ್ತದೆ. ಒಂದೊಮ್ಮೆ ಗ್ಯಾರಂಟಿ ಸ್ಕೀಮ್ ಜಾರಿಯಾಗದೆ ಹೋದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆʼʼ- ಹೀಗೆಂದು ಹೇಳಿದ್ದಾರೆ ನವಲಗುಂದ ಕಾಂಗ್ರೆಸ್ ಶಾಸಕ ಎನ್.ಎಚ್. ಕೋನರೆಡ್ಡಿ (NH Konareddy)
ರಾಜ್ಯಾದ್ಯಂತ ಗ್ಯಾರಂಟಿಗಳ ಜಾರಿಗೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ಜನರಿಗೆ ಭರವಸೆ ಮೂಡಿಸುವ ನಿಟ್ಟಿನಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.
ʻʻಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಒಂದು ವೇಳೆ ಜಾರಿ ಮಾಡದೆ ಹೋದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ, ಜನರಿಗೆ ಅಷ್ಟು ಗ್ಯಾರಂಟಿ ನಾನು ಕೊಡ್ತೀನಿʼʼ ʼʼ ಎಂದು ಕೋನ ರೆಡ್ಡಿ ಹೇಳಿದರು.
ಗ್ಯಾರಂಟಿ ಜಾರಿಗೆ ಬಿಜೆಪಿ ಒತ್ತಡ ಹಾಕುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻಬಿಜೆಪಿಗೆ ಯಾಕೆ ಇಷ್ಟು ಅವಸರ? ಐದು ವರ್ಷದಲ್ಲಿ ಒಂದೂ ಒಳ್ಳೆ ಕೆಲಸ ಮಾಡಿಲ್ಲ ಅವರು. ಈಗಷ್ಟೆ ಸರ್ಕಾರ ರಚನೆ ಆಗಿದೆ. ಅದಕ್ಕೊಂದು ಕಾಲಾವಕಾಶ ಬೇಕು, ಅಂಕಿ ಅಂಶ ಬೇಕುʼʼ ಎಂದು ಹೇಳಿದರು ಕೋನ ರೆಡ್ಡಿ.
ʻʻಕೊಟ್ಟ ಗ್ಯಾರಂಟಿಗಳನ್ನು 100ಕ್ಕೆ 100 ಜಾರಿ ಮಾಡುತ್ತೇವೆ. ಎಷ್ಟೇ ಹಣ ಖರ್ಚಾದ್ರೂ ನಮ್ಮ ನಾಯಕರು ಜಾರಿ ಮಾಡ್ತೀವಿ ಎಂದಿದ್ದಾರೆʼʼ ಎಂದು ಹೇಳಿದ ಅವರು, ʻʻಬಿಜೆಪಿಯವರು 15 ಲಕ್ಷ ಅಕೌಂಟ್‌ಗೆ ಹಾಕ್ತೀನಿ ಅಂದ್ರು, 2 ಕೋಟಿ ಉದ್ಯೋಗ ಕೊಡ್ತೀನಿ ಅಂದ್ರು. ಅದನ್ನು ಯಾರೂ ಕೇಳೋದಿಲ್ಲ ಎಂದರು.
ಆರೆಸ್ಸೆಸ್, ಬಜರಂಗ ದಳ ನಿಷೇಧದ ಬಗ್ಗೆ ನಾನು ಮಾತಾಡಲ್ಲ ಎಂದರು ಕೋನರೆಡ್ಡಿ.
ಅವಕಾಶ ಕೊಟ್ಟರೆ ಮಂತ್ರಿಯಾಗುತ್ತೇನೆ
ʻʻಸಂಪುಟ ವಿಸ್ತರಣೆ, ಹೊಸ ಸಚಿವ ಪ್ರಮಾಣವಚನ ಶನಿವಾರ ನಡೆಯಲಿದೆ. ನಾಳೆಯ ಲಿಸ್ಟ್‌ನಲ್ಲಿ ಬಂದ್ರೆ ಮಂತ್ರಿ ಸ್ಥಾನ ತೆಗೆದುಕೊಳ್ಳುತ್ತೇನೆ. ಧಾರವಾಡ ಜಿಲ್ಲೆಯಲ್ಲಿ ಹಿರಿಯರಿದ್ದಾರೆ, ಸಂತೋಷ್ ಲಾಡ್, ವಿನಯ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ ಇದ್ದಾರೆ. ಮುಂದೆ ಯುವಕರನ್ನು ಮಾಡೋ ಅವಕಾಶ ಸಿಕ್ರೆ, ನನಗೆ ಒಮ್ಮೆ ಕೃಷಿ ಸಚಿವನಾಗಬೇಕೆಂಬ ಬಯಕೆ ಇದೆʼʼ ಎಂದ ಕೋನರೆಡ್ಡಿ, ಸಚಿವರ ಆಯ್ಕೆಯಲ್ಲಿ ಮುಖ್ಯಮಂತ್ರಿಗಳದೇ ಪರಮಾಧಿಕಾರ. ಅವರ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿದರು.
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಪ್ರಕಟಿಸುವ ಮೊದಲೇ ಐದು ಗ್ಯಾರಂಟಿಗಳನ್ನು ಜನರ ಮನೆ ಮನೆಗೆ ತಲುಪಿಸಿತ್ತು. ಪ್ರತಿಯೊಂದು ಮನೆಗೆ 200 ಯುನಿಟ್ ವಿದ್ಯುತ್, ಮನೆಯ ಯಜಮಾನ ಮಹಿಳೆಗೆ ತಿಂಗಳಿಗೆ 2000 ರೂ., ಪ್ರತಿಯೊಬ್ಬ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಅಕ್ಕಿ, ವಿದ್ಯಾವಂತ ನಿರುದ್ಯೋಗಿಗಳಿಗೆ 3000/ 1500 ರೂ. ಮತ್ತು ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಗ್ಯಾರಂಟಿಗಳನ್ನು ನೀಡಿತ್ತು. ಅದನ್ನು ಕೂಡಲೇ ಜಾರಿಗೆ ತರಬೇಕು ಎಂಬ ಕೂಗು ಜೋರಾಗಿದೆ.
ಇದನ್ನೂ ಓದಿ : Congress Guarantee: ಗ್ಯಾರಂಟಿ ಈಡೇರಿಸದಿದ್ದರೆ ಮಹಿಳೆಯರು ಬೀದಿಗೆ ಬರೋದು ಗ್ಯಾರಂಟಿ ಎಂದ ಬೊಮ್ಮಾಯಿ
ಇದನ್ನೂ ಓದಿ : Congress Guarantee: ನಾನು ಕರೆಂಟ್ ಬಿಲ್ ಕಟ್ಟಲ್ಲ: ಮಾಜಿ ಸಚಿವ ಆರ್. ಅಶೋಕ್ ಘೋಷಣೆ