Site icon Vistara News

Shalini Rajneesh: ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್‌ ನೇಮಕ; ಪತಿ ಜಾಗಕ್ಕೆ ಪತ್ನಿಯ ಆಯ್ಕೆ

shalini rajneesh

IAS Officer Shalini Rajneesh Appointed As Chief Secretary Of Karnataka

ಬೆಂಗಳೂರು: ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ಐಎಎಸ್‌ ಅಧಿಕಾರಿ ಶಾಲಿನಿ ರಜನೀಶ್‌ (Shalini Rajneesh) ಅವರನ್ನು ಕರ್ನಾಟಕ ಸರ್ಕಾರ (Chief Secretary Of Karnataka) ನೇಮಕ ಮಾಡಿದೆ. ಹಾಲಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ (Rajneesh Goel) ಅವರ ಅಧಿಕಾರದ ಅವಧಿಯು ಜುಲೈ 31ಕ್ಕೆ ಮುಗಿಯುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶಾಲಿನಿ ರಜನೀಶ್‌ ಅವರನ್ನು ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿದೆ. ಶಾಲಿನಿ ರಜನೀಶ್‌ ಅವರು ರಜನೀಶ್‌ ಗೋಯಲ್‌ ಅವರ ಪತ್ನಿ ಎಂಬುದು ಗಮನಾರ್ಹ ಸಂಗತಿಯಾಗಿದೆ.

ರಜನೀಶ್‌ ಗೋಯಲ್‌ ಅವರು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಜುಲೈ 31ಕ್ಕೆ ಅವರ ಅಧಿಕಾರದ ಅವಧಿ ಮುಗಿಯಲಿದೆ. ಇನ್ನು, ಶಾಲಿನಿ ರಜನೀಶ್‌ ಅವರು ಈಗ ಅಭಿವೃದ್ಧಿ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅವರಿಗೆ ಜ್ಯೇಷ್ಠತೆಯ ಆಧಾರದ ಮೇಲೆ ಮುಂಬಡ್ತಿ ನೀಡಲಾಗಿದೆ. ರಜನೀಶ್‌ ಗೋಯಲ್‌ ಅವರ ನಂತರ ಜ್ಯೇಷ್ಠತೆಯ ಆಧಾರದ ಮೇಲೆ ರೇಸ್‌ನಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಜಯ್‌ ಸೇಠ್‌ ಹಾಗೂ ಶಾಲಿನಿ ರಜನೀಶ್‌ ಅವರಿದ್ದರು. ಈಗ ರಾಜ್ಯ ಸರ್ಕಾರವು ಶಾಲಿನಿ ರಜನೀಶ್‌ ಅವರಿಗೇ ಮಣೆ ಹಾಕಿದೆ. 2027ರ ಜೂನ್‌ಗೆ ಇವರು ನಿವೃತ್ತಿ ಹೊಂದಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸಚಿವ ಎಚ್‌.ಕೆ. ಪಾಟೀಲ್‌ ಅವರು ಶಾಲಿನಿ ರಜನೀಶ್‌ ಅವರ ನೇಮಕದ ಕುರಿತು ಮಾಹಿತಿ ನೀಡಿದರು. “ರಜನೀಶ್‌ ಗೋಯಲ್‌ ಅವರ ಅಧಿಕಾರದ ಅವಧಿ ಮುಗಿದ ಕಾರಣ ಅವರನ್ನು ಬೀಳ್ಕೊಡಲಾಗುತ್ತದೆ. ಇನ್ನು, ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನಾಗಿ ಶಾಲಿನಿ ರಜನೀಶ್‌ ಅವರನ್ನು ನೇಮಕ ಮಾಡಲಾಗಿದೆ” ಎಂಬುದಾಗಿ ಅವರು ತಿಳಿಸಿದರು.

ಅಜಯ್‌ ಸೇಠ್‌ ಅವರು ಇನ್ನು 11 ತಿಂಗಳು ಮಾತ್ರ ಅಧಿಕಾರದಲ್ಲಿ ಇರುವುದರಿಂದ ರಾಜ್ಯ ಸರ್ಕಾರವು ಶಾಲಿನಿ ರಜನೀಶ್‌ ಅವರನ್ನು ನೇಮಕ ಮಾಡಿದೆ ಎಂದು ತಿಳಿದುಬಂದಿದೆ. ಅಭಿವೃದ್ಧಿ ಆಯುಕ್ತರಾಗಿ ಶಾಲಿನಿ ರಜನೀಶ್‌ ಅವರ ಕಾರ್ಯವೈಖರಿಯು ರಾಜ್ಯ ಸರ್ಕಾರಕ್ಕೆ ಇಷ್ಟವಾಗಿದೆ. ಇದೇ ಕಾರಣಕ್ಕಾಗಿ ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ದ್ವಿತೀಯ ದಂಪತಿ ಎಂಬ ಖ್ಯಾತಿಗೆ ಶಾಲಿನಿ ರಜನೀಶ್‌ ಹಾಗೂ ರಜನೀಶ್‌ ಗೋಯಲ್‌ ಪಾತ್ರರಾದರು. ಇದಕ್ಕೂ ಮೊದಲು ಬಿ.ಕೆ.ಭಟ್ಟಾಚಾರ್ಯ ಹಾಗೂ ತೆರೇಸಾ ಭಟ್ಟಾಚಾರ್ಯ ದಂಪತಿಯು ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿದ್ದರು.

ಇದನ್ನೂ ಓದಿ: Lokayukta: ಲೋಕಾಯುಕ್ತ ಎಡಿಜಿಪಿಯಾಗಿ ಮನೀಶ್‌ ಕರ್ಬೀಕರ್‌, ಅಗ್ನಿಶಾಮಕ ದಳ ಡಿಜಿಪಿಯಾಗಿ ಪ್ರಶಾಂತ್ ಕುಮಾರ್ ಥಾಕೂರ್‌ ನೇಮಕ

Exit mobile version