ಬೆಂಗಳೂರು: ವಿದ್ಯುತ್‌ಚಾಲಿತ ವಾಹನಗಳಿಗೆ (EV) ಅತ್ಯಗತ್ಯವಾದ ಲೀಥಿಯಂ-ಐಯಾನ್ ಬ್ಯಾಟರಿಗಳ ಉತ್ಪಾದನೆಗೆ ಜಾಗತಿಕ ಮಟ್ಟದ ಹೆಸರು ಮಾಡಿರುವ ಇಂಟರ್‌ನ್ಯಾಷನಲ್ ಬ್ಯಾಟರಿ ಕಂಪನಿಯು(IBC Investment) ಕರ್ನಾಟಕದಲ್ಲಿ 8 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ನಿರ್ಧರಿಸಿದೆ. ಇದಕ್ಕಾಗಿ ಕರ್ನಾಟಕ ಸರ್ಕಾರ ಹಾಗೂ ಐಬಿಸಿಯು ಒಡಂಬಡಿಕೆ (MoU) ಮಾಡಿಕೊಂಡಿದೆ. ಇದರಿಂದಾಗಿ ವಿದ್ಯುತ್‌ಚಾಲಿತ ವಾಹನಗಳ ಬಳಕೆಗೆ ಉತ್ತೇಜನ, ಉದ್ಯಮದ ಏಳಿಗೆ ಸೇರಿ ಹಲವು ದಿಸೆಯಲ್ಲಿ ರಾಜ್ಯಕ್ಕೆ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.
“ಲೀಥಿಯಂ ಕೋಶಗಳ ತಯಾರಿಕೆಗೆ ಹೆಸರಾಗಿರುವ ಇಂಟರ್ ನ್ಯಾಷನಲ್ ಬ್ಯಾಟರಿ ಕಂಪನಿಯು ಕರ್ನಾಟಕದಲ್ಲಿ 8 ಸಾವಿರ ಕೋಟಿ ರೂ. ಕೋಟಿ ಹೂಡಿಕೆ ಮಾಡಲು ಆಸಕ್ತಿ ತೋರಿದೆ. ಈ ಕುರಿತಂತೆ ಇಂದು ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ರಾಜ್ಯದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ IBC ತನ್ನ ಸ್ಥಾವರ ನಿರ್ಮಿಸಲಿದೆ. ಭವಿಷ್ಯದಲ್ಲಿ ಹಸಿರು ಇಂಧನ ಕ್ಷೇತ್ರದಲ್ಲಿ ರಾಜ್ಯ ಮಹತ್ತರ ಸಾಧನೆ ಮಾಡಲಿದೆ ಎಂಬ ವಿಶ್ವಾಸ ಮೂಡಿಸಿದೆ” ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: Tesla CEO Elon Musk : ಕರ್ನಾಟಕದಲ್ಲಿ ಹೂಡಿಕೆಗೆ ಎಲಾನ್ ಮಸ್ಕ್‌ಗೆ ರಾಜ್ಯ ಸರ್ಕಾರ ಆಹ್ವಾನ, ಕೊಟ್ಟಿರುವ ಆಫರ್ ಏನು?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಐಬಿಸಿಯು 100 ಎಕರೆ ಜಾಗದಲ್ಲಿ ಬ್ಯಾಟರಿ ಉತ್ಪಾದನೆ ಘಟಕ ಸ್ಥಾಪಿಸಲಿದೆ. “ಕರ್ನಾಟಕದಲ್ಲಿ ಐಬಿಸಿಯು ಬ್ಯಾಟರಿ ಉತ್ಪಾದನೆ ಘಟಕ ಸ್ಥಾಪಿಸಿದರೆ ರಾಜ್ಯದಲ್ಲಿ ಎರಡನೇ ಘಟಕದ ಕನಸು ನನಸಾದಂತಾಗಲಿದೆ. ಅಲ್ಲದೆ, ದೇಶದಲ್ಲಿ ವಿದ್ಯುತ್‌ಚಾಲಿತ ವಾಹನಗಳ ಬ್ಯಾಟರಿ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿರಲಿದೆ” ಎಂದು ಎಂ.ಬಿ. ಪಾಟೀಲ್ ತಿಳಿಸಿದರು.
ಐಬಿಸಿಯು ಮರುಬಳಕೆ ಮಾಡಬಹುದಾದ ಬ್ಯಾಟರಿಗಳನ್ನು ಉತ್ಪಾದನೆ ಮಾಡಲಿದೆ. ಎಂಟು ಸಾವಿರ ಕೋಟಿ ರೂ. ಹೂಡಿಕೆಯು ಭೂಸ್ವಾಧೀನ, ಘಟಕ ಸ್ಥಾಪನೆ, ಯಂತ್ರೋಪಕರಣ ಹಾಗೂ ನಿರ್ಮಾಣವನ್ನು ಒಳಗೊಂಡಿದೆ. ಕರ್ನಾಟಕದಲ್ಲಿ ಈಗಾಗಲೇ ವಿದ್ಯುತ್‌ಚಾಲಿತ ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಖರೀದಿ ಹೆಚ್ಚಾಗಿದೆ. ಹಾಗಾಗಿ, ಲೀಥಿಯಂ ಬ್ಯಾಟರಿ ಉತ್ಪಾದನೆ ಘಟಕ ಸ್ಥಾಪನೆಯಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ.